ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಶ್ರೀ ಸಿದ್ಧಾರೂಢರ ಮೇಲೆ ಪ್ರಮಾಣ (ಆಣೆ) ಮಾಡಿ ಹೇಳುತ್ತಿದ್ದೇನೆ. ಶ್ರೀಮಠದಲ್ಲಿ ಯಾವುದೇ ಭ್ರಷ್ಟಾಚಾರ, ಹಣ ದುರ್ಬಳಕೆಯಾಗಿಲ್ಲ. ಕೆಲವರು ವೈಯಕ್ತಿಕ ಹಿತಾಸಕ್ತಿಗಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ರೀ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಸ್ಪಷ್ಟನೆ ನೀಡಿದರು.ಸಿದ್ಧಾರೂಢ ಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಈಚೆಗೆ ಶ್ರೀಮಠದಲ್ಲಿ ಟ್ರಸ್ಟ್ ಕಮಿಟಿಯ ವತಿಯಿಂದ ಮಠದ ಲೆಕ್ಕಪತ್ರ, ಶಿವರಾತ್ರಿ ಉತ್ಸವ ಆಚರಣೆ ಕುರಿತಂತೆ ಭಕ್ತರ ಸಭೆ ಕರೆಯಲಾಗಿತ್ತು. ಅದರಂತೆ ಸಭೆ ನಡೆಯುತ್ತಿತ್ತು. ಈ ವೇಳೆ ಪೋಷಕರೊಬ್ಬರು ಎದ್ದು ಮಠದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನಿಸಿದರು. ಜತೆಗೆ ಲೆಕ್ಕಪತ್ರದ ವಿವರ ಕೇಳಿದರು. ಆಗ ನಾವು ಹಾಗೂ ಮಠದ ಟ್ರಸ್ಟಿಗಳು ಆಡಳಿತಾಧಿಕಾರಿಗಳ ಗಮನಕ್ಕೆ ತಂದು ತಮಗೆ ಸೂಕ್ತ ಲೆಕ್ಕಪತ್ರ ನೀಡುವುದಾಗಿ ತಿಳಿಸಿದೆವು. ಟ್ರಸ್ಟಿನ ಬೈಲಾದಂತೆ ನಂತರ ತಮಗೆ ಸಮರ್ಪಕ ಮಾಹಿತಿ ನೀಡುವುದಾಗಿ ತಿಳಿಸಲಾಯಿತು. ಆದರೆ, ಅವರು ಈಗ ಕೇಳಿರುವ ಪ್ರಶ್ನೆಗೆ ಇದೇ ಸಭೆಯಲ್ಲೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.ಅದಕ್ಕೆ ಮಹಿಳಾ ಭಕ್ತೆಯೊಬ್ಬರು ಎದ್ದುನಿಂತು ತಮ್ಮ ಅಭಿಪ್ರಾಯ ತಿಳಿಸಿ ಕಾಮಗಾರಿ ಬಗ್ಗೆ ನಂತರ ಲೆಕ್ಕ ಕೊಡುತ್ತಾರೆ. ಸದ್ಯ ಸಭೆ ನಡೆಯಲಿ ಎಂದರು. ಇದಕ್ಕೆ ಮತ್ತೊಬ್ಬ ಭಕ್ತ ಆಕ್ಷೇಪ ವ್ಯಕ್ತಪಡಿಸಿ, ಆ ಮಹಿಳೆಯ ಕೈಯಲ್ಲಿದ್ದ ಮೈಕ್ ಅನ್ನು ಕಸಿದುಕೊಂಡರು. ಆಗ ನಾನು ಸಭೆಯಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ನೀಡಬೇಕು. ಈ ರೀತಿ ಮೈಕ್ ಕಸಿದುಕೊಳ್ಳುವುದು ಸರಿಯಲ್ಲ ಎನ್ನುತ್ತಿದ್ದಂತೆ ಒಬ್ಬರಿಗೊಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು.
ಶ್ರೀಮಠದ ಆರೂಢ ತತ್ವ ಪ್ರಚಾರ ವೇದಿಕೆ ಎಂಬ ಸುಳ್ಳು ಸಂಸ್ಥೆಯನ್ನು ಹುಟ್ಟುಹಾಕಿ ಶ್ರೀಮಠದಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರವಾಗಿದೆ ಎಂದು ಅಜೀವ ಸದಸ್ಯರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಜತೆಗೆ ಲಕ್ಷ ರುದ್ರಾಭಿಷೇಕ, ತುಲಾಭಾರ ಸೇವೆ ನಿಲ್ಲಿಸುವಂತೆ ಒತ್ತಡ ಹಾಕಿದ್ದರು ಎಂದರು.ಶ್ರೀಮಠದ ಜಮಾ- ಖರ್ಚಿನ ಕುರಿತು ಫೆ. 20ರಂದು 12500 ಅಜೀವ ಸದಸ್ಯರಿಗೆ ಅಂಚೆ ಮೂಲಕ ಪೋಸ್ಟ್ ಮಾಡಲಾಗಿದೆ. ಜತೆಗೆ 3 ವರ್ಷಗಳ ಜಮಾ, ಖರ್ಚನ್ನು ಒಳಗೊಂಡ ಆಡಿಟ್ ರಿಪೋರ್ಟನ್ನು ಉಪಸ್ಥಿತರಿದ್ದ ಎಲ್ಲ ಸದಸ್ಯರಿಗೂ ನೀಡಲಾಗಿತ್ತು. ಇಷ್ಟಾದರೂ ಜಮಾ- ಖರ್ಚಿನ ರಿಪೋರ್ಟ್ ಹಾಗೂ ಆಡಿಟ್ ರಿಪೋರ್ಟ್ ನೀಡಿಲ್ಲ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ಕೊಟ್ಟು ಶ್ರೀಮಠದ ಘನತೆ, ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲದೇ ಭಕ್ತರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಯೊಂದಕ್ಕೂ ಲೆಕ್ಕ ಇಟ್ಟಿದ್ದೇವೆ:ಶ್ರೀಮಠದಲ್ಲಿ ಯಾವುದೇ ಕೆಲಸಗಳಾಗಲಿ ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತವೆ. ಭಕ್ತರು ನೀಡುವ ಪ್ರತಿಯೊಂದು ವಸ್ತುವಿನ ಕುರಿತು ಕಂಪ್ಯೂಟರ್‌ನಲ್ಲಿ ದಾಖಲೆ ಇಡಲಾಗುತ್ತದೆ. ಯಾವುದಾದರೂ ಕಾಮಗಾರಿ ಪ್ರಾರಂಭಿಸುವ ಪೂರ್ವದಲ್ಲಿ ದಿನಪತ್ರಿಕೆಗಳ ಮೂಲಕ ಟೆಂಡರ್ ಅನ್ನು ಗುತ್ತಿಗೆ ಆಧಾರದ ಮೇಲೆ ಕರೆದು ಅದನ್ನು ಮುಖ್ಯ ಆಡಳಿತಾಧಿಕಾರಿಗಳಿಗೆ ಪರವಾನಗಿ ಪಡೆದುಕೊಂಡು ಕಾಮಗಾರಿ ಆರಂಭಿಸುತ್ತೇವೆ. ಶ್ರೀಮಠದಲ್ಲಿ ಪ್ರತಿ ತಿಂಗಳ ಆಡಿಟ್ ಮಾಡಿಸಿ ಆ ಪ್ರತಿಯನ್ನು ಪ್ರತಿ ತಿಂಗಳು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಪರಿಶೀಲಿಸಿ ಅನುಮತಿಗಾಗಿ ಮುಖ್ಯ ಆಡಳಿತಾಧಿಕಾರಿಗೆ ಸಲ್ಲಿಸುತ್ತೇವೆ. ಒಂದು ರೂಪಾಯಿಯೂ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಶಾಮಾನಂದ ಪೂಜಾರಿ, ಗೀತಾ ಕಲಬುರ್ಗಿ ಸೇರಿದಂತೆ ಹಲವರಿದ್ದರು.ನಾಳೆ ಭಕ್ತರ ಸಭೆ
ಈಚೆಗೆ ಮುಂದೂಡಲಾಗಿದ್ದ ಭಕ್ತರ ಸಭೆಯನ್ನು ಮಾ. 7ರಂದು ಸಂಜೆ 4 ಗಂಟೆಗೆ ಶ್ರೀಮಠದ ದಾಸೋಹ ಸಭಾಂಗಣದಲ್ಲಿ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಟ್ರಸ್ಟಿನ ಎಲ್ಲ ಅಜೀವ ಸದಸ್ಯರು ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.ಗೂಂಡಾ ವರ್ತನೆ ಸರಿಯಲ್ಲಅಂದಿನ ಸಭೆಯಲ್ಲಿ ಧರ್ಮದರ್ಶಿಯೋರ್ವರು ಭಕ್ತರ ಮೇಲೆ ಗೂಂಡಾ ವರ್ತನೆ ತೋರಿರುವುದು ಗಮನಕ್ಕೆ ಬಂದಿದೆ. ಅವರ ಪರವಾಗಿ ನಾನು ಎಲ್ಲ ಭಕ್ತರ ಬಳಿ ಕ್ಷಮೆ ಕೋರುವೆ. ಜಾತ್ರಾ ಕಾರ್ಯಕ್ರಮ ಮುಗಿದ ಬಳಿಕ ಆಡಳಿತಾಧಿಕಾರಿಗಳೊಂದಿಗೆ ಚರ್ಚಿಸಿ ಗೂಂಡಾ ವರ್ತನೆ ತೋರಿದ್ದ ಧರ್ಮದರ್ಶಿಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ತಿಳಿಸಿದರು.