ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಶ್ರೀ ರಾಮಕೃಷ್ಣಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಶ್ರೀಗಳು ವಿದ್ಯೆ,ಆರೋಗ್ಯ ಹಾಗೂ ಗ್ರಾಮೀಣ ಭಾಗದ ಬಡಮದ್ಯಮ ವರ್ಗದ ಜನತೆಗೆ ನಾನಾ ರೀತಿಯ ಸೌಲಭ್ಯಗಳನ್ನ ಕಲ್ಪಿಸುತ್ತಿರುವುದು ತಾಲೂಕಿಗೆ ಒಂದು ಅತ್ಯುತ್ತಮವಾದ ವರದಾನವಾಗಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಶ್ಲಾಘನೆ ವ್ಯಕ್ತಪಡಿಸಿದರು.ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ವತಿಯಿಂದ ಶನಿವಾರ ತಾಲೂಕಿನ ಕೆ.ರಾಮಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಲೇಖನ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ವಾಮೀಜಿ ಅವರ ಕೊಡುಗೆ ಹಾಗೂ ನಿಸ್ವಾರ್ಥ ಸೇವೆ ಅನನ್ಯ. ತಾಲೂಕಿನಲ್ಲಿ ಶಾಲಾ ಕಾಲೇಜುಗಳ ಪ್ರಗತಿಗೆ ವಿಶೇಷ ಅದ್ಯತೆ ನೀಡಿದ್ದು, ಲಿಂಗದಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ಹಾಗೂ ತಾಲೂಕಿಗೆ ನಾಲ್ಕು ಕೆಪಿಎಸ್ಸಿ ಶಾಲೆಯ ಮಂಜೂರಾತಿ ಕಲ್ಪಿಸಿಕೊಟ್ಟಿರುವುದಾಗಿ ಹೇಳಿದರು. ಮರಿದಾಸನಹಲ್ಳಿ ಗ್ರಾಮದಲ್ಲಿ ಕೆಪಿಎಸ್ಸಿ ಶಾಲೆ ಆರಂಭಿಸಿ ಮಕ್ಕಳನ್ನ ಕರೆತರಲು ನಾನು ಸ್ವಂತ ಹಣದಿಂದ ನಮ್ಮ ತಂದೆ ತಾಯಿಯ ಹೆಸರಲ್ಲಿ ನಾಲ್ಕು ಬಸ್ ಸೌಲಭ್ಯ ಕಲ್ಪಿಸಿದ್ದು ಕೆ.ರಾಮಪುರ ಶಾಲೆಯಲ್ಲಿನ ಮಕ್ಕಳನ್ನು ಕಂಡರೆ ತುಂಬಾ ಸಂತಸ ತಂದಿದೆ. ಖಾಸಗಿ ಶಾಲಾ ಮುಕ್ತ ಗ್ರಾಮವಾಗಿದ್ದು ಇಲ್ಲಿನ ಪೋಷಕರು ಸರಕಾರಿ ಶಾಲೆಯ ಬಗೆಗಿನ ಕಾಳಜಿಯಿಂದಲೇ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಕಾಣಲು ಸಾಧ್ಯವಾಗಿದೆ ಎಂದರು. ಭವಿಷ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉನ್ನತ ಶಿಕ್ಷಣ ಕೊಡಿಸಿದರೆ ಕೇಂದ್ರ ಸ್ಥಾನ ದೆಹಲಿಯಲ್ಲಿ ಕೂಡ ಉನ್ನತ ಹುದ್ದೆ ಅಲಂಕರಿಸಿ ಆಡಳಿತ ನಡೆಸುವ ಶಕ್ತಿ ಶಾಲಾ ವಿದ್ಯಾರ್ಥಿಗಳಿಗಿದೆ ಎಂದರು.ಜಪಾನಂದಾ ಸ್ವಾಮಿಜಿ ಮಾತನಾಡಿ ಹಲವು ವರ್ಷಗಳಿಂದ ಇಲ್ಲಿನ ಶಾಲಾ ವಿದ್ಯಾರ್ಥಿಗಳಿ ಗೆ ಸಮವಸ್ತ್ರ, ಶಾಲಾಬ್ಯಾಗ್ ಮತ್ತು ಲೇಖನ ಸಾಮಾಗ್ರಿಗಳನ್ನ ವಿತರಿಸಿದ್ದು ಮಕ್ಕಳು ಗುಣಮಟ್ಟದ ಶಿಕ್ಷಣ ಭವಿಷ್ಯ ಭಾರತದ ಪ್ರಜೆಗಳಾಗಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ಮಾತನಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ಹೆಚ್ಚು ಮಕ್ಕಳಿರುವ ಶಾಲೆ, ಪೋಷಕರು, ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿ ಸಹಕಾರದಿಂದ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಕಳಿಸದೇ ಸರಕಾರಿ ಶಾಲೆಯಲ್ಲಿ ದಾಖಲು ಮಾಡಿ ಖಾಸಗಿ ಶಾಲಾ ಮುಕ್ತ ಗ್ರಾಮ ಮಾಡಿರುವುದು ಗ್ರಾಮಕ್ಕೆ ಅಲ್ಲದೆ ಇಲಾಖೆಗೆ ಕೂಡ ಗೌರವದ ಸಂಗತಿಯಾಗಿದೆ ಎಂದರು.ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷರಾದ ರಾಮಾಂಜಿನಮ್ಮ ಎ.ಗೋಪಿ, ಉಪಾಧ್ಯಕ್ಷರಾದ ಜಗದೀಶ್, ಮುಖಂಡರಾದ ನಾಗರಾಜು, ಗೋವಿಂದಪ್ಪ, ನರಸಿಂಹ್ಮಪ್ಪ, ಟೆಂಪೊ ಗೋವಿಂದಪ್ಪ, ವೆಂಕಟರಮಣಪ್ಪ, ರಾಮಲಿಂಗಪ್ಪ, ಗುಡಿಪಲ್ಲಿ ರಂಗಪ್ಪ, ವಿರೇಶ್, ಅಂಜಿನರೆಡ್ಡಿ, ಅಂಜಿನಾಯಕ, ರಾಜು , ಆದರ್ಶ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ್, ಪಿಡಿಒ ಅಕ್ಕಲಪ್ಪ, ಮುಖ್ಯಶಿಕ್ಷಕರಾದ ಚಂದ್ರಶೇಖರರೆಡ್ಡಿ, ಶಿಕ್ಷಕರಾದ ಪ್ರತಿಭಾ ಮತ್ತು ಗೀತಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.