ಕಳೆಗುಂದಿದ ಮಹಿಮರಂಗನ ದನಗಳ ಜಾತ್ರೆ

KannadaprabhaNewsNetwork | Published : Jan 29, 2024 1:30 AM

ಸಾರಾಂಶ

60 ವರ್ಷಗಳ ಹಿಂದೆ 10 ಸಾವಿರಕ್ಕೂ ಅಧಿಕ ರಾಸುಗಳಿಂದ ಕೂಡಿದ್ದ ಮಹಿಮರಂಗನ ದನಗಳ ಜಾತ್ರೆ ಇಂದು ಕೇವಲ ಬೆರಳೆಣಿಕೆಯಷ್ಟು ಮಾತ್ರಕ್ಕೆ ಬಂದು ನಿಂತಿದೆ. ಕೊಂಬಿಗೆ ಕಳಶ, ಕಾಲಿಗೆ ಗೆಜ್ಜೆ, ಕೊರಳಿಗೆ ಕರಿದಾರ ಕಟ್ಟಿ ರಾಸುಗಳನ್ನು ಕಟ್ಟುವ ಜಾಗಕ್ಕೆ ಪೈಪೋಟಿ, ಜಾತ್ರೆಗೆ ಪಾತ್ರೆ, ಸೌದೆ, ಆಹಾರ ಪದಾರ್ಥಗಳೊಂದಿಗೆ ಎತ್ತಿನಗಾಡಿಯೊಂದಿಗೆ ಆಗಮಿಸುತ್ತಿದ್ದ ಜನರು ಇಂದು ಹಳ್ಳಿ ದನಗಳ ಜಾತ್ರೆಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕಣ್ಣು ಹಾಯಿಸಿದಷ್ಟು ದೂರ ಜಾನುವಾರುಗಳಿಂದ ತುಂಬಿ ತುಳುಕುತ್ತಿದ್ದ, ಜಾನುವಾರು ಖರೀದಿಸಲು, ರಾಸುಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಜನಸಾಗರ ಗುಟ್ಟೆ ದನಗಳ ಜಾತ್ರೆಯಲ್ಲಿ ಹುಡುಕಿದರೂ ಸಿಗದಾಗಿದೆ.

ಮರೆಯಾಯ್ತು ಜಾತ್ರೆಯ ಸಿರಿಗ್ರಾಮೀಣ ಜನರ ನಿರುತ್ಸಾಹವೋ ಅಥವಾ ಯಾಂತ್ರೀಕರಣದಿಂದ ಕಾಣೆಯಾಗಿರುವ ರಾಸುಗಳ ಸಾಕಣೆ ಪರಿಣಾಮವೋ, ಗುಟ್ಟೆ ದನಗಳ ಜಾತ್ರೆ ಕೇವಲ ನಾಮ್‌ಕೆವಸ್ತೆಯಾಗಿದೆ. 60 ವರ್ಷಗಳ ಹಿಂದೆ 10 ಸಾವಿರಕ್ಕೂ ಅಧಿಕ ರಾಸುಗಳಿಂದ ಕೂಡಿದ್ದ ಮಹಿಮರಂಗನ ದನಗಳ ಜಾತ್ರೆ ಇಂದು ಕೇವಲ ಬೆರಳೆಣಿಕೆಯಷ್ಟು ಮಾತ್ರಕ್ಕೆ ಬಂದು ನಿಂತಿದೆ. ಕೊಂಬಿಗೆ ಕಳಶ, ಕಾಲಿಗೆ ಗೆಜ್ಜೆ, ಕೊರಳಿಗೆ ಕರಿದಾರ ಕಟ್ಟಿ ರಾಸುಗಳನ್ನು ಕಟ್ಟುವ ಜಾಗಕ್ಕೆ ಪೈಪೋಟಿ, ಜಾತ್ರೆಗೆ ಪಾತ್ರೆ, ಸೌದೆ, ಆಹಾರ ಪದಾರ್ಥಗಳೊಂದಿಗೆ ಎತ್ತಿನಗಾಡಿಯೊಂದಿಗೆ ಆಗಮಿಸುತ್ತಿದ್ದ ಜನರು ಇಂದು ಹಳ್ಳಿ ದನಗಳ ಜಾತ್ರೆಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ.

ರಾಸುಗಳ ಕೊರತೆಕೃಷಿ ಚಟುವಟಿಕೆಯಲ್ಲಿ ಆಳುಗಳ ಅಭಾವ ತಲೆದೋರಿದ ನಂತರ ಹೊಲಗಳಲ್ಲಿ ನೀಲಗಿರಿ ಮರ ಬೆಳೆಸಲು ಆರಂಭಿಸಿ, ರಾಗಿ ಮತ್ತು ಹಸುವಿನ ಮೇವು ಬೆಳೆಯುತ್ತಿದ್ದ ಅತ್ಯಲ್ಪ ಜಮೀನನ್ನು ಟ್ರ್ಯಾಕ್ಟರ್ ಗಳಿಂದ ಉಳುಮೆ ಮಾಡುತ್ತಿದ್ದಾರೆ. ಕೆಲರೈತರು ಉಳುಮೆಗಾಗಿ ಎತ್ತುಗಳನ್ನು ಸಾಕುತ್ತಿದ್ದರೆ, ಇನ್ನು ಕೆಲವರು ಪ್ರತಿಷ್ಠೆಗಾಗಿ ಸಾಕುತ್ತಿದ್ದಾರೆ. ಇದರ ಪರಿಣಾಮ ಜಾನುವಾರು ಜಾತ್ರೆಗೆ ನೀರಸ ಪ್ರತಿಕ್ರಿಯೆ ಉಂಟಾಗಿದೆ ಎಂಬುದು ಜಾತ್ರೆಗೆ ಬಂದ ರೈತರ ಮಾತು.

ಸ್ಥಳೀಯರಷ್ಟೇ ಬಂದರುಶಿವಗಂಗೆ ಜಾತ್ರೆಗೆ ಮೊದಲು ಚಿಕ್ಕಬಳ್ಳಾಪುರ, ಕುಣಿಗಲ್, ಮಾಗಡಿ, ದೇವನಹಳ್ಳಿ, ಚಿಂತಾಮಣಿ, ಪಾವಗಡ, ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಹಾಸನ ಮುಂತಾದ ಕಡೆಗಳಿಂದ ರೈತರು ರಾಸುಗಳನ್ನು ಮಾರಲು ತರುತ್ತಿದ್ದರು. ಆದರೆ ಇಂದು ದೊಡ್ಡಬಳ್ಳಾಪುರ, ಮಾಗಡಿ, ತುಮಕೂರು ಗ್ರಾಮಾಂತರ, ರಾಮನಗರ, ಗುಬ್ಬಿ, ನೆಲಮಂಗಲ ತಾಲೂಕು ರೈತರು ಮಾತ್ರ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಕೊಳ್ಳುವವರೂ ಇಲ್ಲರಾಸುಗಳನ್ನು ಖರೀದಿಸಲು ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನಿಂದಲೂ ಜನರು ಆಗಮಿಸಿ ಜಾತ್ರೆಯಲ್ಲಿ ತಮ್ಮ ಆರ್ಥಿಕತೆಗೆ ಸರಿದೂಗುವ ರಾಸುಗಳನ್ನು ದಳ್ಳಾಳಿಗಳ ಸಹಾಯದಿಂದ ಖರೀದಿಸುತ್ತಿದ್ದರು. ಆದರೆ ಗುಟ್ಟೆ ಜಾತ್ರೆಯಲ್ಲಿ ಇಂದು ಹೊರ ರಾಜ್ಯದವರ ಆಗಮನ ಕಡಿಮೆಯಾಗಿ ಕೇವಲ ಸ್ಥಳೀಯರಿಗೆ ಮಾತ್ರವೇ ಸೀಮಿತವಾಗಿದೆ.

ನಾಟಿ ತಳಿಗಳ ಬೆಲೆ ಈ ಬಾರಿ ಅಪ್ಪಟ ನಾಟಿ ತಳಿಗಳಾದ ಅಮೃತ ಮಹಲ್, ಹಳ್ಳಿ ರಾಣಿ, ಕಪ್ಪು ಬಿಳಿ ಮಿಶ್ರಿತ ರಾಸು ವಿಶೇಷವಾಗಿ ಕಾಣಸಿಗುತ್ತಿವೆ. ಒಂದು ಜೊತೆಗೆ ಕನಿಷ್ಠ 45 ಸಾವಿರದಿಂದ 3 ಲಕ್ಷ ರು. ಬೆಲೆ ಬಾಳುವ ರಾಸುಗಳು ಜಾತ್ರೆಯಲ್ಲಿವೆ.

ರೈತರಿಗೆ ಊಟದ ವ್ಯವಸ್ಥೆ ಜಾತ್ರೆಗೆ ಬರುವ ರೈತರಿಗೆ ಊಟದ ಸಮಸ್ಯೆಯಾಗಬಾರದೆಂದು ಶಾಸಕ ಎನ್. ಶ್ರೀನಿವಾಸ್ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಊಟದ ವ್ಯವಸ್ಥೆ ಮಾಡಿದ್ದಾರೆ.

Share this article