ಜಿ.ಡಿ. ಹೆಗಡೆ
ಕಾರವಾರ: ರಾಜ್ಯ ಸರ್ಕಾರದಿಂದ ಪಶುಸಂಗೋಪನಾ ಇಲಾಖೆಗೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸಂಚಾರಿ ಆ್ಯಂಬುಲೆನ್ಸ್ ನೀಡಿದ್ದು, ಹೈನುಗಾರರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ. ಸಹಾಯವಾಣಿ ೧೯೬೨ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರೇ ಇಲ್ಲ.೨೦೨೨ರಲ್ಲಿ ಅಂದಿನ ಸರ್ಕಾರ ಗ್ರಾಮೀಣ ಭಾಗದಲ್ಲಿನ ಜಾನುವಾರುಗಳು ಅನಾರೋಗ್ಯಕ್ಕೊಳಗಾದಾಗ ಚಿಕಿತ್ಸೆ ನೀಡುವ ಸಲುವಾಗಿ ಸಂಚಾರಿ ಪಶು ಚಿಕಿತ್ಸಾಲಯ ಎನ್ನುವ ಆ್ಯಂಬುಲೆನ್ಸ್ ರಾಜ್ಯಾದ್ಯಂತ ಪ್ರತಿ ಜಿಲ್ಲೆಗೆ ನೀಡಿತ್ತು. ಅದರಂತೆ ಉತ್ತರ ಕನ್ನಡಕ್ಕೆ ೧೩ ಆ್ಯಂಬುಲೆನ್ಸ್ ಬಂದಿದ್ದು, ಮೊದಲ ಒಂದು ವರ್ಷ ವೈದ್ಯರು, ಚಾಲಕರು, ಸಹಾಯಕರು ಇಲ್ಲದೇ ಹಾಗೆ ನಿಂತಿತ್ತು. ಬಳಿಕ ರಾಜ್ಯಮಟ್ಟದಲ್ಲೇ ಖಾಸಗಿ ಕಂಪನಿಗೆ ಟೆಂಡರ್ ನೀಡಿ ಒಬ್ಬ ಪಶು ವೈದ್ಯ, ಒಬ್ಬ ಸಹಾಯಕ, ಒಬ್ಬ ಚಾಲಕನ ನೇಮಕಾತಿಯಾಗಿತ್ತು. ಹೈನುಗಾರರು ಆ್ಯಂಬುಲೆನ್ಸ್‌ಗೆ ಸಂಪರ್ಕಿಸಲು ೧೯೬೨ ಸಹಾಯವಾಣಿ ಕೂಡಾ ಇದ್ದು, ಕಳೆದ ಕೆಲವು ದಿನಗಳಿಂದ ಈ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರೆ ಇಲ್ಲ. ಹೀಗಾಗಿ ಜಾನುವಾರುಗಳ ಮೂಕರೋದನ ಕೇಳುವವರೇ ಇಲ್ಲವಾಗಿದ್ದಾರೆ.೧೦೮, ೧೧೨ ಸಹಾಯವಾಣಿಯಂತೆ ೧೯೬೨ ಸಹಾಯವಾಣಿಗೆ ಕರೆ ಮಾಡಿದರೆ ಬೆಂಗಳೂರಿನ ಕೇಂದ್ರ ಕಚೇರಿಗೆ ಕರೆ ಹೋಗುತ್ತದೆ. ಅಲ್ಲಿಂದ ಕರೆ ಮಾಡಿದ ಹೈನುಗಾರನ ಊರಿನ ಸಮೀಪ ಇರುವ ಆ್ಯಂಬುಲೆನ್ಸ್‌ಗೆ ಮಾಹಿತಿ ರವಾನೆಯಾಗುತ್ತದೆ. ನಿಯೋಜಿತ ವೈದ್ಯರು, ಸಹಾಯಕರು ಆ್ಯಂಬುಲೆನ್ಸ್‌ನೊಂದಿಗೆ ಹೈನುಗಾರನ ಮನೆಗೆ ತೆರಳಿ ಅನಾರೋಗ್ಯಕ್ಕೊಳಗಾದ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇದು ಉತ್ತರ ಕನ್ನಡದಂತಹ ಗುಡ್ಡಗಾಡು ಜಿಲ್ಲೆಗೆ ವರದಾನವಾಗಿತ್ತು. ಅನಾರೋಗ್ಯಕ್ಕೊಳಗಾದ ಜಾನುವಾರುಗಳನ್ನು ಸಾವಿರಾರು ರುಪಾಯಿ ಖರ್ಚು ಮಾಡಿ ದೂರದ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂಕಷ್ಟವನ್ನು ತಪ್ಪಿಸಿತ್ತು. ಈಗ ಸಹಾಯವಾಣಿಗೆ ಕರೆ ಮಾಡಿದರೆ ಸ್ಪಂದಿಸುವವರೆ ಇಲ್ಲದೇ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವುದೇ ಸವಾಲಿನ ಕೆಲಸವಾಗಿದೆ. ಸಿಬ್ಬಂದಿ ರಾಜೀನಾಮೆ: ಉತ್ತರ ಕನ್ನಡಕ್ಕೆ ೧೩ ಆ್ಯಂಬುಲೆನ್ಸ್ ನೀಡಲಾಗಿದ್ದು, ಆ್ಯಂಬುಲೆನ್ಸ್ ಬಂದ ವರ್ಷದ ಬಳಿಕ ವೈದ್ಯರ, ಸಹಾಯಕರ, ಚಾಲಕರ ನೇಮಕವಾಗಿತ್ತು. ಆದರೆ ಮುಂಡಗೋಡ, ಬನವಾಸಿ, ಕುಮಟಾದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಅಂಕೋಲಾಕ್ಕೆ ನೀಡಲಾದ ಆ್ಯಂಬುಲೆನ್ಸ್‌ಗೆ ಇದುವರೆಗೂ ಸಿಬ್ಬಂದಿ ನೇಮಕವೇ ಆಗಿಲ್ಲ. ಹೈನುಗಾರರು ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಹೈರಾಣಾಗಿದ್ದಾರೆ.ಕೆಲವು ಅನಿವಾರ್ಯ ಕಾರಣದಿಂದ ಸಿಬ್ಬಂದಿ ರಾಜೀನಾಮೆ ನೀಡಿದ್ದು, ಹೊಸದಾಗಿ ನಿಯೋಜನೆ ಆಗಬೇಕಿದೆ. ಈ ಪ್ರಕ್ರಿಯೆಯನ್ನು ಟೆಂಡರ್ ಪಡೆದ ಕಂಪನಿ ಅತಿ ಶೀಘ್ರವಾಗಿ ಮಾಡುವುದರ ಜತೆಗೆ ಸಹಾಯವಾಣಿ ಕೂಡಾ ಸರಿಹೋಗುವಂತೆ ಕ್ರಮ ವಹಿಸಬೇಕಿದೆ. ಈ ಮೂಲಕ ಹೈನುಗಾರರಿಗೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಹಾಯಹಸ್ತ ಚಾಚಬೇಕಿದೆ. ತಾಂತ್ರಿಕ ಸಮಸ್ಯೆ: ಸಂಚಾರಿ ಪಶು ಅಂಬ್ಯುಲೆನ್ಸ್ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಖಾಸಗಿ ಕಂಪನಿಗೆ ನೀಡಲಾಗಿದ್ದು, ಜಿಲ್ಲಾ ಮಟ್ಟಕ್ಕೆ ಯಾವುದೇ ಸಂಪರ್ಕವಿಲ್ಲ. ಸಹಾಯವಾಣಿ ಕೂಡಾ ಅದೇ ಕಂಪನಿ ನಿರ್ವಹಣೆ ಮಾಡುತ್ತದೆ. ಈ ಸಂಖ್ಯೆಗೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿಗೆ ಹೋಗುತ್ತದೆ. ಕಳೆದ ಕೆಲವು ದಿನಗಳಿಂದ ಸಮಸ್ಯೆ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಕಂಪನಿಗೆ ಕೇಳಿದರೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎನ್ನುತ್ತಿದ್ದಾರೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಮೋಹನಕುಮಾರ ಕೆ.ಎಂ. ತಿಳಿಸಿದರು.ಹೈನುಗಾರರ ಅನುಕೂಲಕ್ಕಾಗಿ ಯೋಜನೆ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ ಬರುವ ಪಶು ಸಂಜೀವಿನಿ(ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ) ಯೋಜನೆ ಕೇಂದ್ರ ಸರ್ಕಾರದ ಶೇ. ೬೦ ಮತ್ತು ರಾಜ್ಯ ಸರ್ಕಾರದ ಶೇ. ೪೦ರಷ್ಟು ಅನುದಾನದೊಂದಿಗೆ ಗ್ರಾಮೀಣ ಭಾಗದಲ್ಲಿ ಅನಾರೋಗ್ಯಕ್ಕೆ ಒಳಗಾದ ಜಾನುವಾರುಗಳ ಮಾಲೀಕರ ಮನೆಗೆ ತೆರಳಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಹೈನುಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.