ನರಗುಂದ: ಭಾರತದ ಮೇಲೆ ಆಕ್ರಮಣ ಮಾಡಿ ಲೂಟಿಗೈದು, ಮಹಿಳೆಯರ ಮಾನಹರಣ ಮಾಡಿದ ಔರಂಗಜೇಬ, ಘಜನಿ ಮಹಮ್ಮದ ಇವರೆಲ್ಲರ ವಿರುದ್ಧ ಮಹಿಳೆಯರೇ ಹೋರಾಡಿದ್ದಾರೆ. ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಸಾಧನೆ ಮಾಡುವಲ್ಲಿ ಪುರುಷರು ಹಿಂದೆ ಬಿದ್ದಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಪುರುಷರ ದಿನ ಆಚರಣೆ ಮಾಡಬೇಕೆಂದು ನರಗುಂದ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಮುನ್ಯಾಳ ಹೇಳಿದರು. ಅವರು ಪುರಸಭೆ ಆವರಣದಲ್ಲಿ ಶುಕ್ರವಾರ ಸಂಜೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿವರಾತ್ರಿಯ 88ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ, ಕಾನೂನು ಮತ್ತು ಆಧ್ಯಾತ್ಮ ವಿಷಯದ ಕುರಿತು ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಂಡೇಲಿ ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪೂರ ಮಾತನಾಡಿ, ಕಾನೂನು ಮತ್ತು ಆಧ್ಯಾತ್ಮ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ಮನಸ್ಸಿನಲ್ಲಿ ನಾವೇನೇ ಯೋಚಿಸಲಿ ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ಇಲ್ಲ. ಅಪರಾಧ ಮಾಡಿ ಜೈಲುವಾಸ ಅನುಭವಿಸಿ ಶಿಕ್ಷೆಗೊಳಗಾದ ವ್ಯಕ್ತಿ ಪಶ್ಚಾತ್ತಾಪ ಪಡುತ್ತಾನೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರ ಮತ್ತು ದೈವಭಕ್ತಿಯನ್ನು ಕಲಿಸಿದರೆ ಆ ಕುಟುಂಬ ಸುಖಿಃಭವ ಆಗುತ್ತದೆ. ಸಂಸ್ಕಾರವಿಲ್ಲದಿದ್ದರೆ ಜಗತ್ತಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತವೆ. ಇತ್ತೀಚೆಗೆ ಯುವಕರು ಡ್ರಗ್ಸಗೆ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಾತಿ ಮತ ಇವುಗಳನ್ನು ಮನುಷ್ಯರು ಮಾಡಿದ್ದು, ಹುಟ್ಟಿನಿಂದ ನಾವೆಲ್ಲರೂ ಒಂದೇ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲ ಬಿ. ಎನ್. ಭೋಸಲೆ ಮಾತನಾಡಿ, ಜೀವನದಲ್ಲಿ ಸಂಸ್ಕಾರವಂತರಾಗಿ, ಸನ್ಮಾರ್ಗದಲ್ಲಿ ನಡೆಯಬೇಕಾದರೆ ಮೌಲ್ಯಾಧಾರಿತ ಶಿಕ್ಷಣ ಪಡೆಯುವುದೊಂದೇ ಪರಿಹಾರ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರನ್ನು ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.