ಮಂಗಳೂರು ನಗರದ ಕುಡಿಯುವ ನೀರಿಗೆ ಈ ವರ್ಷ ಬರಗಾಲ ಇಲ್ಲ

KannadaprabhaNewsNetwork | Published : Apr 15, 2025 12:55 AM

ಸಾರಾಂಶ

ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ, ಗರಿಷ್ಠ 6 ಮೀ. ನೀರು ಸಂಗ್ರಹಣಾ ಸಾಮರ್ಥ್ಯದ ತುಂಬೆ ಅಣೆಕಟ್ಟಿನಲ್ಲಿ ಸೋಮವಾರ ನೀರಿನ ಮಟ್ಟ 5.90 ಮೀ. ಇದೆ. ಮಂಗಳೂರು ನಗರಕ್ಕೆ ಇನ್ನೆರಡು ತಿಂಗಳು ಪೂರೈಕೆ ಮಾಡಲು ಈ ನೀರು ಧಾರಾಳ ಸಾಕು ಎಂದು ಅಧಿಕಾರಿಗಳು ಹೇಳುತ್ತಾರೆ. ಹವಾಮಾನ ಇಲಾಖೆಯ ಪ್ರಕಾರ ಮೇ 2ನೇ ವಾರದ ಬಳಿಕ ಮಳೆ ಆರಂಭವಾಗುವ ನಿರೀಕ್ಷೆಯಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಪ್ರತಿ ವರ್ಷ ಬೇಸಗೆಯಲ್ಲಿ ಒಂದಲ್ಲ ಒಂದು ‘ಸರ್ಕಸ್‌’ ಇದ್ದದ್ದೇ. ಆದರೆ ಈ ಬಾರಿ ಅಕಾಲಿಕ ಮಳೆಯ ಕೃಪೆಯಿಂದ ಮಳೆಗಾಲದವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ನಗರಕ್ಕೆ ನೀರು ಪೂರೈಕೆಯಾಗುವ, ಗರಿಷ್ಠ 6 ಮೀ. ನೀರು ಸಂಗ್ರಹಣಾ ಸಾಮರ್ಥ್ಯದ ತುಂಬೆ ಅಣೆಕಟ್ಟಿನಲ್ಲಿ ಸೋಮವಾರ ನೀರಿನ ಮಟ್ಟ 5.90 ಮೀ. ಇದೆ. ಮಂಗಳೂರು ನಗರಕ್ಕೆ ಇನ್ನೆರಡು ತಿಂಗಳು ಪೂರೈಕೆ ಮಾಡಲು ಈ ನೀರು ಧಾರಾಳ ಸಾಕು ಎಂದು ಅಧಿಕಾರಿಗಳು ಹೇಳುತ್ತಾರೆ. ಹವಾಮಾನ ಇಲಾಖೆಯ ಪ್ರಕಾರ ಮೇ 2ನೇ ವಾರದ ಬಳಿಕ ಮಳೆ ಆರಂಭವಾಗುವ ನಿರೀಕ್ಷೆಯಿದೆ.

ಆತಂಕ ದೂರ ಮಾಡಿದ ಮಳೆ:

ಕಳೆದ ವರ್ಷ ತುಂಬೆ ಡ್ಯಾಂ ನೀರಿನ ಮಟ್ಟ 4 ಮೀ.ಗೆ ಕುಸಿಯುವ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟಿನ ಕೆಳಭಾಗದ ನೀರನ್ನು ಬೃಹತ್‌ ಪಂಪ್‌ಗಳ ಮೂಲಕ ಅಣೆಕಟ್ಟಿಗೆ ನಿರಂತರ ಹರಿಸಲಾಗಿತ್ತು. ಅಲ್ಲದೆ, ಎಎಂಆರ್‌ ಡ್ಯಾಂ ನೀರನ್ನೂ ತುಂಬೆಗೆ ಬಿಡಲಾಗಿತ್ತು. ಆದರೂ ನೀರು ಯಾವಾಗ ಬತ್ತಿಹೋಗಿ ಸಮಸ್ಯೆ ಆರಂಭವಾಗುತ್ತದೋ ಎಂಬ ಆತಂಕವೂ ಇತ್ತು. ಅಷ್ಟರಲ್ಲಿ ಮಳೆ ಸುರಿದು ಆತಂಕ ದೂರವಾಗಿತ್ತು.

ಕಳೆದ ವರ್ಷ ಮಳೆಗಾಲದುದ್ದಕ್ಕೂ ಜಾಸ್ತಿ ಮಳೆ ಸುರಿದಿದ್ದರಿಂದ ಈ ಬಾರಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿಲ್ಲ. ಆದರೂ ಏಪ್ರಿಲ್‌ ಮೊದಲ ವಾರದಲ್ಲಿ ತುಂಬೆ ಡ್ಯಾಂ ನೀರಿನ ಮಟ್ಟ 5.60 ಮೀ.ಗೆ ಕುಸಿದಿತ್ತು. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದು ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿ ಬಹುತೇಕ ಭರ್ತಿಯಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಕೌನ್ಸಿಲ್‌ ಅಧಿಕಾರವಧಿ ಫೆಬ್ರವರಿಯಲ್ಲೇ ಮುಗಿದಿದ್ದು, ಕಾರ್ಪೊರೇಟರ್‌ಗಳು ಮಾಜಿಯಾಗಿದ್ದಾರೆ. ಜನರು ಮತ್ತು ಪಾಲಿಕೆಯ ನಡುವೆ ಕೊಂಡಿಯಾಗಿರುತ್ತಿದ್ದ ಕಾರ್ಪೊರೇಟರ್‌ಗಳು ಅಧಿಕಾರದಲ್ಲಿ ಇಲ್ಲದಿರುವ ಸಮಯದಲ್ಲಿ ನೀರಿಗೆ ಸಮಸ್ಯೆಯಾದರೆ(?) ಎಂಬ ಪ್ರಶ್ನೆಯೂ ಕಾಡಿತ್ತು. ಆದರೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದೆ ಈ ವರ್ಷದ ಬೇಸಗೆ ಮುಗಿಯಲಿದೆ ಎನ್ನುವುದು ಮಾತ್ರ ಸಮಾಧಾನಕರ ಸಂಗತಿ.

ಇತಿಹಾಸ ಕಲಿಸಿದ ಪಾಠ:

ಆರು ವರ್ಷಗಳ ಹಿಂದೆ 2019ರಲ್ಲಿ ಮಂಗಳೂರು ಮಹಾನಗರ ನೀರಿನ ತೀವ್ರ ಅಭಾವದ ಪರಿಸ್ಥಿತಿಯನ್ನು ಎದುರಿಸಿತ್ತು. ಅಂದು ಬೇಸಗೆಯಲ್ಲಿ ತುಂಬೆ ಅಣೆಕಟ್ಟಿನ ಮಟ್ಟ 3.48 ಮೀ.ಗೆ ಕುಸಿದಿತ್ತು. 1.5 ಮೀ.ಗೆ ಕುಸಿದರೆ ತಾಂತ್ರಿಕವಾಗಿ ಅಣೆಕಟ್ಟಿನಿಂದ ನೀರೆತ್ತಲು ಸಾಧ್ಯವಿರಲಿಲ್ಲ. ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಬಂದ್‌ ಮಾಡಿ ರೇಶನಿಂಗ್‌ ಆರಂಭಿಸಲಾಗಿತ್ತು. ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೀವ್ರ ತತ್ವಾರ ಬರುತ್ತಿತ್ತು. ಇದರಿಂದ ಪಾಠ ಕಲಿತ ಮಹಾನಗರ ಪಾಲಿಕೆ ನಂತರದ ವರ್ಷಗಳಲ್ಲಿ ನೀರಿಗೆ ತೊಂದರೆಯಾಗದಂತೆ ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ.

ಮೂರು ಗ್ರಾಮಗಳಿಗೆ ತುಂಬೆ ನೀರೇ ಗತಿ

ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲೆಂದೇ ತುಂಬೆ ಅಣೆಕಟ್ಟು ಕಟ್ಟಲಾಗಿದೆ. ಆದರೆ ತುಂಬೆಯ ಆಸುಪಾಸಿನ ಗ್ರಾಮಗಳಾದ ಪುದು, ಕಳ್ಳಿಗೆ, ಅಡ್ಯಾರಿಗೆ ಈ ಹಿಂದಿನಿಂದಲೂ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಯೋಜನೆಯಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಇದೀಗ ರಾಮಲ್‌ಕಟ್ಟೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ 20 ಎಂಎಲ್‌ಡಿ ಸ್ಥಾವರ ಕಟ್ಟಲಾಗುತ್ತಿದ್ದು, ಇದು ಸಂಪೂರ್ಣವಾದ ಬಳಿಕ ಅಲ್ಲಿಂದ 10 ಎಂಎಲ್‌ಡಿ ನೀರು ಈ 3 ಗ್ರಾಮಗಳಿಗೆ ಪೂರೈಕೆಯಾಗಲಿದೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ನರೇಶ್‌ ಶೆಣೈ ಹೇಳುತ್ತಾರೆ.

Share this article