ಭ್ರಷ್ಟಾಚಾರ ಮುಕ್ತ ಜಿಲ್ಲೆಗೆ ಸಂಕಲ್ಪ ಮಾಡಬೇಕು-ನ್ಯಾ. ಕೆ.ಸಿ. ಸದಾನಂದಸ್ವಾಮಿ

KannadaprabhaNewsNetwork | Published : Oct 23, 2024 1:46 AM

ಸಾರಾಂಶ

ಎಲ್ಲರೂ ತಮ್ಮ ಕೆಲಸವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡಬೇಕು. ಭ್ರಷ್ಟಾಚಾರ ಮುಕ್ತ ಜಿಲ್ಲೆಗೆ ಎಲ್ಲರೂ ಸಂಕಲ್ಪಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ. ಸದಾನಂದ ಸ್ವಾಮಿ ಹೇಳಿದರು.

ಹಾವೇರಿ: ಎಲ್ಲರೂ ತಮ್ಮ ಕೆಲಸವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡಬೇಕು. ಭ್ರಷ್ಟಾಚಾರ ಮುಕ್ತ ಜಿಲ್ಲೆಗೆ ಎಲ್ಲರೂ ಸಂಕಲ್ಪಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ. ಸದಾನಂದ ಸ್ವಾಮಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಜರುಗಿದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಾಲಯಗಳಲ್ಲಿ ಸರ್ಕಾರಿ ನೌಕರರ ಪ್ರಕರಣಗಳು ವಿಚಾರಣೆಗೆ ಬಂದಾಗ ವಿಷಾದವೆನಿಸುತ್ತದೆ. ಶೇ.೪೦ ರಷ್ಟು ಲಂಚದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನಮ್ಮ ಬೇಡಿಕೆಗಳನ್ನು ಕಡಿಮೆಮಾಡಿಕೊಳ್ಳಬೇಕು. ಭ್ರಷ್ಟಚಾರ ಪ್ರಕರಣಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಹೋಗುತ್ತಾರೆ. ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬದ ಮೇಲೆ ಪರಿಣಾಮ ಉಂಟಾಗುತ್ತದೆ, ಇದನ್ನು ಅರಿತುಕೊಂಡು ಕೆಲಸಮಾಡಬೇಕು ಎಂದು ಸಲಹೆ ನೀಡಿದರು.ಭ್ರಷ್ಟಾಚಾರ ತಡೆಗೆ ಅನೇಕ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಬರುವ ಸಂಬಳದಲ್ಲೇ ನೆಮ್ಮದಿ ಜೀವನ ನಡೆಸಬೇಕು. ಕಚೇರಿ ಕೆಲಸದ ಸಮಯದಲ್ಲಿ ಕೆಲಸದ ಫೋನ್ ಕರೆಗಳ ಹೊರತಾಗಿ ಬೇರೆ ಕರೆಗಳಲ್ಲಿ ಹೆಚ್ಚಾಗಿ ಮಾತನಾಡಬಾರದು. ಕೆಲಸದ ಬಗ್ಗೆ ಗಮನ ನೀಡಬೇಕು. ನೀವು ಮಾತನಾಡುವ ಕರೆಗಳು, ಆಡಿಯೋ ರೆಕಾರ್ಡ್ ಆಗಬಹುದು ಹಾಗೂ ಹ್ಯಾಕ್ ಆಗುವ ಮೂಲಕ ಸೈಬರ್ ಕ್ರೈಂಗಳು ನಡೆಯಬಹುದು. ಈ ಹಿನ್ನೆಲೆಯಲ್ಲಿ ಕೆಲಸದ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಭ್ರಷ್ಟಾಚಾರ ಮೊದಲ ಹಂತ ತಡೆದಂತೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕವಾಗಿ ಕೆಲಸಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಭ್ರಷ್ಟಾಚಾರ ಬಹಳ ವರ್ಷಗಳಿಂದ ಇರುವ ಸಮಸ್ಯೆಯಾಗಿದೆ. ಭ್ರಷ್ಟಾಷಾರ ಮೊದಲು ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ ಕಾಣಿಸುತ್ತಿತ್ತು, ಈಗ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಸಹ ಕಾಣಿಸುತ್ತಿದೆ. ಕಚೇರಿಗಳಿಗೆ ಹೆಚ್ಚಾಗಿ ಜನ ಸಾಮಾನ್ಯರು ಬರುತ್ತಾರೆ, ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಕಾಲಮಿತಿಯೊಳಗೆ ಅವರಿಗೆ ಕೆಲಸ ಮಾಡಿಕೊಡಬೇಕು ಎಂದರು.ಲಂಚ, ಸುಲಿಗೆ, ಅಧಿಕಾರ ದುರುಪಯೋಗ, ದುರ್ಬಳಕೆ, ಒತ್ತಡ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರ ತಡೆಗೆ ಸರ್ಕಾರ ಅನೇಕ ಕಾನೂನು ಜಾರಿಗೆ ತಂದರು ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಮೊದಲು ಮನ ಪರಿವರ್ತನೆಯಾಗಬೇಕು, ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕೆಲಸದಲ್ಲಿ ವಿಳಂಬ ಮಾಡಬಾರದು. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಜಿಲ್ಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ನಿಮಗೆ ಹೆದರಿಸಲು ಕರೆಗಳು ಬಂದರೆ ಅಂತಹವರ ವಿರುದ್ಧ ದೂರು ನೀಡಿ ಸಮಸ್ಯೆ ಬಗೆಹರಿಕೊಳ್ಳಬೇಕು ಎಂದು ಹೇಳಿದರು.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ. ಚಂದ್ರಶೇಖರ ಬಿಪಿ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರಿನ ನಂತರ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಭ್ರಷ್ಟಾಚಾರ ತಡೆಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಜೀವನ ಶೈಲಿ ಬದಲಾಗಬೇಕಾಗಿದೆ. ಕರ್ನಾಟಕ ಲೋಕಾಯುಕ್ತ ಹೆಸರು ಹೇಳಿ ಲಂಚ ಕೇಳುವ ದೂರುಗಳು ಕೇಳಿಬಂದಿವೆ. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ದೂರು ನೀಡಬೇಕು. ಲಂಚದ ಬೇಡಿಕೆ ಸಮಯದಲ್ಲಿ ಲೋಕಾಯುಕ್ತ ದೂರು ನೀಡಬಹುದು. ಲೋಕಾಯುಕ್ತ ಕಾರ್ಯ ಚಟುವಟಿಕೆ, ವಿವಿಧ ಕಾಯ್ದೆಗಳಡಿ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರ ಅವರು ಪ್ರತಿಜ್ಞಾವಿಧಿ ಬೋಧಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ಮುತಾಲಿಕದೇಸಾಯಿ, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಹಾಗೂ ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ ಉಪಸ್ಥಿತರಿದ್ದರು.ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ ಪಂಡಿತ ವಂದಿಸಿದರು.

Share this article