ತಿಪಟೂರಿನಲ್ಲಿ ಯುವಕರ ಪುಂಡಾಟಿಕೆಗಿಲ್ಲ ಬ್ರೇಕ್‌

KannadaprabhaNewsNetwork | Published : Jan 29, 2024 1:33 AM

ಸಾರಾಂಶ

ತಿಪಟೂರಿನಲ್ಲಿ ಯುವಕರ ಪುಂಡಾಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಪೊಲೀಸ್‌ ಇಲಾಖೆ ಬ್ರೇಕ್‌ ಹಾಕಬೇಕಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಬಹುತೇಕ ಬಾಗಗಳಲ್ಲಿ ಅಂತರ್ ಜಿಲ್ಲಾ ಇಸ್ಪೀಟ್ ದಂಧೆ, ಗಾಂಜಾದಂತಹ ಮಾದಕ ವಸ್ತುಗಳ ಸಪ್ಲೈ, ಮಾರಾಟಗಳಿಗೆ ಸಂಬಂಧಿಸಿದಂತೆ ಪುಂಡಾಟ, ಹೊಡೆದಾಟದಂತಹ ಪ್ರಕರಣಗಳು ಹೆಚ್ಚೆಚ್ಚು ನಡೆಯುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಸಂಬಂದಿಸದಂತೆ ಕಳೆದ ೨ತಿಂಗಳ ಹಿಂದೆ ಹೊರ ಜಿಲ್ಲೆಯ ಯುವಕನೊಬ್ಬ ಕೆ.ಆರ್‌. ಬಡಾವಣೆಯುದ್ದಕ್ಕೂ ರಕ್ತ ಚೆಲ್ಲಿಕೊಂಡು ಹತ್ಯೆಗೀಡಾಗಿದ್ದ ಭಯಾನಕ ದೃಶ್ಯ ಹಸಿಹಸಿಯಾಗಿಯೇ ಇದೆ. ಇದರ ನಂತರ ಆಗಾಗ್ಗೆ ಮಾದಕ ವ್ಯಸನಿಗಳ, ಮಾರಾಟಗಾರರ ಹೊಡೆದಾಟ, ಬಡಿದಾಟ, ಯುವಕರುಗಳ ದಾಂಧಲೆ ನಡೆಯುತ್ತಲೇ ಇವೆ.

ಇದಕ್ಕೆ ಸಾಕ್ಷಿಯೆಂಬಂತೆ ಶುಕ್ರವಾರ ಮಟಮಟ ಮಧ್ಯಾಹ್ನವೇ ನಗರದ ಸರ್ಕಾರಿ ಪದವಿ ಕಾಲೇಜಿನ ಮುಂಭಾಗದಿಂದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವರೆಗೂ ಹತ್ತಾರು ಯುವಕರ ನಡುವೆ ನಡೆದ ಪುಂಡಾಟ ನಗರದಲ್ಲಿ ಕಾನೂನು ವ್ಯವಸ್ಥೆ ಸರ್ವನಾಶವಾಗಿದೆ ಎಂಬ ಬಗ್ಗೆ ಇಲ್ಲಿನ ಸಾರ್ವಜನಿಕರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಬಹಿರಂಗವಾಗಿ ಶಾಪಹಾಕುತ್ತಿದ್ದ ದೃಶ್ಯಗಳೇ ಹೇಳುತ್ತಿದ್ದವು.

ಬಿಹಾರಿ ದರೋಡೆಕೋರರಿಂದ ಹಣೆಗೆ ಬಂದೂಕು: ಗುರುವಾರ ತಡ ರಾತ್ರಿ ನಗರದ ಕೋಟೆ ಪ್ರದೇಶದಲ್ಲಿ ಬಿಹಾರಿ ಯುವಕರುಗಳು ರಾಬರಿ ನಡೆಸಲು ಬಂದು ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾರೆ. ಯುವಕನೊಬ್ಬನ ಹಣೆಗೆ ಬಂದೂಕು ಇಟ್ಟು ಆಭರಣಗಳ ದರೋಡೆಗೆ ಮುಂದಾದ ತಕ್ಷಣ ಯುವಕ ಕಿರುಚಿಕೊಂಡಿದ್ದರಿಂದ ದರೋಡೆಕೋರ ಗ್ಯಾಂಗ್ ಹಿಂದೆ ಸರಿದಿದೆ. ನಂತರ ಯುವಕನ ಕಿರುಚಾಟಕ್ಕೆ ಬಂದ ಸಾರ್ವಜನಿಕರು ಅಲ್ಲೆ ಪೊದೆಯೊಂದರ ಹಿಂದೆ ಅಡಗಿದ್ದ ಐವರು ದರೋಡೆಕೋರರಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ೧೫ದಿನಗಳ ಹಿಂದೆ ಹಾಡ ಹಗಲೇ ಶ್ರೀಗಂಧದ ಮರಕಡಿಯಲು ಕಳ್ಳರು ಹೊಂಚಿ ಹಾಕಿ ಅರ್ಧಂಬರ್ದ ಕಡಿದು ಹೋಗಿದ್ದು, ಇನ್ನೊಂದು ದಿನ ಹಗಲೇ ಇದೇ ಕಳ್ಳರು ಮರ ಕಡಿಯಲು ಹೊಂಚು ಹಾಕುತ್ತಿದ್ದನ್ನೂ ಸಹ ಸಾರ್ವಜನಿಕರೇ ಹಿಡಿದುಕೊಟ್ಟಿದ್ದು ಕಲ್ಪತರು ನಾಡಿನಲ್ಲಿನ ಪೊಲೀಸರ ಕೆಲಸವೇನು ಎಂಬ ಬಗ್ಗೆ ಸಾರ್ವಜನಿಕರು ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಇಲ್ಲಿನ ಪೊಲೀಸ್ ಆಡಳಿತಕ್ಕೆ ಹಿಡಿದಿರುವ ತುಕ್ಕನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆಯುವರೇ ಕಾದು ನೋಡಬೇಕಿದೆ. ಅಲ್ಲದೆ ಸಾರ್ವಜನಿಕರೂ ಸಹ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ತಾಲೂಕಿನಾದ್ಯಂತ ನಡೆಯುತ್ತಿರುವ ಇಸ್ಪೀಟ್ ಕಳ್ಳಾಟ ಹಾಗೂ ಮಧ್ಯವರ್ತಿಗಳ ಮಟ್ಟ ಹಾಕುವ ಬಗ್ಗೆ ಎಸ್ಪಿಯವರು ಎಚ್ಚೆತ್ತುಕೊಂಡು ಕಠಿಣ ಕಾನೂನು ಕ್ರಮ ಜರುಗಿಸುವರೋ ನೋಡಬೇಕಿದೆ.

Share this article