ರಾಜ್ಯದ ಮೊದಲ ಹಾಗೂ ದೇಶದ ಆರನೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಂಚಣಿಗೂ ದುಡ್ಡಿಲ್ಲ!

KannadaprabhaNewsNetwork | Updated : Apr 04 2025, 07:58 AM IST

ಸಾರಾಂಶ

ರಾಜ್ಯದ ಮೊದಲ ಹಾಗೂ ದೇಶದ ಆರನೇ ವಿವಿ ಎನಿಸಿದ, ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಅಂಶಿ ಪ್ರಸನ್ನಕುಮಾರ್‌

 ಮೈಸೂರು : ರಾಜ್ಯದ ಮೊದಲ ಹಾಗೂ ದೇಶದ ಆರನೇ ವಿವಿ ಎನಿಸಿದ, ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಿವೃತ್ತರಾದವರಿಗೆ ಪಿಂಚಣಿ ಕೊಡಲೂ ವಿವಿ ಬಳಿ ದುಡ್ಡಿಲ್ಲ. ಕಾಯಂ ಬೋಧಕ, ಬೋಧಕೇತರರ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಮೈಸೂರು ವಿವಿ ವ್ಯಾಪ್ತಿಯಲ್ಲಿ ಈ ಮೊದಲು ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜುಗಳು ಇದ್ದವು. ವಿಷಯಕ್ಕೊಂದು ವಿವಿ ಆರಂಭವಾದಂತೆ ವೈದ್ಯಕೀಯ ಕಾಲೇಜು ರಾಜೀವ್‌ ಗಾಂಧಿ ಆರೋಗ್ಯ ವಿವಿ, ಎಂಜಿನಿಯರಿಂಗ್‌ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಅಧೀನಕ್ಕೆ ಸೇರಿದವು. ಇದಲ್ಲದೆ ಆಂತರಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಮುಖ ಸೆಲೆಯಾಗಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಯಿತು. ಇದರಿಂದಾಗಿ ಮೈಸೂರು ವಿವಿ ಆಂತರಿಕ ಸಂಪನ್ಮೂಲದ ಮೇಲೆ ಭಾರೀ ಹೊಡೆತ ಬಿತ್ತು.

ಸರ್ಕಾರ ಈ ಮೊದಲು ಬಜೆಟ್‌ನಲ್ಲಿ ಬ್ಲಾಕ್‌ ಗ್ರ್ಯಾಂಟ್‌ ಕೊಡುತ್ತಿತ್ತು. ಆದರೆ, ಕೋವಿಡ್‌ ನಂತರ ಅದನ್ನು ಸಂಪೂರ್ಣ ಸ್ಥಗಿತಗೊಳಿಸಿ, ಆಂತರಿಕ ಸಂಪನ್ಮೂಲದಿಂದ ಸರಿದೂಗಿಸಿಕೊಳ್ಳಿ ಎಂದು ಕೈತೊಳೆದುಕೊಂಡಿದೆ. ಪ್ರಸ್ತುತ ಕಾಯಂ ಸಿಬ್ಬಂದಿಯ ವೇತನ ಮಾತ್ರ ನೀಡುತ್ತಿದೆ. ಇದರಿಂದ ಆಯಾ ತಿಂಗಳು ಪಿಂಚಣಿ ಹಣ ಒದಗಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪಿಂಚಣಿಗೆ ವಾರ್ಷಿಕ 137 ಕೋಟಿ ರು. ಬೇಕು. ಆದರೆ, ಸರ್ಕಾರ ಕಾಯಂ ಬೋಧಕರ 50 ಕೋಟಿ ರು.ವೇತನ ಮಾತ್ರ ನೀಡುತ್ತಿದೆ.

ಇದಲ್ಲದೆ 1,109 ತಾತ್ಕಾಲಿಕ ಬೋಧಕೇತರರಿಗೆ ₹27 ಕೋಟಿ, ಅತಿಥಿ ಉಪನ್ಯಾಸಕರಿಗೆ ₹12-15 ಕೋಟಿ ರು. ವೇತನಕ್ಕಾಗಿ ಬೇಕಾಗುತ್ತದೆ. ಪ್ರೊ.ಕೆ.ಎಸ್‌.ರಂಗಪ್ಪ, ಪ್ರೊ.ಜಿ.ಹೇಮಂತಕುಮಾರ್‌ ಕಾಲದಲ್ಲಿ ತುಂಬಿರುವ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯನ್ನೂ ಈಗಿನ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಅವರ ಕಾಲದಲ್ಲಿ ಕಡಿಮೆ ಮಾಡಲು ಯತ್ನಿಸಲಾಯಿತು. ಇದಕ್ಕಾಗಿ ಕುಲಪತಿಗಳ ನಿರ್ದೇಶನದಂತೆ ಹಿಂದಿನ ಕುಲಸಚಿವರು ಸಮಿತಿಯೊಂದನ್ನು ರಚಿಸಿ, ವರದಿಯನ್ನು ಕೂಡ ತಯಾರಿಸಿದ್ದರು. ಆದರೆ, ಬಹುತೇಕ ತಾತ್ಕಾಲಿಕ ನೇಮಕಾತಿಗಳು ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ನಡೆದಿದೆ. ಹೀಗಾಗಿ, ಸರ್ಕಾರದಿಂದ ‘ಗ್ರೀನ್‌ ಸಿಗ್ನಲ್‌’ ಸಿಕ್ಕಿಲ್ಲ. ಹಿಂದೆ ವಿವಿಗಳಲ್ಲಿ ಕಾಲಕಾಲಕ್ಕೆ ಕಾಯಂ ಬೋಧಕರು ಹಾಗೂ ಬೋಧಕೇತರರನ್ನು ವಿವಿಗಳೇ ನೇಮಕಾತಿ ಮಾಡಿಕೊಳ್ಳುತ್ತಿದ್ದವು. ಈಗ ಆ ‘ಸ್ವಾಯತ್ತತೆ’ ಇಲ್ಲ. ಎಲ್ಲದಕ್ಕೂ ಸರ್ಕಾರದ ಮೇಲೆ ‘ಪರಾವಲಂಬನೆ’!. ಹೀಗಾಗಿ ನಿವೃತ್ತರಾದವರ ಸ್ಥಾನಗಳಿಗೆ ನೇಮಕಾತಿಯೇ ನಡೆಯದೆ ಕಾಯಂ ಸಿಬ್ಬಂದಿಯ ಪ್ರಮಾಣ ಶೇ.30ಕ್ಕೆ ಇಳಿಕೆಯಾಗಿದೆ.

ಇಷ್ಟಾದರೂ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ವಾರ್ಷಿಕ 50 ರಿಂದ 60 ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ ಕೂಡ ಸೇರಿದೆ. ಇದು ಯುಜಿಸಿಯ ‘ರೂಸಾ’ ಯೋಜನೆಯಿಂದ ಸಾಧ್ಯವಾಗಿದೆ.

ವಿವಿ ವ್ಯಾಪ್ತಿಯಲ್ಲಿ ಮಹಾರಾಜ, ಯುವರಾಜ, ಸಂಜೆ ಕಾಲೇಜು ಹಾಗೂ ಲಲಿತಕಲಾ ಕಾಲೇಜುಗಳು-ಘಟಕ ಕಾಲೇಜುಗಳಾಗಿವೆ. ಒಟ್ಟು 106 ಕಾಲೇಜುಗಳು ವಿವಿಯ ಸಂಯೋಜನೆ ಪಡೆದಿವೆ. ಕೆಲವೊಂದು ಸ್ವಾಯತ್ತ ಕಾಲೇಜುಗಳೂ ಇವೆ. ಹಾಸನ, ಮಂಡ್ಯ, ಚಾಮರಾಜನಗರ ವಿವಿಗಳ ಆರಂಭಕ್ಕಿಂತ ಮೊದಲು ಸಂಯೋಜಿತ ಕಾಲೇಜುಗಳ ಸಂಖ್ಯೆ 236 ಇತ್ತು. ಹೆಣ್ಣು ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ಇದೆ. ಪರಿಶಿಷ್ಟ ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಶುಲ್ಕವನ್ನು ನೇರ ಪಾವತಿಯಡಿ ವರ್ಗಾವಣೆ ಮಾಡಲಾಗುತ್ತದೆ. ವಿವಿ ನಡೆದು ಬಂದ ದಾರಿ:

ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಉನ್ನತ ಶಿಕ್ಷಣದ ಮಹತ್ವ ಅರಿತು 1916 ರಲ್ಲಿ ರಾಜ್ಯದ ಮೊದಲ ಹಾಗೂ ದೇಶದ ಆರನೆಯದಾದ ಮೈಸೂರು ವಿವಿ ಸ್ಥಾಪಿಸಿದರು. ನಂತರ, ಇದು ಟಿಸಿಲೊಡೆದು ಬೆಂಗಳೂರು, ಮಂಗಳೂರು, ಕುವೆಂಪು ವಿವಿ, ಕರ್ನಾಟಕ ಮುಕ್ತ ವಿವಿ ಆರಂಭವಾದವು. ಕಳೆದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೊಂದು ವಿವಿ ತಲೆ ಎತ್ತಿದ್ದರಿಂದ ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಮಂಡ್ಯ, ಹಾಸನ, ಚಾಮರಾಜನಗರದಲ್ಲೂ ನೂತನ ವಿವಿಗಳು ತಲೆ ಎತ್ತಿವೆ. ಇದರ ಪರಿಣಾಮ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿ ಈಗ ಕೇವಲ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.

ರಾಜ್ಯಸಭೆಯಲ್ಲೂ ಪ್ರಸ್ತಾಪ: 

ರಾಜ್ಯದ ವಿವಿಗಳ ಸಂಕಷ್ಟ ಕುರಿತು ‘ಕನ್ನಡಪ್ರಭ’ ಸುದ್ದಿ ಸರಣಿ ಆರಂಭಿಸಿದ ಮರುದಿನವೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿದ್ದರು. ರಾಜ್ಯದ ಹಳೆಯ ವಿವಿಗಳಾದ ಮೈಸೂರು ಹಾಗೂ ಧಾರವಾಡಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದರು.

ಇವೆರಡೂ ರಾಜ್ಯ ವಿವಿಗಳಾಗಿರುವುದರಿಂದ ಕೇಂದ್ರ ಸರ್ಕಾರದಿಂದ ನೇರವಾಗಿ ನೆರವು ಸಿಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆದರೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೇರೆ, ಬೇರೆ ಸಂಶೋಧನಾ ಯೋಜನೆಗಳ ಮೂಲಕ ನೆರವು ನೀಡಬಹುದು. ಮೈಸೂರು ವಿವಿಯ ಎರಡು ವಿಭಾಗಗಳಲ್ಲಿ ಕೆಲ ಯೋಜನೆಗಳು ಚಾಲ್ತಿಯಲ್ಲಿವೆ. ಇದಲ್ಲದೆ ಐದಾರು ಪ್ರಾಧ್ಯಾಪಕರೂ ಕೇಂದ್ರದ ನೆರವಿನಿಂದ ಕೆಲ ಸಂಶೋಧನಾ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.

ಬೋಧಕ, ಬೋಧಕೇತರ ಹುದ್ದೆಗಳ ವಿವರ

ಮೈಸೂರು ವಿವಿಗೆ ಮಂಜುರಾದ ಬೋಧಕರ ಹುದ್ದೆ- 664ಬೋಧಕೇತರ ಹುದ್ದೆ 1349ಮಂಡ್ಯ, ಹಾಸನ, ಚಾಮರಾಜನಗರ ವಿವಿಗಳಿಗೆ ಸ್ಥಳಾಂತರವಾದ ಬೋಧಕರ ಹುದ್ದೆ- 89ಬೋಧಕೇತರ ಹುದ್ದೆ 550ಮೈಸೂರು ವಿವಿಯಲ್ಲಿ ಉಳಿದಿರುವ ಬೋಧಕರ ಹುದ್ದೆ-571ಬೋಧಕೇತರ ಹುದ್ದೆ 799ಹಾಲಿ ಭರ್ತಿ ಇರುವ ಬೋಧಕರ ಹುದ್ದೆಗಳು -189ಬೋಧಕೇತರ ಹುದ್ದೆ 434ಖಾಲಿ ಇರುವ ಬೋಧಕರ ಹುದ್ದೆಗಳು-382ಬೋಧಕೇತರ ಹುದ್ದೆ 368ರಾಜ್ಯ ಸರ್ಕಾರ ನಿವೃತ್ತರ ಪಿಂಚಣಿ ಹಣ ಬಿಡುಗಡೆ ಮಾಡಿಕೊಡಬೇಕು. ಖಾಲಿ ಇರುವ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಕಲಿಸುವವರೇ ಇಲ್ಲದಂತಾಗುತ್ತದೆ.

- ಪ್ರೊ.ಎನ್‌.ಕೆ.ಲೋಕನಾಥ್‌, ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ

Share this article