ಕನ್ನಡಪ್ರಭ ವಾರ್ತೆ ಸಾಗರ
ಇಡೀ ಜಗತ್ತನ್ನು ಬಾಧಿಸುತ್ತಿರುವ ಅನೇಕ ತಲ್ಲಣಗಳಿಗೆ ಬಡ ಹಾಗೂ ಸ್ಥಿತಿವಂತರ ನಡುವೆ ಅಂತರ ಹೆಚ್ಚುತ್ತಿರುವುದೇ ಪ್ರಮುಖ ಕಾರಣವಾಗಿದ್ದು, ಅದರ ಭೀಕರತೆ ಮಾತ್ರ ಎಲ್ಲರನ್ನೂ ಬಾಧಿಸುತ್ತದೆ ಎಂದು ಪರಿಸರ ಲೇಖಕ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.ತಾಲೂಕಿನ ಹೆಗ್ಗೋಡಿನಲ್ಲಿ ಬುಧವಾರದಿಂದ ಆಯೋಜಿಸಲಾಗಿರುವ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ, ಬಿಸಿ ಪ್ರಳಯದ ಬಾಗಿಲಲ್ಲಿ ಸಂವಹನ ಕಲೆ ಕುರಿತು ವಿಷಯದ ಮೇಲೆ ಮಾತನಾಡಿದ ಅವರು, ಮನುಷ್ಯ ಹಾಳು ಮಾಡಿರುವ ಭೂಮಿಯನ್ನು ಮತ್ತೊಮ್ಮೆ ಅವನ ಮೂಲಕ ಬದಲಾಯಿ ಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಜಗತ್ತು ನಿತ್ಯವೂ ಹೊಸ ಹೊಸ ತಲ್ಲಣಗಳಿಂದ ಕಂಗಾಲಾಗಿದ್ದು, ಶರಾವತಿ ಕೊಳ್ಳದಿಂದ ಹಿಡಿದು ಜಗತ್ತಿನೆಲ್ಲೆಡೆ ವ್ಯಾಪಿಸಿದೆ. ಆಫ್ರಿಕಾ ಖಂಡದಲ್ಲಿ ಭೀಕರ ಬರ, ಕ್ಷಾಮ ಆವರಿಸಿಕೊಂಡಿದೆ. ಸಮುದ್ರಕ್ಕೆ ಬಿಸಾಡುತ್ತಿರವ ಪ್ಲಾಸ್ಟಿಕ್ ನಿಂದ ಸಾವಿರಾರು ಜೀವ ಸಂಕುಲ ಅಪಾಯದಲ್ಲಿದೆ. ಇಂಥಾ ಅನೇಕ ತಲ್ಲಣಕ್ಕೆ ಮನುಷ್ಯ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಎಲ್ಲಿವರೆಗೆ ನಮ್ಮೊಳಗೆ ಬದಲಾವಣೆಯ ಮಾತು ಮೂಡುವುದಿಲ್ಲವೋ ಅಲ್ಲಿವರೆಗೂ ಜಗತ್ತು ಹೀಗೆ ಹಾಳಾಗು ತ್ತಿರುತ್ತದೆ ಎಂದು ವಿಶ್ಲೇಷಿಸಿದರು.ಭೂಮಿ ಮೇಘಸ್ಫೋಟ, ಪ್ರವಾಹ, ಬರ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಹತ್ತಾರು ವಿಧದಲ್ಲಿ ಮಾತನಾಡುತ್ತ ಅಪಾಯದ ಮುನ್ಸೂಚನೆ ನೀಡುತ್ತಿದೆ. ಆದರೆ ಭೂಮಿ ಬದಲಾಗುತ್ತಿರುವುದನ್ನು ನಾವು ಗಮನಿಸುತ್ತಿಲ್ಲ. ಇಂತಹ ಸಂವಹನವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಹೊಸ ರೀತಿಯ ಸಂವಹನಗಳನ್ನು ಕಲಿಯಬೇಕಾದ್ದು ಇಂದಿನ ಅನಿವಾರ್ಯತೆಯಾಗಿದೆ ಎಂದರು.
ಅಭಿವ್ಯಕ್ತಿಯಲ್ಲಿ ಅನೇಕ ವಿಧಗಳಿದ್ದು ಕೇಳುವ, ನೋಡುವ, ಕಣ್ಣು ಮುಚ್ಚಿ ಆಸ್ವಾದಿಸುವ ಕಲೆಗಳಿವೆ. ಬದಲಾಗುತ್ತಿರುವ ತಂತ್ರಜ್ಞಾನವೂ ಹೊಸತನ್ನು ಕಲಿಸುತ್ತಿದೆ. ಚಿತ್ರಕಲೆ, ವ್ಯಂಗ್ಯಚಿತ್ರ, ಛಾಯಾಚಿತ್ರ, ಪತ್ರಿಕೆಗಳು, ವೀಡಿಯೋ, ಮಾನವಸರಪಳಿ, ಮರಳಿನ ಕಲಾಕೃತಿ, ಮೊದಲಾದವುಗಳೊಂದಿಗೆ ಇತ್ತೀಚಿನ ಕಾಸ್ಮಿಕ್ ಕಲೆ, ತ್ಯಾಜ್ಯದಿಂದ ಕಲಾಕೃತಿ ನಿರ್ಮಾಣ ಮುಂತಾದವು ಜಗತ್ತಿನಲ್ಲಾಗುತ್ತಿರುವ ತಲ್ಲಣಗಳನ್ನು ಪ್ರಭುತ್ವಕ್ಕೆ ತಲುಪಲು ಇರುವ ಸಂವಹನ ಸಾಧನಗಳಾಗಿವೆ ಎಂದು ವಿವರಿಸಿದರು.ನೀನಾಸಮ್ ಅಧ್ಯಕ್ಷ ಸಿದ್ಧಾರ್ಥ ಭಟ್, ಕಾರ್ಯದರ್ಶಿ ಶರತ್ ಬಾಬು, ಕೆ.ವಿ.ಅಕ್ಷರ, ವಿವೇಕ ಶಾನಭಾಗ್, ಟಿ.ಪಿ.ಅಶೋಕ್, ಕುವೆಂಪು ವಿವಿ ವಿಸಿ ಶರತ್ ಅನಂತ ಮೂರ್ತಿ, ಜಯಂತ ಕಾಯ್ಕಿಣಿ, ಜಸವಂತ ಜಾಧವ್, ಎಸ್ತಾರ್ ಅನಂತಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.