ಹೂವಿನಹಡಗಲಿಯ ಮಾಗಳ ಜಾಕ್‌ವೆಲ್‌ ನಿರ್ವಹಣೆಗಿಲ್ಲ ನಯಾಪೈಸೆ ಅನುದಾನ

KannadaprabhaNewsNetwork | Published : Jul 4, 2024 1:03 AM

ಸಾರಾಂಶ

ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ, ಕಾಲುವೆ ನೀರು ನಂಬಿಕೊಂಡು ಸಾವಿರಾರು ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ, ಕಾಲುವೆ ನೀರು ನಂಬಿಕೊಂಡು ಸಾವಿರಾರು ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಆದರೆ, ಮಾಗಳ ಜಾಕ್‌ವೆಲ್‌ನ ಮೋಟರ್‌ ಪಂಪ್‌ ಜಾಮ್‌ ಆಗಿ ಐದು ವರ್ಷ ಕಳೆದಿವೆ. ನಿರ್ವಹಣೆಗೆ ನೀರಾವರಿ ನಿಗಮದಿಂದ ನಯಾ ಪೈಸೆ ಅನುದಾನ ಬಂದಿಲ್ಲ. ಇದರಿಂದ ನದಿಯಲ್ಲಿ ನೀರಿದ್ದರೂ ಕಾಲುವೆಗೆ ನೀರಿಲ್ಲ. ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿನ ಮಾಗಳ, ಹಗರನೂರು, ಹಿರೇಹಡಗಲಿ ಗ್ರಾಮಗಳ ರೈತರ ಜಮೀನುಗಳಿಗೆ ನೀರುಣಿಸಲು ಮಾಗಳ ಜಾಕ್‌ವೆಲ್‌ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಸಿಮೆಂಟ್‌ ಪೈಪ್‌ ಲೈನ್‌ ಹಾಕಿದ್ದರಿಂದ ನೀರಿನ ಒತ್ತಡಕ್ಕೆ ಅವು ಒಡೆದು ಹೋಗಿದ್ದವು. ಕಳೆದ ಐದು ವರ್ಷಗಳಿಂದ ನೀರೆತ್ತದೇ ಬಂದ್‌ ಆಗಿರುವ ಮೋಟರ್ ಹಾಗೂ ಪಂಪ್‌ಗಳು ನಿರ್ವಹಣೆ ಇಲ್ಲದೇ ಹಾಳಾಗಿವೆ.

ಈ ಹಿಂದೆ ಅಳವಡಿಸಿದ್ದ ಸಿಮೆಂಟ್‌ ಪೈಪ್‌ಲೈನ್‌ ತೆರವು ಮಾಡಿ, ಈಗ 4 ಕಿ.ಮೀ. ಉದ್ದ ಸ್ಟೀಲ್‌ ಪೈಪ್‌ಲೈನ್‌ ಹಾಕಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ವಾಲ್‌ಗಳನ್ನು ಅಳವಡಿಸಲಾಗಿದೆ. ಈಗಾಗಲೇ ಪೈಪ್‌ಲೈನ್‌ ಕಾಮಗಾರಿ ಪೂರ್ಣವಾಗಿದೆ. ಆದರೆ, ಮೋಟರ್‌ ಪಂಪ್‌ಗಳು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ವಿಳಂಬವಾಗುವ ಸಾಧ್ಯತೆ ಇದೆ.

ಮಾಗಳ ಜಾಕ್‌ವೆಲ್‌ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ಹಗರನೂರು, ಹಿರೇಹಡಗಲಿ, ಮಾಗಳ, ವಡ್ಡನಹಳ್ಳಿ ತಾಂಡಾ, ಕೆ. ಅಯ್ಯನಹಳ್ಳಿ ಸೇರಿದಂತೆ 3000 ಎಕರೆ ಪ್ರದೇಶದಲ್ಲಿ ರೈತರು ವಿವಿಧ ಬೆಳೆ ಬಿತ್ತನೆ ಮಾಡಿದ್ದಾರೆ. ಇನ್ನೇನು ಸ್ಟೀಲ್‌ ಪೈಪ್‌ಲೈನ್‌ ಆಯ್ತು, ನಮ್ಮೂರ ಜಮೀನುಗಳಿಗೆ ನೀರು ಬಂತು ಎಂಬ ಖುಷಿಯಲ್ಲಿದ್ದ ರೈತರಿಗೆ ಮೋಟರ್‌ ಪಂಪ್‌ ಜಾಮ್‌ ಆಗಿರುವುದು ರೈತರಿಗೆ ಆಸೆಗೆ ಬರೆ ಎಳೆದಂತಾಗಿದೆ.

ಸಿಂಗಟಾಲೂರು ಬ್ಯಾರೇಜ್‌ನ 3.117 ಟಿಎಂಸಿ ಒಟ್ಟು ನೀರು ಸಂಗ್ರಹ ಸಾಮರ್ಥ್ಯದಲ್ಲಿ ಸದ್ಯದಲ್ಲಿ 1.940 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 12360 ಕ್ಯೂಸೆಕ್‌ ಒಳಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇದೆ. ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗಿದ್ದ ಸಂದರ್ಭದಲ್ಲಿ ನೀರು ಬಳಕೆ ಮಾಡಿಕೊ‍ಳ್ಳಲು ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿವೆ.

ಯೋಜನೆಯ ಹಿನ್ನೀರು ಬಳಕೆಗಾಗಿ ಮಾಗಳ ಬಳಿ ನಿರ್ಮಾಣವಾಗಿರುವ 10 ಕೆರೆಗಳ ನೀರು ತುಂಬಿಸುವ ಯೋಜನೆಯಿಂದ ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿತ್ತು. ಆದರೆ, ಅಲ್ಲಲ್ಲಿ ಅಳವಡಿಸಿದ ವಾಲ್‌ಗಳಲ್ಲಿ ನೀರು ಸೋರಿಕೆ, ಕೆಲವೆಡೆ ಪೈಪ್‌ಲೈನ್‌ ದುರಸ್ತಿಗೆ ಬಂದಿವೆ. ಇದರಿಂದ ಕೆರೆಗಳಿಗೆ ನೀರು ಹರಿಸಲು ಅಧಿಕಾರಿಗಳು, ಗುತ್ತಿಗೆದಾರರ ಮನವೊಲಿಸಿ ದುರಸ್ತಿ ಮಾಡಿಸುತ್ತಿದ್ದಾರೆ.

ಮಾಗಳ ಜಾಕ್‌ವೆಲ್‌ಗೆ ಸಂಬಂಧಪಟ್ಟ ಮೋಟರ್‌ ಪಂಪ್‌ ಆರಂಭಿಸದೇ ಐದು ವರ್ಷಗಳಾಗಿವೆ. ಈ ಪಂಪ್‌ಗಳನ್ನು ದುರಸ್ತಿ ಮಾಡಿಸಲು ಚೆನ್ನೈಗೆ ಕಳಿಸಲಾಗುತ್ತಿದೆ. ದುರಸ್ತಿ ಆದ ಕೂಡಲೇ ಕಾಲುವೆಗೆ ನೀರು ಹರಿಸುತ್ತೇವೆ ಎನ್ನುತ್ತಾರೆ ಸಿಂಗಟಾಲೂರು ಏತನೀರಾವರಿ ಯೋಜನೆಯ ಹೂವಿನಹಡಗಲಿ ಎಇಇ ರಾಘವೇಂದ್ರ.

ಮಾಗಳ, ಹಗರನೂರು, ಹಿರೇಹಡಗಲಿ, ವಡ್ಡನಹಳ್ಳಿ ತಾಂಡ, ಕೆ.ಅಯ್ಯನಹಳ್ಳಿ ಗ್ರಾಮಗಳ ರೈತರು ಮಳೆ ಮತ್ತು ಕಾಲುವೆ ನೀರು ನೆಚ್ಚಿಕೊಂಡು ಸಾವಿರಾರು ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಮೋಟರ್‌ ಪಂಪ್‌ ದುರಸ್ತಿಗೆ ಬೇಗನೆ ಸರ್ಕಾರದಿಂದ ಅನುದಾನ ಬಿಡುಗಡೆ ಆಡಲಿ ಎನ್ನುತ್ತಾರೆ ಮಾಗಳ ರೈತ ಎಂ.ತವನಪ್ಪ.

Share this article