ಬ್ಯಾಡಗಿ:
ಲಿಂಗಾಯತ ಸಮುದಾಯ ದೇಶದ ಉದ್ದಗಲಕ್ಕೂ ಶೈಕ್ಷಣಿಕ ಸಂಸ್ಥೆ ಆರಂಭಿಸಿ ಶಿಕ್ಷಣವನ್ನು ಸಾಮಾಜಿಕ ಚಲನಶೀಲ ಸಾಧನವಾಗಿ ಬಳಸಿಕೊಳ್ಳುವ ಮೂಲಕ ಇಂದಿಗೂ ಶಿಕ್ಷಣದ ಅಸ್ಮಿತೆಯನ್ನು ಕಾಯ್ದುಕೊಂಡು ಬಂದಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಲಿಂಗಾಯತ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಿಧಾನಸಭೆಯ ಅರ್ಧದಷ್ಟು ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಲಿಂಗಾಯತ ಸಮುದಾಯಕ್ಕಿದೆ. ಹೀಗಿದ್ದರೂ ಸಹ ನಮ್ಮದೇ ಎಲ್ಲಾ ಉಪಜಾತಿ ಬಡವರಿಗೆ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಶೋಷಿತ ಸಮುದಾಯಗಳ ಪಟ್ಟಿಗೆ ಸೇರುವ ಕಾಲ ದೂರವಿಲ್ಲ ಎಂದರು.
ಲಿಂಗಾಯತ ಎಂಬ ಪದವೇ ಸ್ವಾಭಿಮಾನದ ಸಂಕೇತವಾಗಿದೆ. ಲಿಂಗಧಾರಣೆ ಮಾಡಿದ ಪ್ರತಿಯೊಬ್ಬರು ಲಿಂಗಾಯತ ಸಮುದಾಯಕ್ಕೆ ಸೇರ್ಪಡೆಗೊಳ್ಳುತ್ತಾರೆ. ಕೃಷಿ, ಶಿಕ್ಷಣ, ವ್ಯಾಪಾರ ಸೇರಿದಂತೆ ಬಹುತೇಕ ರಾಜ್ಯದೆಲ್ಲೆಡೆ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದ ಸಮುದಾಯವಾಗಿದೆ. ಆದರೆ ಲಿಂಗಾಯತ ನೌಕರರ ಶ್ರೆಯೋಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳು ಪ್ರಕಟವಾಗದಿರುವುದು ವಿಷಾದಕರ ಸಂಗತಿ ಎಂದರು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸ್ವಾತಂತ್ರ್ಯದ ಬಳಿಕ ಕೇವಲ ಬೆರಳಿಕೆಯಷ್ಟು ಲಿಂಗಾಯತ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ. ಸಾಮರ್ಥ್ಯವಿದ್ದರೂ ಸಹ ಮುಖ್ಯಮಂತ್ರಿಗಳಾಗುವುದನ್ನು ತಪ್ಪಿಸಲಾಗುತ್ತಿದೆ. ಸಮಾಜದ ನೌಕರರು ನಿರ್ಭಯವಾಗಿ ಕೆಲಸ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪ್ರತಿಪಾದನೆ ಮಾಡಬೇಕು ಮತ್ತು ಅನ್ಯಾಯ ಕಂಡು ಬಂದಲ್ಲಿ ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕೃತ ಭಾಷೆ ಹಿಡಿತ ಸಾಧಿಸಿದ್ದ ಸಂದರ್ಭದಲ್ಲಿಯೇ ಕನ್ನಡವನ್ನು ವಚನಗಳ ಮಾಧ್ಯಮವಾಗಿ ಸ್ವೀಕರಿಸಿದ ಲಿಂಗಾಯತ ಸಮುದಾಯವು ರಾಜ್ಯದೆಲ್ಲೆಡೆ ಹೊಸದೊಂದು ಸಾಂಸ್ಕೃತಿಕ ಪರಂಪರೆ ಸೃಷ್ಟಿಸಿದೆ. ಇಂತಹ ಹತ್ತು ಹಲವು ಪ್ರಭಾವದಿಂದಲೇ 20ನೇ ಶತಮಾನದಲ್ಲಿ ಕೊನೆಗೂ ಕನ್ನಡ ಶಾಸ್ತ್ರೀಯ ಭಾಷೆಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದರು.ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸರ್ಕಾರದಿಂದ ಅತೀ ಕಡಿಮೆ ಸೌಲಭ್ಯಗಳನ್ನು ಪಡೆದುಕೊಂಡಿರುವವರ ಪಟ್ಟಿಯಲ್ಲಿ ರಾಜ್ಯದಲ್ಲಿ ಲಿಂಗಾಯತ ಸಮುದಾಯ ಮೊದಲ ಸ್ಥಾನ ಪಡೆದಿದೆ. ಲಿಂಗಾಯತ ಸಮುದಾಯದ ಜನರು ನೌಕರಿ ಸೇರುವುದರಿಂದ ಹಿಡಿದು ಮುಂಬಡ್ತಿ, ವರ್ಗಾವಣೆ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಸರ್ಕಾರದಲ್ಲಿರುವವರ ಸಂಖ್ಯೆ ಕ್ಷೀಣಿಸುತ್ತಿರುವುದೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ ಎಂದರು.
ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀ ಸಾನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಸವರಾಜ ಛತ್ರದ ಮಾತನಾಡಿದರು.ಬಿ.ಎಸ್. ಸಂಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಯಣ್ಣ ಮಲ್ಲಿಗಾರ, ಹನುಮಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಲಿಂಗಯ್ಯ ಹಿರೇಮಠ, ಮುರಿಗೆಪ್ಪ ಶೆಟ್ಟರ, ಮಾರುತಿ ಶಿಡ್ಲಾಪೂರ, ವೀರಭದ್ರಪ್ಪ ಗೊಡಚಿ, ಸುರೇಶ ಯತ್ನಳ್ಳಿ, ಎಂ.ಆರ್. ಹೊಮ್ಮರಡಿ, ಮುಖ್ಯಾಧಿಕಾರಿ ವಿನಯ್‌ಕುಮಾರ ಹೊಳಿಯಪ್ಪಗೋಳ, ನಿವೃತ್ತ ಉಪನ್ಯಾಸಕ ಪ್ರೊ. ಸಿ. ಶಿವಾನಂದಪ್ಪ, ಬಿ.ಸುಭಾಸ್, ಆರ್.ಎಂ. ಪಾಟೀಲ, ಎಸ್.ಬಿ. ಮಾಗಳದ, ಗುರುರಾಜ ಚಂದ್ರಿಕೇರ, ಶಂಕರ ಕಿಚಡಿ, ಎ.ಟಿ. ಪೀಠದ ಸೇರಿದಂತೆ ಇತರರಿದ್ದರು.