ಶಿಗ್ಗಾಂವಿ: ಬರುವ ೧೩ರಂದು ಉಪ ಚುನಾವಣೆಯು ಜರುಗುತ್ತಿದ್ದು, ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರ ೩ ಕಡೆ ಕಾಂಗ್ರೆಸ್ ಅಲೆ ಇದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮತಯಾಚನೆ ಪ್ರಕಾರ 3 ಕಡೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ಇದೆ. ೪ ಬಾರಿ ಆಯ್ಕೆಯಾದ ಬೊಮ್ಮಾಯಿ ಅವರ ಕೊಡುಗೆ ಈ ಕ್ಷೇತ್ರಕ್ಕೆ ಶೂನ್ಯ, ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ ಎಂಜಿನ್ ಸರ್ಕಾರ ಮೂಲಕ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಯಾವ ದೃಷ್ಟಿಯಿಂದ ಇವರು ಮತ ಕೇಳುತ್ತಾರೆ? ಅಭ್ಯರ್ಥಿ ಭರತ ಬೊಮ್ಮಾಯಿ ಕ್ಷೇತ್ರದಲ್ಲಿ ಯಾವುದೇ ಸೇವೆ ಸಲ್ಲಿಸದೇ ಇರುವ ಅಭ್ಯರ್ಥಿಗೆ ಟಿಕೆಟ್ ನೀಡಿ, ಪಂಚಮಸಾಲಿ ಸಮಾಜದ ಯುವ ಮುಖಂಡನಿಗೆ ವಂಚಿಸಿದ್ದಾರೆ. ಜಾತಿ-ಜಾತಿ, ಧರ್ಮ- ಧರ್ಮಗಳಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ.
ಕಾಂಗ್ರೆಸ್ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ, ಲಕ್ಷಾಂತರ ಜನರ ದೀನದಲಿತ, ಹಿಂದುಳಿದ ಕುಟುಂಬಗಳಿಗೆ ಆರ್ಥಿಕವಾಗಿ ಸಬಲೀಕರಣವಾಗಲು ಕಾರಣಿಕರ್ತರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಬರೇ ಸುಳ್ಳು ಹೇಳುವ ಪಕ್ಷವಾಗಿದೆ. ಭಾರತೀಯ ಗೂಂಡಾ ಪಕ್ಷವಾಗಿದೆ. ಮಹಾರಾಷ್ಟ್ರದಲ್ಲಿ ನಮ್ಮದೇ ಸರಕಾರ ರಚನೆಯಾಗುತ್ತಿದೆ. ನಮ್ಮ ಪಕ್ಷಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಮೂರುವರೇ ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಅದು ನಿರಂತರವಾಗಿ ನಡೆಯಲು ಕಾಂಗ್ರೆಸ್‌ಗೆ ಮತದಾನ ಮಾಡುವುದರ ಮೂಲಕ ಯಾಸೀರಖಾನ ಪಠಾಣ ಕ್ಷೇತ್ರದ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದರು. ವಿ.ಪ. ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಶಾಸಕ ರಮೇಶ ಕೋನರಡ್ಡಿ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಇದ್ದರು.