- ಜಗಳೂರಲ್ಲಿ ಬಸ್ ಚಾಲಕರ ಅತಿ ವೇಗ, ಅಜಾಗರೂಕತೆ ಚಾಲನೆಗೆ ಬ್ರೇಕ್ ಹಾಕಲು ಒತ್ತಾಯ
- - - ಕನ್ನಡಪ್ರಭ ವಾರ್ತೆ, ಜಗಳೂರುಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಎನ್‍ಎಂಸಿ ಹೋಟೆಲ್ ಬಳಿ ಬುಧವಾರ ಮಧಾಹ್ನ ಖಾಸಗಿ ಬಸ್ ಬೈಕ್ ಮೇಲೆ ಹರಿದ ಪರಿಣಾಮ ಇಬ್ಬರು ಬಸ್ಸಿನ ಚಕ್ರಕ್ಕೆ ಸಿಲುಕಿ, ಸಾವನ್ನಪ್ಪಿದ್ದಾರೆ. ಉದ್ರಿಕ್ತ ಜನರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದ ರಾಜು (42), ಓಬಳೇಶ್ (60) ಮೃತ ದುರ್ದೈವಿಗಳು. ದಾವಣಗೆರೆ ಕಡೆಗೆ ಹೊರಟಿದ್ದ ಎಸ್‍ಆರ್‌ಇ ಖಾಸಗಿ ಬಸ್ ಪಟ್ಟಣದ ಹೃದಯ ಭಾಗ ಪ್ರವೇಶಿಸುತ್ತಿತ್ತು. ಇದೇ ವೇಳೆ ಜನನಿಬಿಡ ಪ್ರದೇಶದಲ್ಲಿ ಬೈಕ್‌ನಲ್ಲಿ ಇಬ್ಬರು ನಿಧಾನವಾಗಿ ಸಾಗುತ್ತಿದ್ದರು. ಬಸ್ ಚಾಲಕನ ಅತಿ ವೇಗ, ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿತು. ಬಸ್ಸಿನ ಚಕ್ರಗಳು ಬೈಕ್‌ನ ಮೇಲೆ ಹರಿದಿದೆ. ಪರಿಣಾಮ ಓರ್ವ ಬಸ್ ಚಕ್ರಗಳಡಿಯೇ ಪ್ರಾಣ ಬಿಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.ಭೀಕರ ಅಪಘಾತದಿಂದ ಆಕ್ರೋಶಗೊಂಡ ಸಾರ್ವಜನಿಕರು, ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಸ್ಸು ಚಾಲಕರ ಮಿತಿಮೀರಿದ ವೇಗ, ಅಜಾಗರೂಕತೆ ವಾಹನ ಚಾಲನೆಯಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮೊದಲು ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿ, ಸರ್ಕಾರಿ ಬಸ್, ಟಿಪ್ಪರ್ ಇತರೆ ವಾಹನಗಳ ಚಾಲಕರಿಗೆ ಸೂಕ್ತ ಸಲಹೆ-ಸೂಚನೆ ನೀಡಬೇಕು. ವಾಹನಗಳ ಅತಿ ವೇಗ, ಅಜಾಗರೂಕತೆ ಚಾಲನೆಗೆ ಬ್ರೇಕ್ ಹಾಕಲು ಕಠಿಣ ಕ್ರಮಗಳ ಕೈಗೊಳ್ಳಬೇಕೆಂದು ಪಟ್ಟುಹಿಡಿದರು.
ವಿಷಯ ತಿಳಿದು ಶಾಸಕ ಬಿ.ದೇವೇಂದ್ರಪ್ಪ ಸ್ಥಳಕ್ಕೆ ಧಾವಿಸಿದರು. ಇನ್‍ಸ್ಪೆಕ್ಟರ್ ಡಿ.ಶ್ರೀನಿವಾಸ ರಾವ್, ಪಿಎಸ್‍ಐ ಮಂಜುನಾಥ್ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಬಸ್ ಚಾಲಕನ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.- - - -14ಕೆಡಿವಿಜಿ20: ಜಗಳೂರು ಪಟ್ಟಣದಲ್ಲಿ ಬೈಕ್ ಸವಾರರಿಬ್ಬರ ಬಲಿ ಪಡೆದ ಖಾಸಗಿ ಬಸ್. -14ಕೆಡಿವಿಜಿ21: ಬೈಕ್ ಸವಾರರಿಬ್ಬರ ಮೇಲೆ ಬಸ್ ಚಕ್ರಗಳು ಹರಿದಿರುವುದು.
-14ಕೆಡಿವಿಜಿ22: ಜಗಳೂರು ಪಟ್ಟಣದಲ್ಲಿ ಖಾಸಗಿ ಬಸ್‌ಗೆ ಸಿಲುಕಿ ಬೈಕ್ ಸವಾರರಿಬ್ಬರ ಬಲಿಯಾದ ಹಿನ್ನೆಲೆ ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.