ವಿದ್ಯೆಗೆ ಸಮನಾದ ಮಿತ್ರ, ರೋಗಕ್ಕೆ ಸಮನಾದ ಶತ್ರುವಿಲ್ಲ

KannadaprabhaNewsNetwork | Published : Dec 31, 2024 1:02 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯೆಗೆ ಸಮನಾದ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ, ಮಾತೆಗೆ ಸಮನಾದ ದೇವರಿಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ಜೀವ ತುಂಬಿದ್ದಾರೆ ಎಂದು ಹೃದಯ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯೆಗೆ ಸಮನಾದ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ, ಮಾತೆಗೆ ಸಮನಾದ ದೇವರಿಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ಜೀವ ತುಂಬಿದ್ದಾರೆ ಎಂದು ಹೃದಯ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ೫ನೇ ಗೋಷ್ಠಿ ಮಾತೃ ಭಕ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂತಃಕರಣ, ಮೃದು ಸ್ವಭಾವವನ್ನು ಹೊಂದಿದ್ದ ಸಿದ್ದೇಶ್ವರ ಶ್ರೀಗಳು ಮಾತೃ ಹೃದಯದವರಾಗಿದ್ದರು. ಮಣ್ಣಿನ ಮುದ್ದೆಯಾಗಿರುವ ಮಗುವಿಗೆ ರೂಪ ನೀಡಿ ಬೆಳೆಸುವವಳು ತಾಯಿ. ಇಂದು ಆಂಗ್ಲ ಸಂಸ್ಕೃತಿ ಒಲವಿನಿಂದ ಮಕ್ಕಳು ಮಮ್ಮಿ ಎಂದು ಕರೆಯವುದನ್ನು ಕಲಿಸುತ್ತಿದ್ದೇವೆ. ಮಮ್ಮಿ ಎಂದರೆ, ಸತ್ತ ಹೆಣ, ನಾವು ಸತ್ತ ಹೆಣ ಎಂದು ಕರೆಯಿಸಿಕೊಳ್ಳುತ್ತಿದ್ದೇವೆ. ಅದರ ಬದಲು ಮಕ್ಕಳಿಗೆ ಭಾರತೀಯ ಸಂಸ್ಕೃತಿಯಂತೆ ಅವ್ವ-ಅಪ್ಪಾ ಎಂದು ಕರೆಯುವುದನ್ನು ಕಲಿಸಬೇಕು ಎಂದು ಹೇಳಿದರು.

ಇಂದು ಮಕ್ಕಳು ಸುಳ್ಳು ಹೇಳುತ್ತಿದ್ದಾರೆ. ಮಾತೆಯರು ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತವೆ. ಹಾಗಾಗಿ ನಾವು ಜವಾಬ್ದಾರಿಯಿಂದ ಬೆಳೆಸಬೇಕು. ಮಾತೆ ಅಂದರೆ ಸೀರೆ, ಮಾತೆಯರಿಗೆ ಸೀರೆಗೆ ದೊರಕುವ ಗೌರವ ಯಾವುದಕ್ಕೂ ಸಿಗುವುದಿಲ್ಲ. ಸಿದ್ಧೇಶ್ವರ ಅಪ್ಪಾರವರು ಜ್ಞಾನ ಸಾಗರವಿದ್ದಂತೆ, ಮಾತೆಯರಿಗೆ ಜ್ಞಾನಯೋಗಾಶ್ರಮದಲ್ಲಿ ಅತ್ಯಂತ ಗೌರವ ಸಿಗುವಂತೆ ಮಾಡಿದ್ದಾರೆ ಎಂದರು.

ಮಾಜಿ ಸಚಿವೆ, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ೨೧ನೇ ಶತಮಾನದಲ್ಲಿ ನಡೆದಾಡುವ, ಮಾತನಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಗಳನ್ನು ಕಂಡಿದ್ದೇವೆ. ನಾವು ಅದೃಷ್ಟವಂತರು. ಇಂದು ತಾಯಂದಿಯರ ಮೇಲೆ ಅತೀ ದೊಡ್ಡ ಜವಾಬ್ದಾರಿ ಇದೆ ಆ ಮಾತನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

ಬುರಣಾಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ, ಪ್ರಕೃತಿಯಲ್ಲಿ ಗಂಡು-ಹೆಣ್ಣು ಬೇಧವಿಲ್ಲ. ಆದರೆ ಮಕ್ಕಳು ಹೆಚ್ಚು ಮಾತೆಯರ ಕೈಯಲ್ಲಿರುತ್ತವೆ. ಅವರಿಗೆ ಸಂಸ್ಕಾರ, ಶಿಕ್ಷಣ, ಆಚಾರ-ವಿಚಾರಗಳನ್ನು ನಾವೇ ಕಲಿಸಬೇಕು. ತಾಯಿ ಭಕ್ತಿಯಿಂದ ದೇಶಕ್ಕೆ ಪುಣ್ಯಾತ್ಮರನ್ನು ಕೊಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು ಮಾತನಾಡಿ, ಸಿದ್ದೇಶ್ವರ ಅಪ್ಪಾಜಿ ತಾಯಿಯಲ್ಲಿಯೇ ದೇವರನ್ನು ಕಾಣು ಎಂದಿದ್ದಾರೆ. ಇದರರ್ಥ ತಾಯಿ ಮೊದಲು ಎನ್ನುವುದನ್ನು ಅಪ್ಪಾರವರು ತಿಳಿಸಿದ್ದಾರೆ. ನಾವು ಅವರ ಮಾತನ್ನು ಪಾಲಿಸಬೇಕು. ಅಮ್ಮ ಎನ್ನುವ ಮೂಲಕ ನಮ್ಮಗಳ ಮನೆಯನ್ನು ಕನ್ನಡಮಯವಾಗಿಸಬೇಕು ಎಂದು ಹೇಳಿದರು.

ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪಾರವರ ಪ್ರವಚನ ಕೇಳಿ ಪ್ರಭಾವಿತಳಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಹಿಂದುಳಿದ ಜಿಲ್ಲೆಯಿಂದ ಬಂದು ಕ್ರಿಕೆಟ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಇದು ಈ ಆಶ್ರಮದ ಶಕ್ತಿ ಎಂದರು.

ಶೈಲಜಾ ಬಸನಗೌಡ ಪಾಟೀಲ ಮಾತನಾಡಿ, ಮಾತೃ ಶಕ್ತಿ ಎಲ್ಲ ಶಕ್ತಿಗಿಂತಲೂ ದೊಡ್ಡದು. ಮಾತೆಯರನ್ನು ಗೌರವದಿಂದ ಕಾಣಬೇಕು ಎಂದರು.

ಭಾಗ್ಯಶ್ರೀ ಶಿವಾನಂದ ಪಾಟೀಲ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಮಾತೆಯರ ಪಾತ್ರ ದೊಡ್ಡದು. ಇಡೀ ದಿನ ಕೆಲಸ ಮಾಡಿದರೂ ಅವಳಿಗೆ ಧಣಿವಾಗುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವಲ್ಲಿ ತಾಯಿ ಯಾವುದೇ ಕಷ್ಟ ಬಂದರು ಸಹಿಸುತ್ತಾಳೆ. ನಾವು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಅವರಲ್ಲಿ ಜ್ಞಾನ ಸದ್ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು.

ಈ ವೇಳೆ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶರಣು ಸಬರದ, ಆಶ್ರಮದ ಭಕ್ತರು, ಸ್ವಾಮೀಜಿಗಳು ಉಪಸ್ಥಿತರಿದ್ದರು.

--------

ಕೋಟ್‌

ಅನೇಕ ರಾಷ್ಟ್ರಗಳು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗಲೂ ನಮ್ಮ ಸಂಸ್ಕೃತಿ ಉಳಿದಿದೆ ಎಂದರೆ ಅದು ತಾಯಂದಿರಿಂದ ಎಂದು ಸಿದ್ಧೇಶ್ವರ ಅಪ್ಪನವರು ಹೇಳಿದ್ದಾರೆ. ಮಕ್ಕಳು ನಮ್ಮನ್ನೇ ಅನುಕರಣೆ ಮಾಡುತ್ತವೆ. ಹಾಗಾಗಿ ನಾವು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ದೀಪ ಆರಿಸಿ ಹುಟ್ಟುಹಬ್ಬ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ, ನಮ್ಮದು ದೀಪ ಬೆಳಗಿಸುವ ಸಂಸ್ಕೃತಿ.

- ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ಶಾಸಕಿ

Share this article