ಮುಂಡರಗಿ: 2024-25ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಬೆಳೆ ಸಮೀಕ್ಷೆ ನಡೆಸುವವರು ಪಾರದರ್ಶಕತೆಯಿಂದ ಸಮೀಕ್ಷೆ ನಡೆಸಬೇಕು ಎಂದು ತಹಸೀಲ್ದಾರ್ ಧನಂಜಯ ಮಾಲಗತ್ತಿ ಹೇಳಿದರು.
ಅವರು ಮಂಗಳವಾರ ಮುಂಡರಗಿ ತಹಸೀಲ್ದಾರ ಕಚೇರಿಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೈತರು ಮತ್ತು ಖಾಸಗಿ ನಿವಾಸಿಗಳು ಮಾಡಿದ ಬೆಳೆ ಸಮಿಕ್ಷೆಯನ್ನು ಮೇಲ್ವಿಚಾರಕರು ಪರಿಶೀಲಿಸಿ ಅನುಮೋದಿಸಬೇಕು. ತಪ್ಪಿದಲ್ಲಿ ಮೇಲ್ವಿಚಾರಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.
ಜಿಲ್ಲಾ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ 2024-25ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷ ಆರಂಭವಾಗಿದ್ದು. ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಗೂಗಲ್ ಪ್ಲೇ ಸ್ಟೋರ್ ನಿಂದ ಮುಂಗಾರು ರೈತರ ಬೆಳೆ ಸಮೀಕ್ಷೆ 2024ನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕಾಗಿದೆ. ಹೀಗೆ ಬೆಳೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಮತ್ತು ಬೆಳೆ ಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವುದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆಪ್ ನಲ್ಲಿ ದಾಖಲಿಸಿ ಬೆಳೆ ಸಮೀಕ್ಷೆ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು. ರೈತರು ಬೆಳೆ ವಿವರ ಅಪ್ಲೋಡ್ ಮಾಡದಿದ್ದಲ್ಲಿ ಸರ್ಕಾರ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರ ದಾಖಲಿಸಬೇಕು ಎಂದರು.ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಮುಂಡರಗಿ ತಾಲೂಕಿನ 53 ಗ್ರಾಮಗಳಲ್ಲಿ 61 ಖಾಸಗಿ ಬೆಳೆ ಸಮೀಕ್ಷೆಗಾರರನ್ನು ನೇಮಕ ಮಾಡಿಕೊಂಡಿದ್ದು, ರೈತರು ಬೆಳೆ ವಿವರ ದಾಖಲಿಸಲು ಖಾಸಗಿ ನಿವಾಸಿಗಳ ಸಹಾಯ ಪಡೆದು ತಮ್ಮ ಬೆಳೆ ವಿವರ ದಾಖಲಿಸಬೇಕು. ಖಾಸಗಿ ಬೆಳೆ ಸಮೀಕ್ಷೆದಾರರು ಬೆಳೆ ಸಮೀಕ್ಷೆ ಮಾಡುವಲ್ಲಿ ರೈತರು ಬೆಳೆದ ಬೆಳೆಯನ್ನು ಕಡ್ಡಾಯವಾಗಿ ನಮೋದಿಸಬೇಕು ಹಾಗೂ ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಥವಾ 18004253553 ಗೆ ಸಂಪರ್ಕಿಸಲು ಕೋರಲಾಗಿದೆ. ಸಭೆಯಲ್ಲಿ ಖಾಸಗಿ ಬೆಳೆ ಸಮಿಕ್ಷೆದಾರರು, ಬೆಳೆ ಸಮಿಕ್ಷೆ ಮೇಲ್ವಿಚಾರಕರು ಹಾಗೂ ಬೆಳೆ ಕಟಾವು ಮೂಲ ಕಾರ್ಯಕರ್ತರು ಉಪಸ್ಥಿತರಿದ್ದರು.