ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಈ ಬಗ್ಗೆ ತಿಳಿದು ಮಾತನಾಡಬೇಕಾಗಿತ್ತು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ : ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಈ ಬಗ್ಗೆ ತಿಳಿದು ಮಾತನಾಡಬೇಕಾಗಿತ್ತು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಅಲ್ಲಿ ತಾವಾಡಿದ ಭಾಷಣದಲ್ಲಾಗಲಿ ಅಥವಾ ರಾಜ್ಯಪಾಲರಿಗೆ ಸಲ್ಲಿಸಲಾದ ಸಮಾವೇಶದ ನಿರ್ಣಯಗಳ ಲಿಖಿತ ಪ್ರತಿಯಲ್ಲಾಗಲಿ ಸಂವಿಧಾನ ಬದಲಾಯಿಸುವ ಕುರಿತು ಯಾವುದೇ ಮಾತು ಉಲ್ಲೇಖ ಇಲ್ಲ. ಆದರೂ ಕೆಲವು ಜನರು ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ನಾವಾಡದ ಮಾತಿನ ಬಗ್ಗೆ ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ.
ನಮ್ಮ ವಿರುದ್ಧ ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ, ಅವರು ಪರಿಶೀಲಿಸಿ ಮಾತನಾಡಬೇಕಾಗಿತ್ತು ಎಂದವರು ಬೇಸರ ವ್ಯಕ್ತಪಡಿಸಿದರು.
ನಮ್ಮ ದೇಶದ ಜನಗಣತಿ ಹೇಳುವ ಪ್ರಕಾರ ಇದು ಹಿಂದುಸ್ಥಾನ, ಅದನ್ನು ಭಾರತ, ಇಂಡಿಯಾ ಎಂದೆಲ್ಲ ಹೇಳಿ, ಆದರೆ ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಹಿಂದುಗಳ ಭಾವನೆಗೂ ಬೆಲೆ ಕೊಡುವ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ನಾವು ಹೇಳಿದ್ದು ಹೌದು. ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾವು ಯಾವತ್ತೂ ಹೇಳಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ನಿರಾಧಾರ ಆರೋಪ ಯುಕ್ತವಲ್ಲ, ಸಮಾವೇಶದ ವೀಡಿಯೋ ಅಥವಾ ಲಿಖಿತ ರೂಪದ ನಿರ್ಣಯ ಪತ್ರವನ್ನು ಪರಿಶೀಲಿಸಬಹುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದವರು ಹೇಳಿದರು.
ನಾವು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇವೆ, ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರ ಮಾಡುತ್ತಿದ್ದೇವೆ, ದಲಿತ ಕೇರಿ ಭೇಟಿ ನೀಡಿದ್ದೇವೆ, ಬಡವರಿಗೆ ಮನೆ ಕಟ್ಟಿಸಿ ಕೊಡುತ್ತಿದ್ದೇವೆ, ನಮ್ಮಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ ಎಚ್.ಎಸ್.ಶೆಟ್ಟಿ ಎಂಬವರು 16 ಲಕ್ಷ ರು. ವೆಚ್ಚದಲ್ಲಿ 14 ಮನೆಗಳನ್ನು ಕಟ್ಟಿ ಕೊರಗರಿಗೆ ನೀಡಿದ್ದಾರೆ, ನೂರು ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಅವರು ಹೇಳಿದ್ದಾರೆ ಎಂದು ಶ್ರೀಗಳು ಹೇಳಿದರು.
ಸಂವಿಧಾನದ ವಿರುದ್ಧ ಮಾತನಾಡಿದ್ದರೆ ವಿರೋಧಿಸಿ, ಆದರೆ ನಾವು ಆಡದೇ ಇರುವ ಮಾತಿಗೆ ವಿರೋಧ ಯಾಕೆ? ನಾವು ಕಾನೂನು ಹೋರಾಟ ಮಾಡಬಹುದು, ಆದರೆ ನಮಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ, ದೇವರೇ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು, ನಮ್ಮನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಎಂದು ಟಾರ್ಗೆಟ್ ಮಾಡುತ್ತಿರುವವರೇ ಹೇಳಬೇಕು. ನಮ್ಮನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಅಂದುಕೊಂಡಿರಬಹುದು, ಆದರೆ ಹಿಂದೂ ಸಮಾಜಕ್ಕೆ ಹಲವು ಮುಖಗಳಿವೆ. ಈ ರೀತಿ ಹಿಂದೂ ಸಮಾಜವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದೂ ದೇಗುಲಗಳಿಗೆ ತೆರಿಗೆ?
ಸರ್ಕಾರ 10 ಲಕ್ಷ ರು. ಅನುದಾನ ಇರುವ ದೇವಾಲಯಗಳಿಗೆ ಶೇ.5 ತೆರಿಗೆ, 1 ಕೋಟಿ ರು. ಆದಾಯ ಇರುವ ದೇಗುಲಗಳಿಗೆ ಶೇ.10 ತೆರಿಗೆ ವಿಧಿಸಬೇಕು ಎಂಬ ಪ್ರಸ್ತಾವನೆಯನ್ನು ಸಹಿಗಾಗಿ ರಾಜ್ಯಪಾಲರಿಗೆ ಕಳುಹಿಸಿತ್ತು. ಅದನ್ನು ವಾಪಸ್ ಕಳುಹಿಸಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇತರ ಮತೀಯರ ಶ್ರದ್ಧಾ ಕೇಂದ್ರಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ, ಆದರೆ ಹಿಂದುಗಳ ಶ್ರದ್ಧಾ ಕೇಂದ್ರವನ್ನು ಮುಷ್ಟಿಯಲ್ಲಿ ಇರಿಸುವ ಪ್ರಯತ್ನ ನಡೆಯುತ್ತಿದೆ.
ಜೀರ್ಣ ಸ್ಥಿತಿಯಲ್ಲಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಹುಂಡಿಯ ಹಣ ಬಳಸಲು ಸಾಧ್ಯವಾಗುತ್ತಿಲ್ಲ, ಅರ್ಚಕರಿಗೆ ಸರಿಯಾದ ವೇತನ ನೀಡಲಾಗುತ್ತಿಲ್ಲ. ರಾಜ ಮಹಾರಾಜರ ಕಾಲದಿಂದ ದೇವಸ್ಥಾನಕ್ಕಿದ್ದ ಭೂಮಿಯನ್ನು ಇನ್ನು ಖಾತಾ ಮಾಡಿ ಕೊಟ್ಟಿಲ್ಲ, ದೇವಾಲಯದ ಭೂಮಿ ಸರ್ಕಾರದ ಭೂಮಿ ಎಂದು ಪರಿಗಣಿಸಿ ನಾನಾ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಂತಹ ದ್ವಿಮುಖ ನೀತಿ ಯಾಕೆ ಎಂದು ಶ್ರೀಗಳು ಸರ್ಕಾರವನ್ನು ಪ್ರಶ್ನಿಸಿದರು.
ಬಾಂಗ್ಲಾ ಇಸ್ಕಾನ್‌ಗೆ ಕೃತಜ್ಞರಾಗಿರಬೇಕು
ಬಾಂಗ್ಲಾದಲ್ಲಿ ಇಸ್ಕಾನ್ ನಾಯಕರ ಮತ್ತು ಹಿಂದೂಗಳ ಮೇಲೆ ಕಿರುಕುಳದ ಬಗ್ಗೆ ಪೇಜಾವರ ಶ್ರೀಗಳು ತೀವ್ರ ವಿಷಾದ ವ್ಯಕ್ತಪಡಿಸಿದರು. ಇಸ್ಕಾನ್ ಸಂಸ್ಥೆ ಮುಖ್ಯಸ್ಥರನ್ನು ರಾಜದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ, ಅವರ ಎಲ್ಲ ಸೌಲಭ್ಯಗಳನ್ನು ನಿಷೇಧಿಸಲಾಗಿದೆ. ಇದು ಅತ್ಯಂತ ಕಠೋರವಾದ ವಿಚಾರ, ಅದನ್ನು ಉಗ್ರವಾಗಿ ಖಂಡಿಸುತ್ತೇವೆ. ಬಹುಬೇಗ ಅವರನ್ನು ವಿಮುಕ್ತಗೊಳಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಬಾಂಗ್ಲಾದೇಶಕ್ಕೆ ಇಸ್ಕಾನ್ ಸಲ್ಲಿಸಿರುವ ಕೊಡುಗೆ ಅತ್ಯಪೂರ್ವ, ಹಸಿದವರಿಗೆ ಕಷ್ಟಕಾಲದಲ್ಲಿ ಅನ್ನ ಕೊಟ್ಟ ಸಂಸ್ಥೆ ಇಸ್ಕಾನ್. ಈ ಬಗ್ಗೆ ಬಾಂಗ್ಲಾದೇಶ ಇಸ್ಕಾನ್‌ಗೆ ಕೃತಜ್ಞರಾಗಿರಬೇಕು. ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಮಧ್ಯಪ್ರವೇಶಿಸಿ ಅಲ್ಲಿನ ಹಿಂದುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದರು.