ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ ಮರೀಚಿಕೆಯಾಗಿದ್ದು, ೩೫ ವಾರ್ಡ್‌ನ ಸದಸ್ಯರು ಯಾವುದೇ ಅಧಿಕಾರವಿಲ್ಲದೆ ನಾಮ್‌ಕೇವಾಸ್ತೆ ಸದಸ್ಯರಾಗಿದ್ದಾರೆ. ಈ ಸದಸ್ಯರ ಸಾಲಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ನಾಲ್ವರು ಸದಸ್ಯರು ಇದೀಗ ಸೇರ್ಪಡೆಯಾಗಿದ್ದಾರೆ.ಮಂಡ್ಯ ಹಳೇನಗರದ ಎಂ.ಎನ್.ಹರ್ಷ, ತಾವರೆಗೆರೆಯ ಜಬೀವುಲ್ಲಾ, ಅರಕೇಶ್ವರನಗರ ಗೌತಮ ಬಡಾವಣೆಯ ಕೇಶವ, ಗಾಂಧೀನಗರದ ಟಿ.ಹರೀಶ್‌ಕುಮಾರ್ ಅವರನ್ನು ಕರ್ನಾಟಕ ಪುರಸಭೆ ಕಾಯ್ದೆ ೧೯೬೪ರ ಪ್ರಕರಣ ೧೧(೧)(ಬಿ)ರಡಿಯಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಈಗಾಗಲೇ ೨೦೨೩ರ ಏಪ್ರಿಲ್ ತಿಂಗಳಿಂದ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ. ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಇದುವರೆಗೂ ಸರ್ಕಾರ ಆಸಕ್ತಿ ತೋರಿಲ್ಲ. ಹಾಲಿ ೩೫ ನಗರಸಭೆ ಸದಸ್ಯರು ಯಾವುದೇ ಅಧಿಕಾರವಿಲ್ಲದೆ ಹೆಸರಿಗಷ್ಟೇ ಸದಸ್ಯರಾಗಿ ಉಳಿದುಕೊಂಡಿದ್ದಾರೆ. ಸದಸ್ಯರಾಗಿ ವಾರ್ಡ್‌ನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗದೆ ಅಸಹಾಯಕರಾಗಿ ಅಸಮಾಧಾನ, ಆಕ್ರೋಶ ಹೊರಹಾಕುತ್ತಿದ್ದಾರೆ.ಇದರ ನಡುವೆ ರಾಜ್ಯ ಸರ್ಕಾರ ಮತ್ತೆ ನಾಲ್ವರು ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿರುವುದು ಹಾಸ್ಯಾಸ್ಪದ ಎನಿಸಿದೆ. ಈಗಾಗಲೇ ಜನರಿಂದ ಆಯ್ಕೆಯಾದ ಸದಸ್ಯರಿಗೇ ಕೆಲಸವಿಲ್ಲದಿರುವಾಗ ಹೊಸ ಸದಸ್ಯರಿಗೆ ನೇಮಿಸಿದ್ದು ಯಾವ ಪುರುಷಾರ್ಥಕ್ಕೆ. ಇವೆಲ್ಲವೂ ಯಾವುದೇ ಅಧಿಕಾರವಿಲ್ಲದಿದ್ದರೂ ಅಧಿಕಾರ ಕೊಟ್ಟಂತೆ ತೋರಿಸಿಕೊಳ್ಳುವ ತಂತ್ರದ ಭಾಗವಷ್ಟೇ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇದ್ದಂತಿಲ್ಲ. ಜಿಪಂ-ತಾಪಂ ಅವಧಿ ಮುಗಿದು ಮೂರು ವರ್ಷಗಳಾದರೂ ಈವರೆಗೆ ಚುನಾವಣೆ ನಡೆಸಿಲ್ಲ. ನಗರಸಭೆ ಮೊದಲ ಅವಧಿ ಮುಕ್ತಾಯವಾದರೂ ಚುನಾವಣೆ ನಡೆಸುವ ಮನಸ್ಸಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನ ಆಳುವ ಸರ್ಕಾರಗಳಿಂದ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ.ನಗರಸಭೆ ಸದಸ್ಯರಿಗೆ ಯಾವುದೇ ಅಧಿಕಾರವಿಲ್ಲದಿರುವುದರಿಂದ ವಾರ್ಡ್‌ನೊಳಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಗರೋತ್ಥಾನ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಅದನ್ನು ಯಾರ ಬಳಿಯೂ ಪ್ರಶ್ನಿಸಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳೇ ನಗರಸಭೆ ಆಡಳಿತಾಧಿಕಾರಿಯಾಗಿದ್ದು, ಅವರ ಬಳಿ ಸಮಸ್ಯೆ ಹೇಳಿಕೊಂಡರೂ ಬಗೆಹರಿಯುತ್ತಿಲ್ಲ. ಒಂದು ಬೀದಿದೀಪ ಹಾಕಿಸಿಕೊಳ್ಳುವುದಕ್ಕೆ, ಕಸವನ್ನು ತೆರವುಗೊಳಿಸುವುದಕ್ಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆಯಿಂದ ಹೇಳುತ್ತಿದ್ದಾರೆ.
ಹಲವು ಸದಸ್ಯರು ನಗರಸಭೆಗೆ ಬರುವುದನ್ನೇ ಬಿಟ್ಟಿದ್ದಾರೆ. ಅಲ್ಲಿಗೆ ಬಂದರೂ ಯಾವ ಕೆಲಸ ಆಗುವುದಿಲ್ಲ. ಇನ್ನು ಬಂದು ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾ, ಚುನಾವಣೆ ನಡೆಸದ ರಾಜ್ಯಸರ್ಕಾರದ ನಡೆಯನ್ನು ಶಪಿಸುತ್ತಾ ಗೊಣಗುತ್ತಲೇ ವಾಪಸಾಗುತ್ತಿದ್ದಾರೆ.