ಅಡುಗೆ ಮನೆಯಿಂದ ಅಂತರಿಕ್ಷಗೆ ಹಾರಿದ ಮಹಿಳೆ

KannadaprabhaNewsNetwork | Published : Mar 16, 2024 1:53 AM

ಸಾರಾಂಶ

ಇಸ್ರೋ ಹುಟ್ಟಿದಾಗಿನಿಂದ ದೇಶದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದ್ದು. ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ದೇಸಿ ನಿರ್ಮಿತ ಅನೇಕ ಉಪಗ್ರಹಗಳನ್ನು ನಿರ್ಮಿಸಿದೆ. ಇಸ್ರೋದ ಬೆಳವಣಿಗೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಕೂಡುಗೆ ಇದೆ.

ಧಾರವಾಡ:

ಪ್ರಸ್ತುತ ಮಹಿಳೆಯರು ವಿಜ್ಞಾನ-ತಂತ್ರಜ್ಞಾನ ಮತ್ತು ಅನ್ವೇಷಣೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ತಮ್ಮದೇ ಸಾಧನೆ, ಕೊಡುಗೆ ನೀಡುತ್ತಿದ್ದಾರೆ ಎಂದು ಇಸ್ರೋದ ಲಿಯೋಸ್ ವಿಭಾಗದ ಸಹ ನಿರ್ದೇಶಕಿ ಡಾ. ಕಲ್ಪನಾ ಅರವಿಂದ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ ‘ವೇಗದ ಪ್ರಗತಿಯಲ್ಲಿ ಸ್ಫೂರ್ತಿದಾಯಕ ಮಹಿಳೆಯರ ಸೇರ್ಪಡೆ'''''''' ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಇಸ್ರೋ ಹುಟ್ಟಿದಾಗಿನಿಂದ ದೇಶದ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದ್ದು. ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ದೇಸಿ ನಿರ್ಮಿತ ಅನೇಕ ಉಪಗ್ರಹಗಳನ್ನು ನಿರ್ಮಿಸಿದೆ. ಇಸ್ರೋದ ಬೆಳವಣಿಗೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಕೂಡುಗೆ ಇದೆ ಎಂದರು. ಚಂದ್ರಯಾನ ಉಡಾವಣೆಯಲ್ಲಿ ಇಸ್ರೋದ ಮಹಿಳಾ ವಿಜ್ಞಾನಿಗಳ ಮತ್ತು ತಂತ್ರಜ್ಞರ ಕೊಡುಗೆ ಬಹಳ ಇದೆ. ಮಹಿಳೆ ಅಡುಗೆ ಮನೆಯಿಂದ ಅಂತರಿಕ್ಷದ ವರೆಗೆ ಹಾರಿದ್ದಾಳೆ ಎಂದ ಅವರು, ವೈಫಲ್ಯಗಳಿಂದ ಕುಗ್ಗದೆ ಅವುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗಬೇಕು. ಅದುವೇ ಸಾಧನೆಗೆ ದಾರಿ ಎಂದು ಹೇಳಿದರು. ಅಧ್ಯಕ್ಷ್ಯತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಮಹಿಳೆ ಕೇವಲ ಕುಟುಂಬಕ್ಕೆ, ಅಡುಗೆ ಮನೆಗೆ ಸೀಮಿತ ಎನ್ನುವ ಕಾಲ ಹೋಯಿತು. ಮಹಿಳೆ ಒಬ್ಬ ನಾಯಕಳಾಗಿ, ಆಡಳಿತಗಾರಳಾಗಿ, ಸಬಲರಾಗಿ, ಕ್ರಿಯಾಶೀಲಳಾಗಿದ್ದಾಳೆ ಎಂದರು.ವಿಚಾರ ಸಂಕಿರಣದಲ್ಲಿ ಸಂವಿಧಾನದ ಪೀಠಿಕೆ ಓದಲಾಯಿತು. ವಿಜಯಪುರ ಮಹಿಳಾ ವಿವಿಯ ಡಾ. ಲಕ್ಷ್ಮಿದೇವಿ, ಸಾಮಾಜಿಕ ನ್ಯಾಯ ಪಡೆಯುವಲ್ಲಿ ಮಹಿಳಾ ಹಕ್ಕುಗಳು, ಕವಿವಿ ಡೀನ ಜಯಶ್ರೀ ಮಹಿಳಾ ಆರೋಗ್ಯ-ಕ್ಷೇಮಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿ ಪದ್ಮಾವತಿ ಜಿ., ಮಹಿಳಾ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರಿ ಯೋಜನೆಗಳು, ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಹಿಳೆ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕವಿವಿ ಸಮಾಜ ನಿಖಾಯದ ಡೀನ ಜಯಶ್ರೀ ಎಸ್, ಸಿಂಡಿಕೇಟ್ ಸದ್ಯರಾದ ರತ್ನಾ ಪಾಟೀಲ, ಕವಿವಿ ಕುಲಸಚಿವರಾದ ಡಾ. ಎ. ಚೆನ್ನಪ್ಪ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಸಂಗೀತಾ ಮಾನೆ, ಡಾ. ಪುಷ್ಪ ಹೊಂಗಲದ ಇದ್ದರು.

Share this article