ಧಾರವಾಡ:
ಜಿಲ್ಲೆಯಲ್ಲಿ ಜೂನ್ ತಿಂಗಳ ವರೆಗೆ ಅಗತ್ಯ ಕುಡಿಯುವ ನೀರಿನ ಲಭ್ಯತೆ ಹಾಗೂ ಮೇವು ದಾಸ್ತಾನು ಇದೆ. ರೈತರು ಸಹ ಮೇವು ಬಣವಿ ಹೊಂದಿದ್ದಾರೆ. ಆದರೂ ರೈತರಿಗೆ ಸರ್ಕಾರದ ನೆರವು, ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬುದನ್ನು ಮನವರಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ಕೃಷಿ ಭೂಮಿ ರಹಿತರು ಮತ್ತು ಹೈನುಗಾರಿಕೆ ಮಾಡುವವರಿಗೂ ಅನುಕೂಲವಾಗಲೆಂದು ಜಿಲ್ಲೆಯ ವಿವಿಧೆಡೆ ಬೇಡಿಕೆಗೆ ಅನುಗುಣವಾಗಿ ಆರು ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ರೈತರಿಗೆ ಈ ಕುರಿತು ಮಾಹಿತಿ ನೀಡಿದ್ದು, ರೈತರು ಅಗತ್ಯವಿದ್ದಾಗ ಮೇವು ಬ್ಯಾಂಕಿನಿಂದ ನಿಯಮಾನುಸಾರ ಮೇವು ಪಡೆಯಬಹುದಾಗಿದೆ ಎಂದರು.
ಜಾನುವಾರುಗಳ ಮೇವನ್ನು ಯಾರಿಗೂ ಬಲ್ಕ್ ಸರಬರಾಜು ಮಾಡುವುದಿಲ್ಲ. ವೈಯಕ್ತಿಕವಾಗಿ ರೈತರಿಗೆ ಮಾತ್ರ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ರೈತರಿಗೆ ಮೇವು ಬೇಕಾದಲ್ಲಿ ಆಯಾ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು, ತಹಸೀಲ್ದಾರ್ ಅಥವಾ ತಾಲೂಕು ಆಡಳಿತ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಪರ್ಕಿಸಬಹುದು. ಈ ಕುರಿತು ಗ್ರಾಮಮಟ್ಟದಲ್ಲಿ ಪಂಚಾಯಿತಿಗಳ ಮೂಲಕ ಡಂಗೂರ ಸಾರುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು ಎಂದರು.ಖಾಸಗಿ ಬೋರ್‌ವೆಲ್ ಮೂಲಕ ಪ್ರಸಕ್ತ ವಾರದಲ್ಲಿ ಧಾರವಾಡ ತಾಲೂಕಿನ 10 ಗ್ರಾಮಗಳಿಗೆ 13 ಬೋರ್‌ವೆಲ್, ಅಳ್ನಾವರ ತಾಲೂಕಿನ ಒಂದು ಗ್ರಾಮಕ್ಕೆ ಎರಡು ಬೋರ್‌ವೆಲ್, ಹುಬ್ಬಳ್ಳಿ ತಾಲೂಕಿನ ಮೂರು ಗ್ರಾಮಗಳಿಗೆ ಮೂರು ಬೋರ್‌ವೆಲ್ ಮತ್ತು ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ, ಕಲಘಟಗಿ ತಾಲೂಕಿನ 13 ಗ್ರಾಮಗಳಿಗೆ 27 ಬೋರ್‌ವೆಲ್ ಹಾಗೂ ಕುಂದಗೋಳ ತಾಲೂಕಿನ ಎರಡು ಗ್ರಾಮಗಳಿಗೆ ಎರಡು ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಒಟ್ಟಾರೆ ಈ ಹಿಂದೆ ಅಂದಾಜಿಸಿ, ಸಮಸ್ಯಾತ್ಮಕವಾಗಿ ಗುರುತಿಸಿದ್ದ 153 ಗ್ರಾಮಗಳಿಗೆ ಅಗತ್ಯವಿದ್ದಾಗ ತಕ್ಷಣ ನೀರು ಪೂರೈಕೆ ಮಾಡಲು ಆಯಾ ಗ್ರಾಮ ವ್ಯಾಪ್ತಿಯಲ್ಲಿರುವ 390 ಖಾಸಗಿ ಬೋರ್‌ವೆಲ್ ಗುರುತಿಸಿ, ಬೋರ್‌ವೆಲ್ ಮಾಲೀಕರಿಂದ ಒಪ್ಪಿಗೆ ಪತ್ರ ಸಹ ಪಡೆಯಲಾಗಿದೆ ಎಂದರು.ಬರಗಾಲ ಹಿನ್ನೆಲೆಯಲ್ಲಿ ನರೇಗಾ ಕೂಲಿ ನೀಡುವಾಗ ಒಂದು ಗ್ರಾಮ ಒಂದು ಕೆರೆ ಯೋಜನೆ ಮಾಡಿಕೊಂಡು ಆಯಾ ಗ್ರಾಮದ ಎಲ್ಲಾ ನರೇಗಾ ಕೂಲಿ ಕಾರ್ಮಿಕರಿಂದ ಅವರದ್ದೇ ಊರಿನ ಒಂದು ಕೆರೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.