ಮಾನವೀಯ ಮೌಲ್ಯಗಳ ಪುನರುತ್ಥಾನದ ಕಾರ್ಯ ಮಠಗಳಿಂದ ಆಗಲಿ: ಕೋಡಿಮಠದ ಶ್ರೀ

KannadaprabhaNewsNetwork |  
Published : Mar 03, 2024, 01:35 AM IST
೨ಎಚ್‌ಯುಬಿ-ಎಕೆಎಲ್೧(ಎ): | Kannada Prabha

ಸಾರಾಂಶ

ಬದಲಾಗುತ್ತಿರುವ ಸಮುದಾಯದಲ್ಲಿ ಸಂಪ್ರದಾಯಬದ್ಧವಾದ ಮಾನವೀಯ ಮೌಲ್ಯಗಳ ಪುನರುತ್ಥಾನದ ಕಾರ್ಯ ನಾಡಿನ ಮಠಮಂದಿರಗಳಿಂದ ಆಗಬೇಕಿದೆ.

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ಆಧುನಿಕತೆಯ ನಿಟ್ಟಿನಲ್ಲಿ ಬದಲಾಗುತ್ತಿರುವ ಸಮುದಾಯದಲ್ಲಿ ಸಂಪ್ರದಾಯಬದ್ಧವಾದ ಮಾನವೀಯ ಮೌಲ್ಯಗಳ ಪುನರುತ್ಥಾನದ ಕಾರ್ಯ ನಾಡಿನ ಮಠಮಂದಿರಗಳಿಂದ ಆಗಬೇಕಿದೆ ಎಂದು ಹಾರನಹಳ್ಳಿ ಮಹಾಸಂಸ್ಥಾನ ಕೋಡಿಮಠದ ಡಾ. ಶಿವಾನಂದ ರಾಜಯೋಗೇಂದ್ರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಲಿಂ.ಹಾನಗಲ್ಲ ಕುಮಾರ ಶ್ರೀಗಳ ಮತ್ತು ಲಿಂ.ಚನ್ನವೀರ ಶ್ರೀಗಳ ಪುಣ್ಯಸ್ಮರಣೋತ್ಸವ ಮತ್ತು ಶ್ರೀ ವೀರಭದ್ರೇಶ್ವರ ದೇವರ ಜಾತ್ರೆಯ ನಿಮಿತ್ತ ನಡೆದಿರುವ ಅಕ್ಕಿಆಲೂರು ಉತ್ಸವದ ಧರ್ಮ ಚಿಂತನಗೋಷ್ಠಿಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಮಹಾಂತನಾಗಬೇಕಾದರೆ ಅವನ ಮನಸ್ಸಿನ ಮೇಲೆ ಹತೋಟಿಯಿಡಬೇಕು. ಅವನಲ್ಲಿರುವ ಅರಿಷಡ್ವವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ ಜಾಗೃತ ಸ್ಥಿತಿಯಲ್ಲಿದ್ದರೆ ಪಾರಮಾರ್ಥಿಕ ಸುಖವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಮನುಷ್ಯನಲ್ಲಿರುವ ವಿವೇಕ, ಬುದ್ಧಿಶಕ್ತಿಯನ್ನು ಪಂಚೇಂದ್ರೀಯಗಳು ರಕ್ಷಿಸುತ್ತಿದ್ದು, ಅವುಗಳನ್ನು ನಮ್ಮ ಅಧೀನದಲ್ಲಿಟ್ಟುಕೊಳ್ಳುವ ಪರಿಪಾಠ ರೂಢಿಸಿಕೊಳ್ಳಬೇಕು. ನಮ್ಮಲ್ಲಿರುವ ಬುದ್ಧಿಶಕ್ತಿ, ವಾಕ್‌ಶಕ್ತಿ ಜಗತ್ತಿನ ಯಾವ ಜೀವರಾಶಿಗಳಿಗೂ ಇಲ್ಲ. ಮನುಷ್ಯನಲ್ಲಿರುವ ಬಹುದೊಡ್ಡ ಶತ್ರುವೆಂದರೆ ಅವನ ಕೋಪ, ಕೋಪವನ್ನು ಗೆಲ್ಲುವಷ್ಟು ಮಟ್ಟಿಗೆ ನಮ್ಮ ಬುದ್ಧಿಶಕ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇದೆ. ಮನುಷ್ಯ ಜೀವನ ನಮಗೆ ದೊರೆತಿರುವ ಕೊನೆಯ ಅವಕಾಶ, ಭಗವಂತ ನೀಡಿರುವ ವಿವೇಕವನ್ನು ಉಪಯೋಗಿಸಿ ಸತ್ಕಾರ್ಯಗಳನ್ನು ಮಾಡುವತ್ತ ನಮ್ಮ ಚಿತ್ತ ಹರಿಸಬೇಕು ಎಂದರು.

ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು ಆಶೀರ್ವಚನ ನೀಡಿ, ಮಠಮಾನ್ಯಗಳಲ್ಲಿ ನಿತ್ಯವೂ ನಡೆಯುವ ನಮ್ಮ ಮೂಲ ಸಂಸ್ಕೃತಿಯ ಆರಾಧನೆ, ಧರ್ಮ ಸಭೆಗಳು, ನೀತಿ ಪಠಣಗಳು, ಸಮಾಜದ ಏಳಿಗೆಗೆ ಪೂರಕವಾಗಿದ್ದು ಅವುಗಳನ್ನು ಸ್ವಚ್ಛ ಮನಸ್ಸುಗಳಿಂದ ಆಸ್ವಾದಿಸುವ ಪರಿಪಾಠವನ್ನು ನಾಡಿನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕಿದೆ. ಜಗತ್ತಿನ ಕಲ್ಯಾಣಕ್ಕಾಗಿ ಜನ್ಮ ತಳೆದ ಧರ್ಮ, ಜಾತಿ ಜನಾಂಗಗಳಿಂದು ಸಮುದಾಯದಲ್ಲಿ ಭಿನ್ನಮತ ಸೃಷ್ಠಿಸುವ ಮತ್ತು ಒಡೆದಾಳುವ ಅಸ್ತ್ರಗಳಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಧರ್ಮದ ಆಚರಣೆಗಳು ಪ್ರತಿಯೊಬ್ಬ ವ್ಯಕ್ತಿಗೂ ಶಾಶ್ಚತ ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದರು.

ನಂತರ ಕೋಡಿಮಠದ ಶ್ರೀಗಳಿಗೆ ಶ್ರೀಮಠದ ಪ್ರತಿಷ್ಠಿತ ಚನ್ನಭೂಷಣ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಯನಾಳದ ಅಭಿನವ ರೇವಣಸಿದ್ಧ ಶ್ರೀಗಳು, ಮೂಲೆಗದ್ದೆಯ ಚನ್ನಬಸವ ಶ್ರೀಗಳು, ಬಾಳೂರಿನ ಕುಮಾರ ಶ್ರೀಗಳು, ಸೇವಾ ಸಮಿತಿ ಅಧ್ಯಕ್ಷ ಕೊಟ್ಟೂರಬಸಪ್ಪ ಬೆಲ್ಲದ, ಶರತ್ ಸಣ್ಣವೀರಪ್ಪನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ