ಅಸೆಂಬ್ಲಿ ಟಿಕೆಟ್‌ ವಂಚಿತ 15 ಜನಕ್ಕೆ ನಿಗಮ-ಮಂಡಳಿ ಪಟ್ಟ?

KannadaprabhaNewsNetwork |  
Published : Jan 05, 2024, 01:45 AM ISTUpdated : Jan 05, 2024, 03:23 PM IST
ವಿಧಾನಸೌಧ | Kannada Prabha

ಸಾರಾಂಶ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತ 15 ಮಂದಿ ಕಾಂಗ್ರೆಸ್‌ ನಾಯಕರಿಗೆ ನಿಗಮ ಮಂಡಳಿಯ ಪಟ್ಟ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಕ್ಷ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್‌ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಕಣದಿಂದ ಹಿಂದೆ ಸರಿದು ಪಕ್ಷ ನಿಷ್ಠೆ ತೋರಿದ ಮುಖಂಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಗಾದಿ ದೊರೆಯುವ ಸಾಧ್ಯತೆಯಿದೆ.

ನಿಗಮ-ಮಂಡಳಿಗೆ ಕಾರ್ಯಕರ್ತರಿಗೆ ಅವಕಾಶ ನೀಡಲು ಸಿದ್ಧಪಡಿಸುವ ಪಟ್ಟಿಯಲ್ಲಿ ಇಂತಹ 12ರಿಂದ 15 ಮಂದಿ ಮುಖಂಡರಿಗೆ ಮೊದಲ ಆದ್ಯತೆ ನೀಡುವಂತೆ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್‌ ನಿರ್ದೇಶನ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್‌ನ ವರಿಷ್ಠರು ತಾವು ನೀಡಿದ ಭರವಸೆ ಹಿನ್ನೆಲೆಯಲ್ಲಿ ಚುನಾವಣೆ ಕಣದಿಂದ ಹಿಂದೆ ಸರಿದ 12ರಿಂದ 15 ಮಂದಿ ಮುಖಂಡರ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ರಾಜ್ಯ ನಾಯಕತ್ವವು, ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಮೂರು ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ಶಾಸಕರಾಗಿರುವ ಸುಮಾರು 30ರಿಂದ 35 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಿದೆ. ಆದರೆ, ಕೇವಲ ಶಾಸಕರಿಗೆ ಹುದ್ದೆ ನೀಡಲು ಒಪ್ಪದ ಹೈಕಮಾಂಡ್‌, ಕಾರ್ಯಕರ್ತರಿಗೆ ಅದರಲ್ಲೂ ವಿಶೇಷವಾಗಿ ಚುನಾವಣೆ ವೇಳೆ ತಮ್ಮಿಂದ ಭರವಸೆ ಪಡೆದಿರುವ ಮುಖಂಡರಿಗೆ ಹುದ್ದೆ ನೀಡುವ ಒಲವು ಹೊಂದಿದ್ದು, ಇಂತಹ ಪಟ್ಟಿ ಸಿದ್ಧಪಡಿಸುವಂತೆ ನಾಯಕತ್ವಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ದಿಲ್ಲಿ ಕಾಂಗ್ರೆಸ್‌ ಸಭೆಯಲ್ಲಿ ಚುನಾವಣೆ ಸಿದ್ಧತೆ ಚರ್ಚೆ :  ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಎರಡು ಪ್ರತ್ಯೇಕ ಸಭೆಗಳಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಹಾಗೂ ಲೋಕಸಭೆ ಚುನಾವಣೆ ಸಿದ್ಧತೆ, ಪ್ರಣಾಳಿಕೆ ರಚನೆ ಕುರಿತು ಮಹತ್ವದ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಯಾವ ಕ್ರಮ ಕೈಗೊಳ್ಳಬೇಕು? ಯಾರಿಗೆ ಯಾವ ರೀತಿಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌