ಬಯಲಾಟಗಳಲ್ಲಿ ದಾಸ ಪರಂಪರೆ ಪ್ರಭಾವವಿದೆ: ವಸಂತ ನಾಶಿ

KannadaprabhaNewsNetwork | Published : Nov 6, 2024 12:39 AM

ಸಾರಾಂಶ

ಕಲಬುರಗಿ ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿ ವಸಂತ ನಾಶಿ ಪಾಲ್ಗೊಂಡು ವಿಷಯ ಮಂಡನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಯಲಾಟದಲ್ಲಿ ಜನಪದ ಸಂಗೀತದ ಲಯಗಳು ವಿಶಿಷ್ಟವಾಗಿದ್ದವು. ಕಲ್ಯಾಣ ಕರ್ನಾಟಕದ ಬಯಲಾಟಗಳಲ್ಲಿ ದಾಸ ಪರಂಪರೆ ಮತ್ತು ವಚನ ಪರಂಪರೆಯ ಪ್ರಭಾವ ಇರುವುದನ್ನು ಗಮನಿಸಬಹುದು ಎಂದು ಸಂಪನ್ಮೂಲ ವ್ಯಕ್ತಿ ವಸಂತ ನಾಶಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ, ಗುವಿವಿ ಕನ್ನಡ ಅಧ್ಯಯನ ಸಂಸ್ಥೆ, ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ, ಕನ್ನಡ ವಿಭಾಗ ಆಶ್ರಯದಲ್ಲಿ ಆಯೋಜನೆಗೊಂಡ ‘ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು ವಿಷಯ ಮಂಡನೆ ಮಾಡಿದರು.

ಗುಲ್ಬರ್ಗಾ ವಿವಿಯಲ್ಲಿ ಬಯಲಾಟಗಳ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ ಎಂದು ಕಲ್ಯಾಣ ಕರ್ನಾಟಕದ ಮುಖ್ಯವಾದ ಬಯಲಾಟ ಕಲಾವಿದರನ್ನು ವಸಂತ ನಾಶಿ ಪರಿಚಯ ಮಾಡಿಸಿದರು.

ಕನ್ನಡ ವಿವಿ ಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಬಯಲಾಟಗಳು ಬಹು ಸಂಸ್ಕೃತಿಯನ್ನು ಬಿಂಬಿಸುತ್ತವೆ. ಬಯಲಾಟ ಎನ್ನುವುದು ಆದಿಮ ಮುಕ್ತ ಲೈಂಗಿಕತೆಯ ಸಾಂಕೇತಿಕ ಮುಂದುವರಿಕೆಯಾಗಿದೆ. ಬಯಲಾಟ ಬದುಕಿನ ಲೋಕದೃಷ್ಟಿಯ ಆಟವಾಗಿದೆ. ಇದು ಫಲವಂತಿಕೆಯ ಲಕ್ಷಣಗಳನ್ನು ಒಳಗೊಂಡಿದೆ. ಜನಪದರು ಚಂದ್ರ ಒಂಟಿಯಲ್ಲ ಅಸಂಖ್ಯಾತ ನಕ್ಷತ್ರಗಳ ಜತೆ ಇರುತ್ತಾನೆ ಎನ್ನುವ ಕಾರಣಕ್ಕೆ ಬಯಲಾಟ ಪ್ರದರ್ಶನದಲ್ಲಿ ಚಂದ್ರನನ್ನು ಆರಾಧಿಸುತ್ತಾರೆ ಎಂದರು.

ಕಲಬುರಗಿ ವಿವಿ ಧಾರವಾಡದ ಪ್ರಾಧ್ಯಾಪಕರಾದ ಡಾ.ಅನಸೂಯ ಕಾಂಬಳೆ ಮಾತನಾಡಿ, ಕಲೆಗಳು ಹುಟ್ಟಿದ್ದು ಅವೈದಿಕರಲ್ಲಿ, ಆದಾಗ್ಯೂ ದಾಸರಾಟದಲ್ಲಿ ದೇವದಾಸಿಯರನ್ನು ಬಳಸುತ್ತಿದ್ದರು. ಬಯಲಾಟದ ರಂಗಭೂಮಿ ಮಹಿಳೆಯರನ್ನು ಬಹುಕಾಲದ ತನಕ ಒಳಗೊಳ್ಳಲಿಲ್ಲ. ಕೌಜಲಗಿ ನಿಂಗಮ್ಮ ಪಾರಿಜಾತದಲ್ಲಿ ಹೊಸ ಶಕೆ ಆರಂಭಿಸಿದರು. ಆದರೆ ಬಯಲಾಟದ ಅಧ್ಯಯನಗಳು ಕೌಜಲಗಿ ನಿಂಗಮ್ಮನನ್ನು ಸರಿಯಾಗಿ ಗುರುತಿಸಿಲ್ಲ. ಬಯಲಾಟದಲ್ಲಿ ‘ಚಿಮಣಾ’ ಎನ್ನುವ ಪರಂಪರೆ ಮಹಿಳೆಯರೇ ಶೋಧಿಸಿದ್ದು. ಈ ಆಟವನ್ನು ಮತ್ತೆ ಮರು ಕಟ್ಟಬೇಕಿದೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿ ಯಕ್ಷಗಾನದಲ್ಲಿ ಸುಶಿಕ್ಷಿತ ಹೆಣ್ಣುಮಕ್ಕಳು ಪ್ರವೇಶ ಮಾಡಿದ್ದಾರೆ, ಅದರಂತೆ ಕಲ್ಯಾಣ ಕರ್ನಾಟಕದ ಮಹಿಳೆಯರು ಬಯಲಾಟಕ್ಕೆ ಬರುವಂತೆ ಪ್ರೋತ್ಸಾಹಿಸಬೇಕಿದೆ. ಕಲೆಗೆ ಆರ್ಥಿಕ ಭದ್ರತೆ ಇದ್ದರೆ ಉಳಿಯುತ್ತದೆ ಎಂದರು.

ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಕೆ.ಆರ್.ದುರ್ಗಾದಾಸ್ ಅವರು ವಿಚಾರ ಸಂಕಿರಣ ಉದ್ದೇಶಿಸಿ, ಇಲ್ಲಿ ಮಂಡಿತವಾದ ಸಂಶೋಧನ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರಲಾಗುವುದು ಎಂದು ತಿಳಿಸಿದರು. ಎರಡನೆಯ ದಿನ ಕೊಪ್ಪಳ ಜಿಲ್ಲೆಯ ಮೊರನಾಳ ಗ್ರಾಮದ ರಾಜರಾಜೇಶ್ವರಿ ತೊಗಲುಗೊಂಬೆ ಕಲಾಮೇಳದಿಂದ ‘ವಿರಾಟ ಪರ್ವ’ ತೊಗಲುಗೊಂಬೆ ಆಟವನ್ನು ಪ್ರದರ್ಶಿಸಲಾಯಿತು.

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸ್ಥಿತಿಗತಿಗಳು’ ಎಂಬ ವಿಷಯವಾಗಿ ಮಾತನಾಡಿದ ಹೋರಾಟಗಾರ ರಜಾಕ್‌ ಉಸ್ತಾದ್‌, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ ಶ್ರೀಮಂತ, ಶೈಕ್ಷಣಿಕವಾಗಿ ದುಸ್ಥಿತಿಯಲ್ಲಿದೆ ಎಂದರು. ಉಪನ್ಯಾಸಕ ಅರುಣ್ ಜೋಳದಕೂಡ್ಲಿಗಿ ಇತರರು ಇದ್ದರು.

Share this article