- ದಿನೇ ದಿನೆ ಶಿಥಿಲಗೊಳ್ಳುತ್ತಾ ಅಪಾಯದಂಚಿಗೆ ತಲುಪಿದೆ । ಕನಿಷ್ಠ ಸುಣ್ಣ ಬಣ್ಣವೂ ಕಂಡಿಲ್ಲ । ತುಂಗಾ ನದಿ ಪ್ರವಾಹ ಉಂಟಾದರೆ ಸೇತುವೆ ಮಟ್ಟಕ್ಕೆ ಹರಿಯುವ ನೀರು । ಮರ್ಕಲ್- ನೆಮ್ಮಾರು ಪಂಚಾಯಿತಿ ನಡುವಿನ ಸಂಪರ್ಕ ಕೊಂಡಿ
ನೆಮ್ಮಾರ್ ಅಬೂಬಕರ್.ಕನ್ನಡಪ್ರಭ ವಾರ್ತೆ, ಶೃಂಗೇರಿಸೇತುವೆಯ ತಡೆಬೇಲಿಗಳು ತುಕ್ಕುಹಿಡಿದು ತುಂಡಾಗಿ ನೇತಾಡುತ್ತಿವೆ. ದಿನೇ ದಿನೆ ಶಿಥಿಲಗೊಳ್ಳುತ್ತಾ ಅಪಾಯದಂಚಿಗೆ ತಲುಪುತ್ತಿದೆ. ದಶಕಗಳು ಕಳೆಯುತ್ತಾ ಬಂದರೂ ಈ ತೂಗುಸೇತುವೆಗೆ ದುರಸ್ತಿ, ಸುಣ್ಣ ಬಣ್ಣದ ಭಾಗ್ಯ ಮಾತ್ರ ಕಂಡಿಲ್ಲ. ಇದು ಯಡದಳ್ಳಿ ಹೊಳೆಹದ್ದು ನೆಮ್ಮಾರು ಸಂಪರ್ಕ ಕಲ್ಪಿಸುವ ತೂಗು ಸೇತುವೆ ದುಸ್ಥಿತಿ. ಸೇತುವೆ ನಿರ್ಮಾಣಗೊಂಡು ದಶಕವೇ ಕಳೆದಿವೆ. ಈ ಸೇತುವೆ ಮೇಲೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ನಿರಂತರವಾಗಿ ಓಡಾಡುತ್ತಾರೆ. ಯಡದಳ್ಳಿ, ಹೆಕ್ತೂರು, ಹೊಳೆಹದ್ದು, ಸುಂಕದಮಕ್ಕಿ, ಕೋಡ್‌ಬಯಲು , ಕಿಗ್ಗಾ, ಕಡ್ಲೋಡಿ , ತೋರಣಗೆದ್ದೆ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೊಳೆಹದ್ದು, ಯಡದಳ್ಳಿ ಸುತ್ತಮುತ್ತಲ ಗ್ರಾಮಗಳಿಂದ ನೆಮ್ಮಾರಿಗೆ ಬರಬೇಕಾದರೆ ಹತ್ತಿರದ ಸಂಪರ್ಕ ರಸ್ತೆ ಈ ತೂಗು ಸೇತುವೆ.ಶಾಲೆ, ಆಸ್ಪತ್ರೆ, ಬ್ಯಾಂಕ್, ಅಂಚೆ ಕಚೇರಿ ಇತ್ಯಾದಿ ಅಗತ್ಯ ಕೆಲಸಗಳಿಗೆ ಈ ಸೇತುವೆ ಮೂಲಕ ಬರಲು ಅನುಕೂಲವಾಗಿದೆ. ಇಲ್ಲದಿದ್ದರೆ ಮಾಣಿಬೈಲು, ಹುಲ್ಲುಗಾರು, ತೋರಣಗದ್ದೆ ಮಾರ್ಗವಾಗಿ ಸುತ್ತಿಬಳಸಿ ಸುಮಾರು 15 ಕಿಲೋ ಮೀಟರ್ ಸುತ್ತು ಹಾಕಿ ಹೊಳೆಹೊದ್ದಿಗೆ ಬರಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ, ವಯೋವೃದ್ದರಿಗೆ ತೊಂದರೆಯಾಗುತ್ತದೆ. ಕಳೆದೆರೆಡು ವರ್ಷಗಳಿಂದ ಸೇತುವೆ ಸಂಪೂರ್ಣವಾಗಿ ಶಿಥಿಲಗೊಳ್ಳುತ್ತಿದೆ. ಕೆಲವೆಡೆ ತಡೆಬೇಲಿ ಮೇಲೆ ಮುಳ್ಳಿನ ಬಳ್ಳಿಗಳು ಹಬ್ಬಿಕೊಂಡಿವೆ. ಮಳೆಗಾಲದಲ್ಲಿ ತುಂಗಾನದಿ ಪ್ರವಾಹ ಈ ಸೇತುವೆ ಸಮತಟ್ಟಾಗಿ ಹರಿಯುತ್ತದೆ. ತಡೆಬೇಲಿ ಶಿಥಿಲಗೊಂಡು ತುಂಡಾಗಿರುವ ಈ ಸೇತುವೆ ಮೇಲೆ ಜೀವ ಅಂಗೈಯಲ್ಲಿಟ್ಟು ನಡೆದಾಡಬೇಕಾದ ದಯನೀಯ ಸ್ಥಿತಿ ಗ್ರಾಮಸ್ಥರಾಗಿದೆ. ಈ ಸೇತುವೆಯ ದುರಸ್ತಿಗೆ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ, ಜನಪ್ರತಿನಿದಿಗಳ ಗಮನಕ್ಕೆ ತಂದರೂ ಯಾವುದೇ ಫ್ರಯೋಜವಾಗಿಲ್ಲ. ಸೇತುವೆ ಹಂತಹಂತವಾಗಿ ಅಪಾಯದಂಚಿಗೆ ತಲುಪುತ್ತಿದೆ.ಸೇತುವೆಯ ತಡೆಬೇಲಿಗೆ ಬಣ್ಣವಿಲ್ಲದೇ ಅನೇಕ ದಶಕಗಳೇ ಕಳೆದಿವೆ. ನೇತಾಡುತ್ತಿರುವ ತಡೆಬೇಲಿ ಬಳಿ ಸ್ವಲ್ಪ ಎಡವಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಆದರೂ ಸಂಬಧಪಟ್ಟ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಪಾಯದ ಮಟ್ಟ ಮೀರಿ ತುಂಗಾ ನದಿ ಪ್ರವಾಹ ಹರಿಯುತ್ತಿರುವ ಸಂದರ್ಭದಲ್ಲಿ ಈ ಶಿಥಿಲಗೊಂಡ ಸೇತುವೆ ಮೇಲೆ ನಡೆಯುವುದೂ ಅನಿವಾರ್ಯವಾಗಿದೆ. ಮರ್ಕಲ್ ಮತ್ತು ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ನಡುವೆ ಇರುವ ಈ ತೂಗು ಸೇತುವೆಗೆ ಗಡಿ ಗ್ರಾಮ ಎಂಬುದನ್ನು ಮರೆತು ಸರ್ಕಾರ ಅನುದಾನ ಬಿಡುಗಡೆಗೊಳಿಸಿ ದುರಸ್ತಿಗೆ ಮುಂದಾಗಬೇಕಿದೆ. ನೆರೆ, ಪ್ರವಾಹ ಸಂದರ್ಭಗಳಲ್ಲಿ ಅನೇಕ ಕಡೆಗಳಲ್ಲಿ ಹಳ್ಳ, ಕಾಲು ಸಂಕಗಳಲ್ಲಿ ಬಿದ್ದು ಅನೇಕ ಜೀವಬಲಿಯಾದ ಜ್ವಲಂತ ಘಟನೆಗಳು ನಮ್ಮ ಕಣ್ಮುಂದೆ ಇದೆ. ಇಂತಹ ನಿರ್ಲಕ್ಷಗಳೇ ಅವಗಢಗಳಿಗೆ ಕಾರಣಗಳಾಗಿವೆ. ಇಂತಹ ಅನಾಹುತಗಳು ಸಂಭವಿಸುವ ಮುನ್ನ ಸರ್ಕಾರ, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ನಿರ್ಭಯವಾಗಿ ಈ ಸೇತುವೆ ಮೇಲೆ ಓಡಾಡಲು ಅನುಕೂಲವಾಗುವಂತೆ ತೂಗು ಸೇತುವೆಯನ್ನು ಕೂಡಲೇ ದುರಸ್ತಿಪಡಿಸಬೇಕಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತಡೆಬೇಲಿಯನ್ನು ಬದಲಾಯಿಸಬೇಕಿದೆ. ತೂಗುಸೇತುವೆಗೆ ಸುಣ್ಣಬಣ್ಣ ಸಹಿತ ಕಾಯಕಲ್ಪ ಒದಗಿಸಬೇಕಿದೆ. ಇನ್ನಾದರೂ ಸರ್ಕಾರ, ಜನಪ್ರತಿನಿದಿಗಳು ಈ ತೂಗುಸೇತುವೆಗೆ ದುರಸ್ತಿಭಾಗ್ಯ ಕಲ್ಪಿಸಲು ಮುಂದಾಗಬೇಕು.-- ಬಾಕ್ಸ್--
ಜನರಿಗೆ ತೊಂದರೆ--- ತೂಗು ಸೇತುವೆ ನಿರ್ಮಾಣಗೊಂಡು ಅನೇಕ ವರ್ಷಗಳೇ ಕಳೆದರೂ ಸೇತುವೆಗೆ ಕಾಯಕಲ್ಪ ಒದಗಿಸಿಲ್ಲ. ಹಂತಹಂತವಾಗಿ ಶಿಥಿಲಗೊಳ್ಳುತ್ತಿವೆ. ತಡೆಬೇಲಿಗಳು ತುಂಡಾಗಿರುವುದರಿಂದ ಗಾಳಿ ಮಳೆ ಸಂದರ್ಭದಲ್ಲಿ ಹೆಂಗಸರು, ಮಕ್ಕಳು, ವೃದ್ದರು ಓಡಾಡುವಾಗ ಭಯವಾಗುತ್ತದೆ. ನಮಗೆ ಹತ್ತಿರದ ಸಂಪರ್ಕ ರಸ್ತೆ ಇದಾಗಿರುವುದರಿಂದ ಇದನ್ನು ಕೂಡಲೇ ದುರಸ್ತಿ ಪಡಿಸಬೇಕಿದೆ. -ಲಕ್ಷಮಣ .ಗ್ರಾಮಸ್ಥ.ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಸಂಬಂಧಪಟ್ಟ ಇಲಾಖೆ, ಸರ್ಕಾರ, ಜನಪ್ರತಿನಿಧಿಗಳು ಇನ್ನಾದರೂ ಕೂಡಲೇ ಗ್ರಾಮಸ್ಥತರ ಸಮಸ್ಯೆಗೆ ಸ್ಪಂದಿಸ ಬೇಕು. ಅಗತ್ಯ ಅನುದಾನ ಬಿಡುಗಡೆಗೊಳಿಸಿ ಈ ತೂಗುಸೇತುವೆ ದುರಸ್ತಿಗೆ ಮುಂದಾಗಬೇಕು.ಅನಾಹುತಗಳು ಉಂಟಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. -ರಾಘವೇಂದ್ರ ಗ್ರಾಮಸ್ಥ.9 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಯಡದಳ್ಳಿ ನೆಮ್ಮಾರು ಸಂಪರ್ಕ ತೂಗುಸೇತುವೆ ಶಿಥಿಲಾವಸ್ಥೆಯಲ್ಲಿರುವುದು.