- ಜಮೀನುಗಳಲ್ಲೇ ಒಣಗುತ್ತಿರುವ ಬೆಳೆಗಳು - ಬೆಳೆಗಳ ಉಳಿವಿಗೆ 10 ರಿಂದ 13 ಟಿಎಂಸಿ ನೀರು ಅವಶ್ಯ - 1,59,607 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆ ಕನ್ನಡಪ್ರಭ ವಾರ್ತೆ ಮಂಡ್ಯ ಮಳೆ ಕೊರತೆಯಿಂದಾಗಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರಿನ ಅಭಾವ ಸೃಷ್ಟಿಯಾಗಿದೆ. ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಎರಡು ತಿಂಗಳಿಗೆ ಕನಿಷ್ಠ 10 ರಿಂದ 13 ಟಿಎಂಸಿ ನೀರಿನ ಅಗತ್ಯವಿದೆ. ಆದರೆ, ಬೆಳೆಗಳಿಗೆ ಒದಗಿಸಲು ನೀರೇ ಇಲ್ಲದಿರುವುದು ರೈತರು ಬೆಳೆ ಕಳೆದುಕೊಳ್ಳುವ ಸ್ಥಿತಿ ತಲುಪುವಂತೆ ಮಾಡಿದೆ. ದುರದೃಷ್ಟವೋ ಏನೋ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶದ ರೈತರು ನೀರಿಗಾಗಿ ಪರಿತಪಿಸುತ್ತಿದ್ದರೆ, ಸೋಮವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನ.1ರಿಂದ ನ.15ರವರೆಗೆ ನಿತ್ಯ ತಮಿಳುನಾಡಿಗೆ 2,500 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿರುವುದು ರೈತರನ್ನು ಕಾದ ಬಾಣಲೆಯಿಂದ ಬೆಂಕಿಗೆ ಹಾಕಿದಂತಾಗಿದೆ. ಹಾಲಿ ಬೆಳೆದು ನಿಂತಿರುವ ಭತ್ತ, ಕಬ್ಬು ಬೆಳೆಗೆ ಡಿಸೆಂಬರ್ ಅಂತ್ಯದವರೆಗೆ ನೀರಿನ ಅವಶ್ಯಕತೆ ಇದೆ. ಈಗಾಗಲೇ ನೀರಿಲ್ಲದೆ ಭತ್ತ, ಕಬ್ಬು ಗದ್ದೆಯಲ್ಲೇ ಒಣಗಲಾರಂಭಿಸಿದೆ. ಭತ್ತಕ್ಕಿಂತಲೂ ಕಬ್ಬಿಗೆ ಹೆಚ್ಚು ನೀರಿನ ಅವಶ್ಯಕತೆ ಇದೆ. ನೀರಿಲ್ಲದಿರುವುದರಿಂದ ಬೆಳಗಳಿಗೆ ನೀರು ಸಿಗುವ ಸಾಧ್ಯತೆಗಳೇ ಕ್ಷೀಣಿಸಿವೆ. ಈಗಿನ ಪರಿಸ್ಥಿತಿಯಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಹುರುಳಿ ಚೆಲ್ಲುವುದೂ ಕಷ್ಟವಾಗಿದೆ. ಮಳೆ ಹಾಗೂ ನೀರಿಲ್ಲದ ಕಾರಣ ಹುರುಳಿ ಚೆಲ್ಲುವುದನ್ನೂ ರೈತರು ಕೈಬಿಟ್ಟಿದ್ದಾರೆ. ಮಳವಳ್ಳಿ ತಾಲೂಕಿನಲ್ಲಿ 6 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 5300 ಹೆಕ್ಟೇರ್ ಪ್ರದೇಶದಲ್ಲಿ ಕೂಳೆ ಕಬ್ಬು ಬೆಳೆದಿದ್ದಾರೆ. ಕಾವೇರಿ ನೀರಿನ ಕೊನೆಯಭಾಗವಾಗಿರುವ ತಾಲೂಕು ಕೆಆರ್‌ಎಸ್ ನಿರ್ಮಾಣಗೊಂಡು ನೂರು ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ನೀರಿಲ್ಲದ ಪರಿಸ್ಥಿತಿಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವ ದಾರಿಯನ್ನೇ ಕಾಣದೆ ರೈತರು ಕಂಗಾಲಾಗಿದ್ದಾರೆ. ಕಾವೇರಿ ನದಿ ಮಡಿಲಲ್ಲೇ ಇರುವ ಶ್ರೀರಂಗಪಟ್ಟಣ ತಾಲೂಕಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೇ ನಡೆದಿಲ್ಲ. ತಾಲೂಕಿನಲ್ಲಿರುವ 25,566 ಹೆಕ್ಟೇರ್ ಕೃಷಿ ಭೂಮಿಯಲ್ಲಿ 7600 ಹೆಕ್ಟೇರ್ ಖಾಲಿ ಬಿದ್ದಿದೆ. ಕೃಷಿಗೆ ಚಟುವಟಿಕೆ ನಡೆಸಲು ಪೂರಕವಾಗಿರುವ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಯಾವುದೇ ಬಿತ್ತನೆ ಕಾರ್ಯ ನಡೆಯದಿರುವುದು ದುರಂತವಾಗಿದೆ. ಕೆ.ಆರ್.ಪೇಟೆ ತಾಲೂಕು: ಕೆ.ಆರ್.ಪೇಟೆ ತಾಲೂಕು ಸ್ವಲ್ಪ ಪ್ರಮಾಣದಲ್ಲಿ ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದೆ. ಈ ತಾಲೂಕಿನಲ್ಲೂ ಬಹುತೇಕ ಕಡೆ ಬಿತ್ತನೆ ಸಂಪೂರ್ಣ ಕುಂಠಿತಗೊಂಡಿದೆ. 7,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಖಾಲಿ ಬಿದ್ದಿದೆ. ಹೆಚ್ಚು ಮಳೆಯಾಶ್ರಿತ ಪ್ರದೇಶವನ್ನು ಹೊಂದಿರುವ ತಾಲೂಕಿನಲ್ಲಿ ಹುರುಳಿ ಬಿತ್ತನೆಯೂ ಸಮರ್ಪಕವಾಗಿ ನಡೆದಿಲ್ಲ. ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಅಕ್ಕಿಹೆಬ್ಬಾಳು, ಕಿಕ್ಕೇರಿ ಹೋಬಳಿಯಲ್ಲಿ ಸ್ವಲ್ಪ ನೀರಾವರಿ ಭೂಮಿ ಇದೆ. ಇನ್ನು ಬೂಕಿನಕೆರೆ, ಶೀಳನೆರೆ, ಸಂತೆಬಾಚಹಳ್ಳಿ, ಕಸಬಾ ಹೋಬಳಿಯಲ್ಲಿ ಬಿತ್ತನೆ ಪ್ರಮಾಣ ತೀವ್ರ ಹಿಂದುಳಿದಿದೆ. ಸಂತೇಬಾಚಹಳ್ಳಿ ಹೋಬಳಿ ತೀವ್ರ ಮಳೆ ಕೊರತೆ ಅನುಭವಿಸುತ್ತಿದ್ದು ಅನ್ನದಾತರು ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಪಾಂಡವಪುರ ತಾಲೂಕು: ಪಾಂಡವಪುರ ತಾಲೂಕಿನಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಬೆಳೆ ಬೆಳೆದಿದ್ದು, ಸುಮಾರು 2 ಸಾವಿರ ಎಕರೆ ಪ್ರದೇಶ ಪಾಳು ಬಿದ್ದಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಮಳೆಯಾದ ಪರಿಣಾಮ ಹುರುಳಿ ಬಿತ್ತನೆ ಚುರುಕನ್ನು ಪಡೆದುಕೊಂಡಿತ್ತು. ಇದರಿಂದ ಬಿತ್ತನೆಯಾಗದೆ ಪಾಳು ಬೀಳುವ ಪ್ರದೇಶ ಕಡಿಮೆಯಾಗಿದೆ. ಮದ್ದರು, ನಾಗಮಂಗಲ ತಾಲೂಕು: ಮದ್ದೂರು ತಾಲೂಕಿನಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಆತಗೂರು, ಕೊಪ್ಪ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಕಡಿಮೆಯಾಗಿದ್ದು ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ನಾಗಮಂಗಲ ತಾಲೂಕಿನಲ್ಲಿ ಕೇವಲ 60.ರಷ್ಟು ಬಿತ್ತನೆಯಾಗಿದ್ದು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಎಲ್ಲೆಡೆ ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ. ವಾಡಿಕೆಯಷ್ಟು ಮಳೆ ಬಾರದೆ, ನಾಲೆಗಳಲ್ಲಿ ನೀರು ಹರಿಯದೆ ಮುಂದಿನ ಪರಿಣಾಮದ ಬಗ್ಗೆ ರೈತರಿಗೆ ದಿಕ್ಕೇತೋಚದಂತಾಗಿದ್ದಾರೆ. ಬಾಕ್ಸ್.... ಕೆಆರ್‌ಎಸ್‌ನಲ್ಲಿರೋದೇ 14 ಟಿಎಂಸಿ ನೀರು ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿರೋದು ಕೇವಲ 14 ಟಿಎಂಸಿ ನೀರು (ಡೆಡ್ ಸ್ಟೋರೇಜ್ ಹೊರತು ಪಡಿಸಿ) ಮಾತ್ರ. ಇದರಲ್ಲಿ ತಮಿಳುನಾಡಿಗೆ ನೀರು ಹರಿಸುವುದೋ, ಬೆಳೆಗಳಿಗೆ ನೀರು ಹರಿಸುವುದೋ, ಕುಡಿಯುವ ನೀರಿಗೆ ಕಾಯ್ದಿರಿಸುವುದೋ ಎಂಬ ಗೊಂದಲ ಮನೆ ಮಾಡಿದೆ. ಈಗಿರುವ ನೀರಿನ ಸಂಗ್ರಹದಲ್ಲಿ ಬೆಳೆಗಳಿಗೆ ನೀರು ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ. ಕಟ್ಟು ಪದ್ಧತಿಯಲ್ಲಿ ನೀರು ಹರಿಸಿದರೂ ಎಲ್ಲ ಭಾಗಕ್ಕೂ ನೀರು ಖಂಡಿತ ಸಿಗುವುದಿಲ್ಲ. ಅಣೆಕಟ್ಟೆಯ ಕೆಳಭಾಗದ ಎರಡು ತಾಲೂಕಿನ ಕೆಲವು ಪ್ರದೇಶದ ಬೆಳೆಗಳು ಜೀವ ಉಳಿಸಿಕೊಳ್ಳಬಹುದೇ ವಿನಃ ಉಳಿದ ಬೆಳೆಗಳಿಗೆ ನೀರು ಸಿಗುವುದು ಅನುಮಾನ. ಕೋಟ್..... ಯಾವ ಕಾರಣಕ್ಕೂ ನೀರು ಕೊಡಲಾಗದು ಈಗಿರುವ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಕೊಡುವುದಕ್ಕೆ ಸರ್ಕಾರದಿಂದ ಸಾಧ್ಯವೇ ಇಲ್ಲ. ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ 14 ಟಿಎಂಸಿಯಷ್ಟು ನೀರಿನ ಅವಶ್ಯಕತೆ ಇದೆ. ಸರ್ಕಾರ ಕಾವೇರಿ ನೀರನ್ನು ಹರಿಯಬಿಟ್ಟು ತಣ್ಣಗೆ ಕುಳಿತಿದೆ. ರೈತರು ಸಂಕಷ್ಟದ ಉರಿಯಲ್ಲಿ ಬೇಯುತ್ತಿದ್ದಾರೆ. - ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡ