ಶಿಕ್ಷಕರ ಕ್ಷೇತ್ರದ ಗೆಲವು ಲೋಕಸಭಾ ಚುನಾವಣೆಗೆ ದಿಕ್ಸೂಚಿ

KannadaprabhaNewsNetwork | Published : Mar 11, 2024 1:20 AM

ಸಾರಾಂಶ

ರಾಮನಗರ: ಬಿಜೆಪಿ - ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಪುಟ್ಟಣ್ಣರವರ ಗೆಲುವೇ ಸಾಕ್ಷಿಯಾಗಿದೆ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಮನಗರ: ಬಿಜೆಪಿ - ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಜನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಪುಟ್ಟಣ್ಣರವರ ಗೆಲುವೇ ಸಾಕ್ಷಿಯಾಗಿದೆ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಂಗೇರಿ ಸೂಲಿಕೆರೆ ಬಳಿ ಭಾನುವಾರ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಪುಟ್ಟಣ್ಣರವರು ಐದನೇ ಬಾರಿಗೆ ಆಯ್ಕೆಯಾಗಲು ಶ್ರಮಿಸಿದ ಶಿಕ್ಷಕರು, ಅಧ್ಯಾಪಕರು, ಶಾಲಾ - ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರು , ಸ್ನೇಹಿತರು, ಹಿತೈಷಿಗಳು ಮತ್ತು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಜ್ಞಾವಂತ ಶಿಕ್ಷಕರಾದ ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡಿರುವ ಫಲವಾಗಿಯೇ ಪುಟ್ಟಣ್ಣ ಅವರನ್ನು ಐದು ಬಾರಿ ಆಯ್ಕೆ ಮಾಡಿದ್ದೀರಿ. ಮಾಜಿ ಸಿಎಂ ಕುಮಾರಸ್ವಾಮಿಯವರೇ ಹೇಳಿದಂತೆ ರಾಜ್ಯದಲ್ಲಿ ಅಪವಿತ್ರ ಮೈತ್ರಿ ವಿರುದ್ಧ ಜಯ ಸಾಧಿಸಿರುವುದರಿಂದ ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.

ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ :

ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಶಿಕ್ಷಕರ ಪ್ರತಿನಿಧಿಗಳು, ಆರ್ಥಿಕ ಇಲಾಖೆಯೊಂದಿಗೆ ಕೂಡಲೇ ಸಭೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿರವರು ರಾಜ್ಯದಲ್ಲಿ ರ್ಯಾಲಿ ಮಾಡಿದ್ದರು. ಆಗ ನಾವು 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆವು. ನಾಲ್ಕು ವರ್ಷ ಲೂಟಿ ಮಾಡಿದವರಿಗೆ ಜನರು ಬುದ್ದಿ ಕಲಿಸಲಿದ್ದಾರೆ ಎಂದು ಮೈತ್ರಿ ವಿರುದ್ದ ಕಿಡಿಕಾರಿದರು.

ಕರ್ನಾಟಕದಿಂದ 4 ಲಕ್ಷ 30 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ. ಈಗ ರಾಜ್ಯದ ಪಾಲನ್ನು ಕೇಳಿದರೆ ವಿರೋಧ ಪಕ್ಷಗಳು ತಿರುಗಿ ಬೀಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ - ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಒಪ್ಪದೆ ಪುಟ್ಟಣ್ಣ ಅವರನ್ನು ಗೆಲ್ಲಿಸುವ ಮೂಲಕ ಶಿಕ್ಷಕರು ಪ್ರಜ್ಞಾವಂತರು ಎಂಬುದನ್ನು ಸಾಬೀತು ಪಡಿಸಿದ್ದೀರಿ. ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ ನೀಡಿದೆ ಎಂದು ಶಿಕ್ಷಕರ ತೀರ್ಮಾನವನ್ನು ಸ್ವಾಗತಿಸಿದರು.

ಶಿಕ್ಷಕರು ತೆಗೆದು ಕೊಳ್ಳುವ ತೀರ್ಮಾನ ರಾಜ್ಯದಲ್ಲಿ ಒಂದು‌ ಸಂದೇಶ ನೀಡುವಂತಿರಬೇಕು. ನಿಮ್ಮ ಬಗ್ಗೆ ಸಹಾನುಭೂತಿಯಿದೆ. ತಾಳ್ಮೆ ಕಳೆದುಕೊಳ್ಳಬೇಡಿ ನಿಮ್ಮ ಸಮಸ್ಯೆಗೆ ನಾವು ಸ್ಪಂದಿಸುವ ಕೆಲಸ ಮಾಡುತ್ತೇವೆ. ಜೊತೆಗೆ ರಾಜ್ಯದಲ್ಲಿ 2 ಸಾವಿರ ಶಾಲೆಗಳನ್ನು ಸಿಎಸ್ ಆರ್ ಅನುದಾನದಲ್ಲಿ ಕಟ್ಟುವ ಹೊಣೆಗಾರಿಕೆ ನಮ್ಮ‌ ಮೇಲಿದೆ ಎಂದರು.

ರಾಜ್ಯದಲ್ಲಿ ವಿರೋಧ ಪಕ್ಷದವರ ಮೈತ್ರಿ ರಾಜಕಾರಣ ಅಸಹ್ಯ ಹುಟ್ಟಿಸುತ್ತಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ತಿರುಕನ‌ ಕನಸು ಕಾಣುತ್ತಿದ್ದಾರೆ. ಪದವೀಧರ ಕ್ಷೇತ್ರ ಮತ್ತು ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿನಲ್ಲಿ ನೀವು ಸಹಕಾರ ನೀಡಿ ನಮಗೆ ಶಕ್ತಿ ತುಂಬಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ,ಮಾತನಾಡಿ 2002ರಲ್ಲಿ ನನಗೆ ಸಿದ್ದರಾಮಯ್ಯ ಅವರು ಬಿ.ಫಾರಂ ನೀಡಿದರು. ನನಗೆ ಶಿಕ್ಷಕರೇ ದೇವರಾಗಿದ್ದು, 5 ಬಾರಿ ನನಗೆ ಆಶ್ರೀವಾದ ಮಾಡಿದ್ದಾರೆ. ನೀವು ನನಗೆ ಮತ ಹಾಕಿ ನೀವು ಗೆದ್ದೀದ್ದೀರಿ. ನಿಮ್ಮ ಸೇವೆ ಮಾಡುವ ಮೂಲಕ ಋಣ ತೀರಿಸುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನುಡಿದಂತೆ ನಡೆಯುವ ನಾಯಕರು. ಹಳೇ ಪಿಂಚಿಣಿ ಜಾರಿ, ಅನುದಾನ ರಹಿತ ಬೋಧಕ ಬೋಧಕೇತರ ವರ್ಗ ಆರೋಗ್ಯ ವಿಮೆ, ಖಾಸಗಿ ಆಡಳಿತ ಮಂಡಳಿಗಳ ಸಮಸ್ಯೆ ಬಗೆಹರಿಸುವುದು, 2016 ರ ವೃಂದ ಪದನ್ನೋತಿ, ಕಾಲಮಿತಿ ಬಡ್ತಿ ಮಾಡಬೇಕು, ಶಿಕ್ಷಕರ ರಕ್ಷಣಾ ಕಾಯ್ದೆ ತರಬೇಕು, ವೈದ್ಯನಾಥನ್ ಜಾರಿ ಮಾಡಬೇಕೆಂಬ ಹಲವು ಬೇಡಿಕೆಗಳ ಬಗ್ಗೆ ಪುಟ್ಟಣ್ಣರವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕೃಷಿ ಸಚಿವ ಚಲುವರಾಯ ಸ್ವಾಮಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ, ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ಆನೇಕಲ್ ರಾಮೋಜಿಗೌಡ, ತುಮಕೂರು ಡಿ.ಟಿ.ಶ್ರೀನಿವಾಸ್ , ಪ್ರಮುಖರಾದ ಕುಸುಮ‌ ಹನುಮಂತರಾಯಪ್ಪ,ರಾಮಕೃಷ್ಣ, , ಮಧುಮತಿ, ಸತ್ಯಮೂರ್ತಿ, ಶಿವಣ್ಣ, ನೀಲಕಂಠೇಗೌಡ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಕೆ.ಸತೀಶ್, 36 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ‌‌ ಆಡಳಿತ ಮಂಡಳಿ ಮುಖ್ಯಸ್ಥರು, ಶಿಕ್ಷಕರುಗಳು, ಪುಟ್ಟಣ್ಣ ಅಭಿಮಾನಿಗಳು ಭಾಗವಹಿಸಿದ್ದರು.

(ಲೀಡ್‌ ಪ್ಯಾಕ್‌)

ಬಿಜೆಪಿ ಸಂಸದರು ಕಳ್ಳ ಎತ್ತಗಳು: ಸಿಎಂ

ರಾಮನಗರ: ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು ಎಂದು ಬಿಜೆಪಿ ಸಂಸದರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷ ವಾಗ್ದಾಳಿ ನಡೆಸಿದರು.

ಕೆಂಗೇರಿ ಸೂಲಿಕೆರೆ ಬಳಿ ಭಾನುವಾರ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಪುಟ್ಟಣ್ಣರವರು ಐದನೇ ಬಾರಿಗೆ ಆಯ್ಕೆಯಾಗಲು ಶ್ರಮಿಸಿದ ಶಿಕ್ಷಕರು, ಅಧ್ಯಾಪಕರು, ಶಾಲಾ - ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರು, ಸ್ನೇಹಿತರು, ಹಿತೈಷಿಗಳು ಮತ್ತು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭ ಉದ್ಘಾಟಿಸಿ ಅವರು, ಲೋಕಸಭಾ ಚುನಾವಣೆಯಲ್ಲಿ ಅವರು 28ಕ್ಕೆ 28 ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ವಿರುದ್ಧ ವ್ಯಂಗ್ಯವಾಡಿದರು.

2023- 24 ರಲ್ಲಿ ಕರ್ನಾಟಕದಿಂದ 4.30 ಲಕ್ಷ ಕೋಟಿ ರೂಪಾಯಿ ಈ ವರ್ಷ ತೆರಿಗೆ ಸಂಗ್ರಹಿಸಿ ನೀಡಲಾಗಿದೆ. ಆದರೆ, ನಮಗೆ 50, 257 ಕೋಟಿ ರು. ಮಾತ್ರ ವಾಪಸ್ ಬಂದಿದೆ. ಇದು ಅನ್ಯಾಯ. ಹೀಗಾದರೆ ಕರ್ನಾಟಕದ ಅಭಿವೃದ್ಧಿ ಹೇಗಾಗಬೇಕು. ತೆರಿಗೆ ಹಂಚಿಕೆಯಲ್ಲಿ ನಮಗೆ ನ್ಯಾಯ ನೀಡಬೇಕು ಎಂದು ಇಡಿ ರಾಜ್ಯದ ಜನರೇ ಪ್ರಶ್ನಿಸುತ್ತಿದ್ದಾರೆ ಎಂದರು.

ಮೋದಿ ಹೆಸರಲ್ಲಿ ಗೆಲ್ಲುತ್ತೇವೆನ್ನುವಷ್ಟು ಮೂರ್ಖರು ಯಾರೂ ಇಲ್ಲ:

ನರೇಂದ್ರ ಮೋದಿಯವರ ಹೆಸರಿನ ಮೇಲೆ ಗೆಲ್ಲುತ್ತೇವೆ ಎಂದು ಬಿಜೆಪಿ ಭಾವಿಸಿದೆ. ನರೇಂದ್ರ ಮೋದಿಯವರು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದರೂ ನಮಗೆ 136 ಸ್ಥಾನಗಳು ದೊರೆತವು. ಮೋದಿಯವರು ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಹೀಗಾಗಿ ನರೇಂದ್ರ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆ ಎನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಲೇವಡಿ ಮಾಡಿದರು.

ಡಿ.ಕೆ.ಸುರೇಶ್ ಗೆಲ್ಲುವ ವಿಶ್ವಾಸ ನನಗಿದೆ:

ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಜನರೇ ತೀರ್ಮಾನಿಸಬೇಕು. ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ 4ನೇ ಬಾರಿ ಇಳಿಸಲಾಗಿದೆ. ಈ ಕ್ಷೇತ್ರದಲ್ಲಿ ಅವರು ಖಂಡಿತ ಗೆಲವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿಯವರು ನರೇಂದ್ರ ಮೋದಿಯವರ ಹೆಸರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆಯೇ ಹೊರತು ಬಿಜೆಪಿಯವರಿಗೆ ಜನರ ಬಳಿ ಹೋಗಲು ಕಾರಣಗಳೇ ಇಲ್ಲ ಎಂದರು.

ದೇವೇಗೌಡರ ದ್ವಂದ್ವ ನೀತಿ :

ದೇವೇಗೌಡರು ನರೇಂದ್ರ ಮೋದಿಯವರನ್ನು ಈಗ ಹೊಗಳಿದ್ದೆ ಹೊಗಳಿದ್ದು. ನನಗೂ ಅವರಿಗೂ ಅವಿನಾಭಾವ ಸಂಬಂಧ ಇದೆ ಅಂತಲೂ ಹೇಳುತ್ತಾರೆ. ಗೌಡರು ಹೀಗೇಕಾದರು ಎಂದು ಆಶ್ಚರ್ಯವಾಗಿದೆ. ಇದೇ ದೇವೇಗೌಡರು ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಹೊಗಳುತ್ತಾರೆ. ಹೀಗೆ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಈ ದೇಶದ ಪ್ರಧಾನ ಮಂತ್ರಿಯಾಗಿದ್ದವರು ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.(ಎರಡೂ ಫೋಟೋ ಹೋಗಲಿ)

10ಕೆಆರ್ ಎಂಎನ್ 3,4.ಜೆಪಿಜಿ

3.ಕೆಂಗೇರಿ ಸೂಲಿಕೆರೆ ಬಳಿ ಭಾನುವಾರ ನಡೆದ ಕೃತಜ್ಞತಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

4.ಕೆಂಗೇರಿ ಸೂಲಿಕೆರೆ ಬಳಿ ಭಾನುವಾರ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪುಟ್ಟಣ್ಣ ಹಾಗೂ ರಾಮೋಜಿಗೌಡ ಸನ್ಮಾನಿಸಿದರು.

Share this article