ಪರಿಶಿಷ್ಟರ ಒಳ ಮೀಸಲು ಜಾರಿಗೆ ಅಪಸ್ವರ ಬೇಡ

KannadaprabhaNewsNetwork | Published : Nov 25, 2024 1:01 AM

ಸಾರಾಂಶ

ಚಿತ್ರದುರ್ಗದ ಕ್ರೀಡಾ ಭವನದಲ್ಲಿ ಭಾನುವಾರ ಆಯೋಜಿಸಲಾದ ಒಳ ಮೀಸಲಾತಿ ಜಾರಿ ಕುರಿತ ಸಂವಾದದಲ್ಲಿ ಜೆ.ಯಾದವರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರಿಶಿಷ್ಟರಿಗೆ ಒಳ ಮೀಸಲು ನೀಡುವ ವಿಚಾರದಲ್ಲಿ ಅಪಸ್ವರಗಳು ಬೇಡ. ಮೀಸಲಾತಿಯನ್ನು ಒಪ್ಪಿಕೊಳ್ಳುವವರು ಒಳ ಮೀಸಲಾತಿಗೆ ವಿರೋಧಿಸಿದರೆ ಡಾ.ಅಂಬೇಡ್ಕರ್ ಆಶಯಗಳಿಗೆ ದ್ರೋಹ ಎಸಗಿದಂತಾಗುತ್ತದೆಂದು ಚಿಂತಕ ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು. ಮಾದಿಗ ಮಹಾಸಭಾ, ಲಂಕೇಶ್ ವಿಚಾರ ವೇದಿಕೆ, ಬೀಕೆ-ಕೇಬಿ ಬಳಗ ಸಂಯುಕ್ತಾಶ್ರಯದಲ್ಲಿ ನಿವೃತ್ತ ಜಸ್ಟಿಸ್ ನಾಗಮೋಹನ್‍ದಾಸ್ ಆಯೋಗ ಸಾಧ್ಯತೆ-ಸವಾಲುಗಳು ಕುರಿತು ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂವಾದದಲ್ಲಿ ಅತಿ ಹಿಂದುಳಿದ ಸಮುದಾಯಗಳು ಒಳ ಮೀಸಲು ಹೋರಾಟವನ್ನು ಗ್ರಹಿಸಬೇಕಾದ, ಒಳಗೊಳ್ಳಬೇಕಾದ ಕ್ರಮಗಳು ವಿಷಯ ಕುರಿತು ಮಾತನಾಡಿದರು.

ಮಿಲ್ಲರ್ ಆಯೋಗ, ಎಲ್.ಜಿ.ಹಾವನೂರ್ ಆಯೋಗದ ವರದಿಯನ್ನು ಕೆಲವರು ವಿರೋಧಿಸಿದ್ದುಂಟು. ಡಿ.ವಿ.ಗುಂಡಪ್ಪನವರಿಂದ ಹಿಡಿದು ಅನೇಕ ಸಾಹಿತಿಗಳು ಮೀಸಲಾತಿ ವಿರುದ್ಧವಾಗಿ ಮಾತನಾಡಿದ್ದರು. ಶೇ.73ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಮಹರಾಜರು ನೀಡಿದ್ದರು. ಸದಾಶಿವ ಆಯೋಗ, ಕಾಂತರಾಜ್ ಆಯೋಗದ ವಿರುದ್ಧವು ಅಪಸ್ವರಗಳು ಕೇಳಿ ಬರುತ್ತಿವೆ. ಸಿಎಂ ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿಯನ್ನು ಇಷ್ಟೊತ್ತಿಗಾಗಲೆ ಜಾರಿಗೊಳಿಸಬೇಕಿತ್ತು. ನಾಗಮೋಹನ್‍ದಾಸ್ ವರದಿಯ ಅವಶ್ಯಕತೆಯಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದರೂ ದತ್ತಾಂಶದ ನೆಪ ಹೇಳುತ್ತಿರುವುದು ರಾಜಕೀಯ ನಾಟಕ ಎಂದು ಆಪಾದಿಸಿದರು.

ರಾಜಕೀಯ ಒತ್ತಡಕ್ಕೆ ಮಣಿದಿರುವ ಸಿದ್ದರಾಮಯ್ಯನವರು ಸದಾಶಿವ ಆಯೋಗದ ವರದಿಯ ಆಧಾರದ ಮೇಲೆಯೆ ಒಳ ಮೀಸಲಾತಿ ಜಾರಿ ಮಾಡಬಹುದು. 1901 ರಿಂದ ಇಲ್ಲಿಯವರೆಗೂ ನೀಡಿರುವ ಎಲ್ಲಾ ಆಯೋಗದ ವರದಿಗಳು ಸುಪ್ರೀಂಕೋರ್ಟ್‍ಗಿಂತ ದೊಡ್ಡವಲ್ಲ. ಒಳ ಮೀಸಲಾತಿ ಬಗ್ಗೆ ಎಸ್ಸಿಗಳೆ ಅತ್ಯುಗ್ರವಾಗಿ ಮಾತನಾಡುತ್ತಿರುವುದು ನೋವಿನ ಸಂಗತಿ. ಯಾರು ಕೂಡ ಯಾರ ಮೀಸಲಾತಿಯನ್ನು ಕಸಿಯುವುದಿಲ್ಲ. ಆಯಾ ಜಾತಿಗನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಮುಂದೆ ಸ್ವಾಸ್ತ್ಯ ಸಮಾಜವಿರುವುದಿಲ್ಲ. ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.ಒಳ ಮೀಸಲಾತಿಯಡಿ ಪರಿಶಿಷ್ಟರು ಹಿಂದುಳಿದವರ ಉಪ ವರ್ಗಿಕರಣ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಇತಿಹಾಸದ ಅವಲೋಕನ ವಿಷಯ ಕುರಿತು ಮಾತನಾಡಿದ ಸಂತೋಷ್ ಕೋಡಿಹಳ್ಳಿ, ಸುಪ್ರೀಂಕೋರ್ಟ್ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿ ಮೂರು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ದತ್ತಾಂಶ ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿಗೊಳಿಸಲು ಮೀನಮೇಷ ಎಣಿಸುತ್ತಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಮಾದಿಗ ಸಮುದಾಯ ಒಂಟಿಯಲ್ಲ. ಸಂಘಟನೆ ಮಾಡಿಕೊಂಡು ಹೋರಾಡುತ್ತೇವೆ. ಒಳ ಮೀಸಲಾತಿ ಅನುಷ್ಠಾನಗೊಳಿಸಲು ಇಷ್ಟವಿಲ್ಲದಿದ್ದರೆ ಮತ್ತೆ ಕೋರ್ಟಿಗೆ ಹೋಗುತ್ತೇವೆ ಎನ್ನುವುದಾದರೆ ಹೋಗಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಒಳ ಮೀಸಲು ಹೋರಾಟ ಪ್ರಗತಿಪರರು ಹಾಗೂ ಚಿಂತನಶೀಲ ಸಮುದಾಯಗಳ ಒಗ್ಗೊಳ್ಳುವಿಕೆ ವಿಷಯ ಕುರಿತು ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು, ದೇಶದಲ್ಲಿ ಕಳೆದ 40 ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಪ್ರತಿಭಟನೆ ಚಳವಳಿಗಳು ನಡೆಯುತ್ತಲಿವೆ. ಕೊಟ್ಟ ಮೀಸಲಾತಿಯನ್ನು ಹಂಚಿ ತಿನ್ನಲು ಒಳ ಮೀಸಲಾತಿ ನೀಡುವುದಕ್ಕೆ ಅರ್ಧ ಶತಮಾನವಾಗಿದೆ. ಇದಕ್ಕಾಗಿ ಹೋರಾಟ ನಡೆಸಿದ ಅನೇಕರು ನಮ್ಮನ್ನೆಲ್ಲಾ ಅಗಲಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಜಾಣೆ ನಡೆ ಪ್ರದರ್ಶಿಸುತ್ತಿದೆ. 75 ವರ್ಷಗಳ ಕಾಲ ಮೀಸಲಾತಿ ಉಂಡವರು ಒಳ ಮೀಸಲಾತಿ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಸಾಮಾಜಿಕ-ರಾಜಕೀಯ ಚಿಂತಕ ಶಿವಸುಂದರ್, ಪತ್ರಕರ್ತ ಎಂ.ಎನ್.ಅಹೋಬಲಪತಿ, ಬಿ.ಪಿ.ಪ್ರಕಾಶ್‍ಮೂರ್ತಿ, ಹುಲ್ಲೂರು ಕುಮಾರ್, ಲಂಕೇಶ್ ವಿಚಾರ ವೇದಿಕೆಯ ಸಂಚಾಲಕ ಜಡೆಕುಂಟೆ ಮಂಜುನಾಥ್, ಕೊಟ್ಟಶಂಕರ್, ಪ್ರೊ.ಮಲ್ಲಿಕಾರ್ಜುನ್ ಆರ್.ಹಲಸಂಗಿ, ಬಿ.ಎಂ.ನಿರಂಜನ್, ಎಂ.ಆರ್.ಶಿವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜು ಸಂವಾದದಲ್ಲಿ ಪಾಲ್ಗೊಂಡಿದ್ದರು.

Share this article