ಡಿಸಿಎಂ ಹುದ್ದೆ ಜಾತಿಗಲ್ಲ, ಪಕ್ಷ ನಿಷ್ಠೆ, ಕಾರ್ಯಕ್ಷಮತೆಯಿಂದ ಡಿಕೆಶಿಗೆ ದಕ್ಕಿದೆ
ಉಪ ಮುಖ್ಯಮಂತ್ರಿ ಆಯ್ಕೆ ಮಾಡಿರುವುದು ಯಾವುದೇ ಜಾತಿ ಆಧಾರದ ಮೇಲಲ್ಲ. ಯಾವುದೇ ಕಾರಣಕ್ಕೂ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಅವಶ್ಯಕತೆಯೇ ಬರುವುದಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಡಿಸಿಎಂ ಡಿ.ಕೆ.ಶಿವಕುಮಾರ ಪರ ಮತ್ತೆ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ ಯಾರೂ ಪಕ್ಷದ ವಿಚಾರವಾಗಿ ಮಾತನಾಡದಂತೆ ಸೂಚಿಸಿದ್ದರು. ಈಗ ಹಿರಿಯರೇ ಮಾತನಾಡಿದ್ದರಿಂದ ನಾವೂ ಸಹ ಮಾತನಾಡುತ್ತಿದ್ದೇವೆ ಎಂದರು.ಪಕ್ಷ ನಿಷ್ಠೆ, ಕಾರ್ಯಕ್ಷಮತೆ ಗಮನಿಸಿ, ಡಿ.ಕೆ.ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಜಾತಿಯ ಆಧಾರದ ಮೇಲಲ್ಲ. ಈಗಾಗಲೇ ಒಂದು ಡಿಸಿಎಂ ಹುದ್ದೆ ಇದ್ದು, ಮತ್ತೆ ಯಾವುದೇ ಕಾರಣಕ್ಕೂ ಡಿಸಿಎಂಗಳ ಅವಶ್ಯಕತೆಯೂ ಬರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಜನಪರ ಕೆಲಸದ ಆಧಾರದ ಮೇಲೆ ಕನಿಷ್ಟ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋಣ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಸಹಿತ ಡಿಸಿಎಂ ಹುದ್ದೆಗಳ ಪ್ರಸ್ತಾಪವಿಲ್ಲವೆಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಡಿಸಿಎಂ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ವಾಸ್ತವ ಹೀಗಿರುವಾಗ ಡಿಸಿಎಂ ಹುದ್ದೆಗಳ ಸೃಷ್ಟಿಯ ವಿಚಾರವೇ ಬರದು ಎಂದು ವಿವರಿಸಿದರು.
ಯಾರೋ ಮೂರು-ನಾಲ್ಕು ಜನರು ಹೇಳಿದ ತಕ್ಷಣ ಡಿಸಿಎಂ ಹುದ್ದೆಗಳನ್ನು ಹೆಚ್ಚು ಮಾಡುವುದಿಲ್ಲ. ನಾವು ಡಿ.ಕೆ.ಶಿವಕುಮಾರರ ಪರವಾಗಿ ಮಾತನಾಡುತ್ತಿದ್ದೆವು. ಆದರೆ, ಯಾವಾಗ ಡಿಕೆಶಿ ಸಾಹೇಬರು ಮಾತನಾಡದಂತೆ ಸೂಚಿಸಿದರೋ ನಾವೂ ಮಾತನಾಡಲಿಲ್ಲ. ಈಗ ಮತ್ತೆ ಹಿರಿಯರೇ ಮಾತನಾಡಿದ್ದರಿಂದ ನಾವೂ ಸಹ ಡಿಕೆಶಿ ಸಾಹೇಬರ ಪರವಾಗಿ ನಿಲ್ಲಬೇಕಾಗುತ್ತದೆ.