ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಣ ಅಗತ್ಯ: ಡಾ.ಎಚ್.ಎಸ್.ಬಲ್ಲಾಳ್

KannadaprabhaNewsNetwork | Published : Nov 6, 2024 12:44 AM

ಸಾರಾಂಶ

ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಗೀತಾಂಜಲಿ ಸಭಾಂಗಣದಲ್ಲಿ ಉಡುಪಿ ರಂಗಭೂಮಿ ಸಂಸ್ಥೆಯ ೬೦ರ ಸಂಭ್ರಮಾಚರಣೆ ನಡೆಯಿತು. ಈ ವೇಳೆ ಶಾಲೆಯಲ್ಲಿ ರಂಗಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಾಡಿನ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಉಡುಪಿ ರಂಗಭೂಮಿ, ಈಗ ೬೦ರ ಸಂಭ್ರಮದ ಆಚರಣೆಯಂಗವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆ ರಂಗಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು ಮಾಹೆ ಸಹಕುಲಾಧಿಪತಿ, ಉಡುಪಿ ರಂಗಭೂಮಿಯ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.ಅವರು ನಗರದ ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಗೀತಾಂಜಲಿ ಸಭಾಂಗಣದಲ್ಲಿ ಉಡುಪಿ ರಂಗಭೂಮಿ ಸಂಸ್ಥೆಯ ೬೦ರ ಸಂಭ್ರಮಾಚರಣೆಯನ್ನು ಉದ್ಘಾಟಿಸಿ, ರಂಗಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಭೂಮಿಯನ್ನು ಕಟ್ಟಿ ಬೆಳೆಸಿದ್ದು ದಿ.ಆನಂದ ಗಾಣಿಗ ಅವರು. ಶಾಲಾ ಕಾಲೇಜು ಹಂತದಲ್ಲಿ ರಂಗ ಶಿಕ್ಷಣ ನೀಡಬೇಕು ಎನ್ನುವ ಮಹಾತ್ವಾಕಾಂಕ್ಷೆಯಡಿ ರಂಗಶಿಕ್ಷಣ ಹಾಗೂ ರಂಗ ಭಾಷೆ ಎಂಬ ಯೋಜನೆಗಳನ್ನು ರಂಗಭೂಮಿ ಹಮ್ಮಿಕೊಂಡಿದೆ. ಪ್ರಸ್ತುತ ಉಡುಪಿಯ ೧೩ ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶವಿದೆ ಎಂದರು.ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎಸ್.ರಾಜಗೋಪಾಲ ಬಲ್ಲಾಳ್, ರಂಗ ಶಿಕ್ಷಣ ಯೋಜನೆಯ ಸಂಚಾಲಕ ವಿದ್ಯಾವಂತ ಆಚಾರ್ಯ, ಸಹ ಸಂಚಾಲಕರಾಜ ಡಾ.ವಿಷ್ಣುಮೂರ್ತಿ ಪ್ರಭು ಮತ್ತು ರವಿರಾಜ ನಾಯಕ್ ಉಪಸ್ಥಿತರಿದ್ದರು.

------------ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗಿ

ಉಡುಪಿಯ ಆಯ್ದ ಪ್ರೌಢಶಾಲೆಗಳಲ್ಲಿ ನವಂಬರ್ - ಡಿಸೆಂಬರ್‌ನಲ್ಲಿ ರಂಗ ತರಬೇತಿ ಮತ್ತು ನಾಟಕ ನಿರ್ಮಾಣವನ್ನು ರಂಗಶಿಕ್ಷಣ ಮತ್ತು ರಂಗಭಾಷೆಯ ಮೂಲಕ ಕೈಗೆತ್ತಿಕೊಳ್ಳಲಾಗುವುದು. ಇಲ್ಲಿ ರಚನೆಗೊಂಡ ನಾಟಕಗಳನ್ನು ಶಾಲಾ ವಾರ್ಷಿಕೋತ್ಸವದಲ್ಲಿ ಹಾಗೂ ರಂಗಭೂಮಿಯ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಂಗಭೂಮಿ ರಸಗ್ರಹಣ ಶಿಬಿರ ಆಯೋಜಿಸಲಾಗಿದೆ.

ಈ ಶಿಬಿರಗಳಲ್ಲಿ ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಸಿದ್ಧ ರಂಗಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಕೆ.ಜೆ.ಕೃಷ್ಣಮೂರ್ತಿ, ಶ್ವೇತಾ ಎಚ್.ಕೆ. ಮೊದಲಾದ ಸಂಪನ್ಮೂಲ ವ್ಯಕ್ತಿಗಳಾಗಿ ಕೈ ಜೋಡಿಸಲಿದ್ದಾರೆ.

Share this article