ಬೆಂಗಳೂರು : ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳ ಬೋರ್ಡ್ ಪರೀಕ್ಷೆಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ 2024-25ನೇ ಸಾಲಿನಲ್ಲಿ ಈ ಹಿಂದೆ ಇದ್ದಂತೆ ಎಲ್ಲ ತರಗತಿಗಳಿಗೂ ಮೌಲ್ಯಾಂಕನ ಮುಂದುವರೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಸಂಬಂಧ ಎಲ್ಲ ಶಾಲೆಗಳಿಗೂ ನಿರ್ದೇಶನ ನೀಡಿರುವ ಇಲಾಖೆ, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳು 1ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಭಾಗ 1 ಮತ್ತು ಭಾಗ 2ರ ಆಧಾರದಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಾಂಕನ ಪೂರ್ಣಗೊಳಿಸಬೇಕು. ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಮೌಲ್ಯಾಂಕನ ಅಂಕಗಳು ಮತ್ತು ಲಿಖಿತ ಪರೀಕ್ಷೆಯ (ಎಸ್‌ಎ-2) ಅಂಕಗಳನ್ನು ಪರಿಗಣಿಸಬೇಕು. 10ನೇ ತರಗತಿಗೆ ಮಾತ್ರ ಆಂತರಿಕ ಮೌಲ್ಯಾಂಕನ ಅಂಕಗಳು ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ನಡೆಸುವ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ಫಲಿತಾಂಶವಾಗಿ ಪ್ರಕಟಿಸಬೇಕೆಂದು ಸೂಚಿಸಿದೆ.ಶಾಲಾ ಮಕ್ಕಳ ತೂಕ, ಎತ್ತರದ ಮಾಹಿತಿ ಕೇಳಿದ ಸರ್ಕಾರ:
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ ಎಲ್ಲ ಮಕ್ಕಳ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ ಜು.31ರೊಳಗೆ ಮಾಹಿತಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಶಾಲೆಯ ದೈಹಿಕ ಶಿಕ್ಷಕರು ಅಥವಾ ತರಗತಿ ಶಿಕ್ಷಕರು ನಿಗದಿತ ನಮೂನೆಯಲ್ಲಿ ಮಕ್ಕಳ ತೂಕ, ಎತ್ತರ ದಾಖಲಿಸಿ ತಾಲೂಕು ದೈಹಿಕ ಆರೋಗ್ಯ ಶಿಕ್ಷಣ ಅಧಿಕಾರಿ (ಟಿಪಿಒ) ಗಳಿಗೆ ಸಲ್ಲಿಸಬೇಕು. ಅವರು ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಪಿಎಂ ಪೋಷಣ್‌ನ ಅಧಿಕಾರಿಗಳ ಮೂಲಕ ಇಲಾಖೆಗೆ ಸಲ್ಲಿಸಬೇಕು. ನಂತರ 2025ರ ಫೆಬ್ರವರಿಯಲ್ಲಿ ಮತ್ತೆ ಮಕ್ಕಳ ತೂಕ ಮತ್ತು ಎತ್ತರವನ್ನು ಅಳತೆ ಮಾಡಲಾಗುತ್ತದೆ. ಮಕ್ಕಳ ಬೆಳವಣಿಗೆ, ಅಪೌಷ್ಟಿಕತೆಯ ನಿವಾರಣೆ ಕುರಿತು ಈ ವರದಿ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
10ನೇ ಕ್ಲಾಸ್ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ:
ಕಾಪುವಿನ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನಳಾಗಿದ್ದಾಳೆ. ಬೆಳಗ್ಗೆ ಎದೆ ನೋವು ಕಾಣಿಸಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾಳೆ. ಆಕೆ ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಚಂದ್ರಿಕಾ ದಂಪತಿ ಪುತ್ರಿ.