ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜನಪದ ಕಲೆಗಳು ಈ ಮಣ್ಣಿನ ಸಂಸ್ಕೃತಿಗಳು, ರಂಗಭೂಮಿ, ಜನಪದ ಗೀತೆಗಳು, ಕಲಾ ನೃತ್ಯಗಳು, ಸೋಬಾನೆ ಪದಗಳು, ಹರಿಕಥೆಗಳು, ಸೇರಿದಂತೆ ಮುಂತಾದ ಕಲೆಗಳನ್ನು ಇಂದಿನ ಯುವಸಮೂಹ ಕಲಿಯುವ ಮೂಲಕ ಜನಪದ ಸೊಗಡನ್ನು ಉಳಿಸುವಲ್ಲಿ ಮುಂದಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಜಾನಪದ ಉತ್ಸವ-೨೦೨೫ ಕಾರ್ಯಕ್ರಮವನ್ನು ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಯುವ ಪೀಳಿಗೆ ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗದೆ ದೇಶಿ ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ಅರಿತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಪ್ರಸ್ತುತವಾಗಿದೆ. ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಜನಪದ ಸಾಹಿತ್ಯದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು.
ನಾಟಕ ಹಾಗೂ ಜಾನಪದದ ಬಗ್ಗೆ ತಿಳಿದಿರುವ ಕಲಾವಿದರು ತಂಡಗಳನ್ನು ಕಟ್ಟಿಕೊಂಡು ಎಲ್ಲೆಡೆ ಪ್ರದರ್ಶನ ನೀಡಿ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಜನಪದ ಕಲೆಗಳ ಮಾಹಿತಿ ಇಲ್ಲವಾಗುವುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಇಂತಹ ಯುವ ಪೀಳಿಗೆ ಜಾನಪದ ಹಾಗೂ ದೇಶಿ ಸಂಸ್ಕೃತಿಯ ಮಹತ್ವ ಅರಿಯಬೇಕಿದೆ. ಓದಿನ ಜೊತೆಯಲ್ಲಿ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ಮನ್ನಣೆ ಪಡೆಯಲು ಸಾಧ್ಯವಾಗುವುದು ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದು, ವಿದ್ಯಾರ್ಥಿಗಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಬಿಸಿಎ ನೂತನ ಕೋರ್ಸ್ ಅನ್ನು ಪಾರಂಭಿಸಿದ್ದು ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ತರಲು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಬಯಲು ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ.ಚಂದ್ರು ಕಾಳೇನಹಳ್ಳಿ ಮಾತನಾಡಿ, ಆಧುನೀಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಅಳಿಯಲು ಅವಕಾಶ ನೀಡಬಾರದು. ಜನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ, ಜನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ಯ ಅಡಗಿದೆ. ಹಾಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂತಹ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು. ಜನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು.ಜಾನಪದ ಇಲ್ಲದ ಜೀವನವಿಲ್ಲ:
ನಮ್ಮ ಸಂಸ್ಕೃತಿಯ ಜೀವಂತಿಕೆ ಉಳಿಸುವ ಶಕ್ತಿ ಇರುವುದು ಜಾನಪದ ಸಾಹಿತ್ಯಕ ಮಾತ್ರ, ಜನಪದ ಹಾಡುಗಳು ಮನುಷ್ಯನ ಜೀವನ ಮತ್ತು ಪರಿಸರದ ಸೊಗಡನ್ನು ಪ್ರತಿಬಿಂಬಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿವೆ. ನೆಲ-ಜಲ, ಮನುಷ್ಯನ ಹಾವ-ಭಾವ, ಪ್ರಕೃತಿಯ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಜಾನಪದ ಸಾಹಿತ್ಯದಲ್ಲಿ ನಮ್ಮ ಹಿರಿಯರು ರಚಿಸಿದ್ದಾರೆ. ಎಲ್ಲ ಸಾಹಿತ್ಯದ ಮೂಲ ಬೇರು ಜಾನಪದ ಹಾಡುಗಳಾಗಿವೆ. ಮನಸಿನ ನೋವು ಮತ್ತು ಬೇಸರವನ್ನು ನೀಗಿಸಿ ಸುಜ್ಞಾನ ಅರಳಿಸುವ ಔಷಧವಾಗಿ ಜಾನಪದ ಹಾಡುಗಳು ಕಾರ್ಯನಿರ್ವಸುತ್ತವೆ ಇದೊಂದು ಸಡಗರದ ಹಬ್ಬ, ಜನಪದ ನಮ್ಮ ಸಂಸ್ಕೃತಿ, ತತ್ವ ಮತ್ತು ಸಿದ್ಧಾಂತದ ಮೂಲವಾಗಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಯುಗದಲ್ಲೂ ನಾವು ನಮ್ಮತನ, ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದರು.ಜಾನಪದ ಲೋಕ ಸೃಷ್ಟಿ:
ಜಾನಪದ ಉತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ಆವರಣವನ್ನು ಜನಪದ ವಸ್ತುಗಳಿಂದ ಅಲಂಕರಿಸಿ ಜಾನಪದ ಲೋಕವನ್ನೇ ಸೃಷ್ಟಿಸಲಾಗಿತ್ತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು. ಕಾಲೇಜಿನ ಮುಂಭಾಗ ಹಸಿರು ಗರಿಯ ಚಪ್ಪರವನ್ನು ಹಾಕಿ ರಾಗಿ, ಭತ್ತ, ಜೋಳ, ಅವರೆ, ತೊಗರಿ, ಹುರುಳಿ ಇತ್ಯಾದಿ ಆಹಾರ ಧಾನ್ಯ, ತೆಂಗು, ಅಡಿಕೆ ಜೊತೆಗೆ ಪೂರ್ವಜರು ಬಳಸುತ್ತಿದ್ದ ಒನಕೆ, ಕಡುವಳು ಬೀಸುವ ಕಲ್ಲು, ರುಬ್ಬು ಗುಂಡು, ಮಣ್ಣಿನ ಒಲೆ, ಪಾತ್ರ ಇತ್ಯಾದಿ ವಸ್ತುಗಳಿಂದ ಇಡೀ ಕಾಲೇಜಿನ ಆವರಣವನ್ನೇ ಅಲಂಕರಿಸಲಾಗಿತ್ತು.ಕಾರ್ಯಕ್ರಮದ ಅತಿಥಿಗಳನ್ನು ಮುಖ್ಯ ರಸ್ತೆಯಿಂದ ಜಾನಪದದ ಸೊಗಡಿನೊಂದಿಗೆ ಡೋಲು, ನಗಾರಿ, ಆರೇವಾದ, ಚೆಟ್ಟಿಮೇಳ, ಕೋಲಾಟ ಇತ್ಯಾದಿ ಜನಪದ ಕಲಾತಂಡಗಳೊಂದಿಗೆ ವೇದಿಕೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆಯ ಉದ್ದಕ್ಕೂ ತಮಟೆ, ಡೋಲು, ವಾದ್ಯಗಳ ತಾಳಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಎಸ್. ಎಚ್. ಗಂಗೇಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಹಪ್ರಾಧ್ಯಾಪಕರಾದ ಡಾ.ಕೆ.ಎಂ.ಮಂಜುಳಾ, ಡಾ. ಕೆ.ಬಿ.ಆಶಾ, ಡಾ.ಬಿ.ಎಸ್. ಪೂರ್ಣಿಮಾ, ಕನ್ನಡ ಶಾಸ್ತ್ರ ವಿಭಾಗದ ಗುರುರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್, ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.