ಬರವಿದೆ, ಚುನಾವಣೆ ನೆಪ ಹೇಳದೇ ಅಗತ್ಯತೆ ಪೂರೈಸಿ

KannadaprabhaNewsNetwork |  
Published : Mar 02, 2024, 01:46 AM IST
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ವಿಜಯೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯಾದ್ಯಂತ ಬರಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ದಿಸೆಯಲ್ಲಿ ತಾಲೂಕು ಹೊರತಾಗಿಲ್ಲ. ಅಧಿಕಾರಿಗಳು ಚುನಾವಣೆ ನೆಪದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ನೀರಿನ ಬವಣೆಯಿಂದ ಬಳಲುತ್ತಿರುವವರಿಗೆ ನೀರು, ರೈತರಿಗೆ ಸಕಾಲಕ್ಕೆ ವಿದ್ಯುತ್ ಸಹಿತ ಗ್ರಾಮೀಣ ಪ್ರದೇಶದ ಜನತೆಗೆ ಅನಿವಾರ್ಯ ಅಗತ್ಯತೆಗಳನ್ನು ತುರ್ತಾಗಿ ಪೂರೈಸಬೇಕು ಎಂದು ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಾಕೀತು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ರಾಜ್ಯಾದ್ಯಂತ ಬರಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ದಿಸೆಯಲ್ಲಿ ತಾಲೂಕು ಹೊರತಾಗಿಲ್ಲ. ಅಧಿಕಾರಿಗಳು ಚುನಾವಣೆ ನೆಪದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ನೀರಿನ ಬವಣೆಯಿಂದ ಬಳಲುತ್ತಿರುವವರಿಗೆ ನೀರು, ರೈತರಿಗೆ ಸಕಾಲಕ್ಕೆ ವಿದ್ಯುತ್ ಸಹಿತ ಗ್ರಾಮೀಣ ಪ್ರದೇಶದ ಜನತೆಗೆ ಅನಿವಾರ್ಯ ಅಗತ್ಯತೆಗಳನ್ನು ತುರ್ತಾಗಿ ಪೂರೈಸಬೇಕು ಎಂದು ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕುಮಟ್ಟದ ಅಧಿಕಾರಿಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಬರಗಾಲದ ತೀವ್ರತೆ ಹೆಚ್ಚಾಗುತ್ತಿದ್ದು, ಆರಂಭದಲ್ಲಿಯೇ ನೀರಿನ ತೀವ್ರ ಸಮಸ್ಯೆ ತಲೆದೋರುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಮೂಲಕ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಚುನಾವಣೆಯ ನೆಪದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳದೇ, ನೀರಿನ ಬವಣೆಯಿಂದ ಜನತೆ ಬಳಲದಂತೆ ಸಮರ್ಪಕ ಸರಬರಾಜಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ರೈತರು ವಿದ್ಯುತ್ ಸಮಸ್ಯೆ ಕೊರತೆಯಿಂದ ಸಂಕಷ್ಟ ಅನುಭವಿಸದಂತೆ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಜತೆ ಅಧಿಕಾರಿಗಳು ಸಂಯಮದಿಂದ ವರ್ತಿಸಬೇಕು, ಸೌಲಭ್ಯಕ್ಕಾಗಿ ಕಚೇರಿಗೆ ಧಾವಿಸುವ ಜನತೆಯನ್ನು ಪದೇಪದೇ ಅಲೆದಾಡಿಸದಂತೆ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದಲ್ಲಿ ಮಾತ್ರ ದೇವರು ಮೆಚ್ಚುತ್ತಾನೆ. ಬಡಜನತೆ, ರೈತರ ಸ್ಥಾನದಲ್ಲಿದ್ದು ಯೋಚಿಸಿದಾಗ ಅವರ ಸಂಕಷ್ಟ ಅರ್ಥವಾಗಲಿದೆ ಎಂದು ತಿಳಿಸಿದರು.

ತಾಪಂ ಇಒ ರಾಜಣ್ಣ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ 8 ಗ್ರಾಮದಲ್ಲಿದ್ದು, ಟಾಸ್ಕ್ ಫೋರ್ಸ್‌ ಮೂಲಕ ₹25 ಲಕ್ಷ ಮಂಜೂರಾಗಿದೆ. ತುರ್ತು ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದಲ್ಲಿ ಬೋರ್‌ವೆಲ್ ತೆಗೆಸಿ, ಪರಿಹರಿಸಲಾಗುವುದು. ನೀರಿನ ಸಮಸ್ಯೆ ತಲೆದೋರಿದಲ್ಲಿ ತಹಸೀಲ್ದಾರ್ ಗಮನಕ್ಕೆ ತಂದರೆ ತ್ವರಿತ ಕ್ರಮ ಕೈಗೊಳ್ಳಲಾಗುವುದು. 2 ಸಾವಿರ ಲೀ. ಟ್ಯಾಂಕ್ ಖರೀದಿಸಿ, ನೀರು ತುಂಬಿಸಿ, ವಿತರಿಸಲಾಗುವುದು ಎಂದು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಶೇ.90 ಮನೆಗೆ ನಲ್ಲಿ ಅಳವಡಿಸಲಾಗಿದೆ. ಬಹುಗ್ರಾಮ ಕುಡಿಯವ ನೀರಿನ ಪೈಪ್‌ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್ ಸಮಸ್ಯೆ ತಲೆದೋರದಿದ್ದಲ್ಲಿ ಸಂಪರ್ಕದ ಮೂಲಕ ನೀರು ವಿತರಿಸಲಾಗುವುದು ಎಂದು ಯೋಜನೆ ಎಇಇ ತಿಳಿಸಿದರು.

ಬರಗಾಲ ಜತೆಗೆ ಚುನಾವಣೆ ಹಿನ್ನೆಲೆ ಮೀಟರ್ ಅಳವಡಿಕೆ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಶಾಸಕರು ಸೂಚಿಸಿ, ಚುನಾವಣಾ ನಂತರದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳೋಣ ಎಂದರು.

ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಪೂರ್ಣಗೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಮೆಸ್ಕಾಂ ವಿಳಂಬ ಧೋರಣೆಯಿಂದಾಗಿ ಸಮಸ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಸಭೆ ಗಮನ ಸೆಳೆದರು. ಆಗ ಸ್ಥಳದಲ್ಲಿದ್ದ ಮೆಸ್ಕಾಂ ಎಇಇ ಶ್ರೀಧರ್ ನುರಿತ ಸಿಬ್ಬಂದಿ ಕೊರತೆಯಿಂದಾಗಿ ಕಾಮಗಾರಿ ವಿಳಂಬ ಆಗುತ್ತಿದೆ ಎಂದು ತಿಳಿಸಿದರು.

ಬೃಹತ್ ನೀರಾವರಿ ಇಲಾಖೆ ಎಇಇ ಮಂಜುನಾಥ್ ಮಾತನಾಡಿ, ಇದೀಗ ಅಂಜನಾಪುರ ಜಲಾಶಯದಲ್ಲಿ ನೀರಿನ ಮಟ್ಟ 13 ಅಡಿಗಳಿದ್ದು, ಶಿಕಾರಿಪುರ ಹಾಗೂ ಶಿರಾಳಕೊಪ್ಪಕ್ಕೆ ಕುಡಿಯುವ ಉದ್ದೇಶಕ್ಕಾಗಿ ೦.03 ಟಿಎಂಸಿ ಅಗತ್ಯವಿದೆ. ಈಸೂರು ಭಾಗದಲ್ಲಿನ ಕೆರೆಗಳು ಸಂಪೂರ್ಣ ಬರಿದಾಗಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಭರತ್, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. 16 ಬೋರ್‌ವೆಲ್ ಮೂಲಕ ಸಮರ್ಪಕ ಸರಬರಾಜು ನಡೆಯುತ್ತಿದೆ. ಹೊಸದಾಗಿ 5 ಬೋರ್‌ವೆಲ್ ತೆಗೆಸಲಾಗಿದೆ. ಟ್ಯಾಂಕ್‌ಗೆ ಸಾಗಿಸಲು ಅನಿಯಮಿತ ವಿದ್ಯುತ್ ನಿಲುಗಡೆ ಸಮಸ್ಯೆ ಆಗುತ್ತಿದೆ ಎಂದರು. ಆಗ ಶಾಸಕರು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ ವಹಿಸದೇ, ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಸಹಾಯಕ ಕೃಷಿ ನಿರ್ದೇಶಕ ಕಿರಣಕುಮಾರ್, ಬಿಇಒ ಮಹಮ್ಮದ್ ರಫೀಕ್ ಖಾನ್ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - -

ಕೋಟ್‌ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದು ಕಷ್ಟ. ಈ ಹಿನ್ನೆಲೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಗಮನಹರಿಸಬೇಕು

- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ.

- - -

ಫೋಟೋ ಕಾಪ್ಟನ್ -- ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ವಿಜಯೇಂದ್ರ ಮಾತನಾಡಿದರು. [ಫೋಟೋ ಫೈಲ್ ನಂ.1 ಕೆ.ಎಸ್.ಕೆ.ಪಿ 2]

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...