ಮುಳಬಾಗಿಲು : ಇನ್ನೆರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದ್ದು, ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಈಗಿನಿಂದಲೇ ಸನ್ನದ್ಧರಾಗಬೇಕು. ಕಾಂಗ್ರೆಸ್ ಪಕ್ಷದಲ್ಲಿ ಎಬಿಸಿಡಿ ಗುಂಪುಗಳಿವೆ. ಜೆಡಿಎಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲದೆ ಒಗ್ಗಟ್ಟಾಗಿದ್ದೇವೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.
ಕೆ.ಬೈಪಲ್ಲಿ ರಸ್ತೆಯ ಸಿನಿಗೆನಹಳ್ಳಿಯ ಜಿ.ಆನಂದ್ ರೆಡ್ಡಿ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಲ್ಲಿ ನಾಟಕ ಆಡೋ ಗೂಡಾಚಾರಿಗಳು ಇದ್ದು ಅವರಿಗೆ ಶೀಘ್ರದಲ್ಲೇ ಕಿಕ್‌ಔಟ್ ಮಾಡುವುದಾಗಿ ಎಚ್ಚರಿಸಿದರು.
ಸ್ಥಾನ ನೀಡುವ ಭರವಸೆ:
ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ನಲ್ಲೂರು ವಿ.ರಘುಪತಿ ರೆಡ್ಡಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಜೆಡಿಎಸ್ ಮುಖಂಡ ಶನಿಗೇನಹಳ್ಳಿ ಜಿ.ಆನಂದ ರೆಡ್ಡಿರಿಗೆ ಪಕ್ಷದಲ್ಲಿ ಒಳ್ಳೆಯ ಜವಾಬ್ದಾರಿ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಮಹಿಳಾ ನಿರ್ದೇಶಕಿ ಸ್ಥಾನಕ್ಕೆ ಅಭ್ಯರ್ಥಿ:
ಜೂ.೨೫ರಂದು ಕೋಲಾರ ಜಿಲ್ಲಾ ಹಾಲು ಒಕ್ಕೂಟ ಮುಳಬಾಗಿಲು ತಾಲೂಕಿನ ಪೂರ್ವ ಮತ್ತು ಪಶ್ಚಿಮ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಪೂರ್ವ ಕ್ಷೇತ್ರಕ್ಕೆ ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್‌ರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷದ ಹೈಕಮಾಂಡ್ ಘೋಷಣೆ ಮಾಡಿದೆ. ಪಶ್ಚಿಮ ಕ್ಷೇತ್ರಕ್ಕೆ ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಕೋಲಾರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಮಹಿಳಾ ನಿರ್ದೇಶಕರ ಅಭ್ಯರ್ಥಿ ಆಯ್ಕೆ ವಿಚಾರ ಇನ್ನು ತೀರ್ಮಾನವಾಗಿಲ್ಲ ಅದು ಸಹ ಶೀಘ್ರದಲ್ಲೇ ತೀರ್ಮಾನ ಆಗಲಿದೆ ಎಂದರು.
ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂಬಂಧ ಶೀಘ್ರದಲ್ಲೇ ಎಸ್ಪಿ ಅವರನ್ನು ನಂಗಲಿ ಠಾಣೆಗೆ ಕರೆಸಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅಪರಾಧ ಪ್ರಕರಣ ಗಳನ್ನು ತಡೆಯಲು ಸೂಚನೆ ನೀಡುವುದಾಗಿ ಹೇಳಿದರು.
ಅತಿ ಹೆಚ್ಚು ಡೇರಿ ಸ್ಥಾಪನೆ:
ಜೆಡಿಎಸ್ ತಾಲೂಕಾಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ನಾನು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ನಿರ್ದೇಶಕರಾಗಿ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಡೇರಿಗಳನ್ನು ಪ್ರಾರಂಭಿಸಿದ್ದೇನೆ. ಹೈನೋದ್ಯಮವನ್ನು ಅಭಿವೃದ್ಧಿಪಡಿಸಿ ರೈತರ ಏಳಿಗೆಗೆ ದುಡಿದಿದ್ದೇನೆ ಎಂದರು.
ಜೆಡಿಎಸ್ ಮುಖಂಡ ಆನಂದ್ ರೆಡ್ಡಿ, ಮುಖಂಡ ಸಿನಿಗೇನಹಳ್ಳಿ ಜಿ.ಆನಂದ್ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ವಿ.ರಘುಪತಿ ರೆಡ್ಡಿ, ಬಿ.ವಿ.ಸಾಮೇಗೌಡ, ಬಿಎಂಸಿ ವೆಂಕಟರಾಮೇಗೌಡ, ಡೆಕ್ಕನ್ ಶಶಿಕಾಂತ್, ಕೆಪಿ ಟ್ರಾವೆಲ್ಸ್ ಪ್ರಭಾಕರ್, ಎನ್‌ಆರ್‌ಎಸ್ ಸತ್ಯಣ್ಣ, ಯಡಹಳ್ಳಿ ಸೋಮಶೇಖರ್, ಗೊಲ್ಲಳ್ಳಿ ಜಗದೀಶ್, ಗುಮ್ಮಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರ ಕೃಷ್ಣಮೂರ್ತಿ ಇದ್ದರು.