ಎರಡು ನೂರು ಕೆಪಿಎಸ್ ಮಾದರಿ ಶಾಲೆ ಸ್ಥಾಪನೆಗೆ ಚಿಂತನೆ

KannadaprabhaNewsNetwork | Published : Feb 10, 2025 1:45 AM

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ.ಕ.ಪ್ರದೇಶದ 200 ಕಡೆ ಕೆಪಿಎಸ್ ಮಾದರಿಯ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕ.ಕ.ಪ್ರದೇಶದ 200 ಕಡೆ ಕೆಪಿಎಸ್ ಮಾದರಿಯ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.

ಇಲ್ಲಿನ ಮಂಡಳಿ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ರಾಜ್ಯ ಸರ್ಕಾರವು ಮಂಡಳಿಗೆ ₹5,000 ಕೋಟಿ ಅನುದಾನ ಹಂಚಿಕೆ ಮಾಡಿದ್ದು, ಅದರಲ್ಲಿ ಇದೂವರೆಗೆ ₹4,500 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕಿದೆ. ಈ ವರ್ಷ ಸಹ ₹5,000 ಕೋಟಿ ಘೋಷಣೆಗೆ ಇತ್ತೀಚೆಗೆ ಆಯವ್ಯಯಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯರಲ್ಲಿ ವಿನಂತಿ ಮಾಡಿಕೊಂಡಿದ್ದು, ಅಷ್ಟು ಹಣ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸಿಎಸ್‌ಆರ್ ನಿಧಿ ಬಳಸಿಕೊಂಡು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4-5 ಶಾಲೆಗಳನ್ನು ತಲಾ ₹5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಮಾರ್ಚ್ ನಂತರ ನಡೆಯುವ ಮಂಡಳಿ ಸಭೆಯಲ್ಲಿ ಇದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ನಗರವಾಸಿ ಮಕ್ಕಳಂತೆ ಹಳ್ಳಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಮಂಡಳಿಗೆ ನೀಡಲಾಗುವ ಹಣ ಸಂಪೂರ್ಣವಾಗಿ ಖರ್ಚು ಮಾಡಲು ಪ್ರತ್ಯೇಕ 229 ಎಂಜಿನಿಯರ್ ಒಳಗೊಂಡ ಎಂಜಿನಿಯರಿಂಗ್ ವಿಂಗ್ ಸ್ಥಾಪನೆ ಕುರಿತು ಸಿಎಂ ಜೊತೆ ಚರ್ಚಿಸಲಾಗಿದೆ. ಇದಲ್ಲದೆ ಮಂಡಳಿಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗುವುದು ಎಂದರು.ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ಆರ್ಥಿಕ ತಜ್ಞ ಪ್ರೊ.ಗೋವಿಂದರಾವ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದರಿಂದ, ಅವರೊಂದಿಗೂ ಪ್ರದೇಶದ ಅಭಿವೃದ್ಧಿ ಕುರಿತಂತೆ ಸಮಾಲೋಚನೆ ಮಾಡಲಾಗಿದೆ.

ಕಳೆದ ಸೆ.17 ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಳಿಯ ₹857 ಕೋಟಿ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ ಪರಿಣಾಮ ಇಂದು ₹439 ಕೋಟಿ ವೆಚ್ಚದ ಪ್ರಾಥಮಿಕ, ಸಮುದಾಯ, ನಗರ ಆರೋಗ್ಯ ಉಪ ಕೇಂದ್ರ ನಿರ್ಮಾಣ, ದುರಸ್ತಿ, ಆ್ಯಂಬ್ಯುಲೆನ್ಸ್ ಸೇವೆ ಒದಗಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

50-50 ಅನುಪಾತ ಅನುದಾನದಡಿ ಅಲ್ಪಸಂಖ್ಯಾತ ಇಲಾಖೆ ಸಹಯೋಗದಡಿ 48 ಮೌಲಾನಾ ಅಜಾದ್, ಮೋರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆ, 34 ಬಿಸಿಎಂ ಹಾಸ್ಟೆಲ್ ಸ್ಥಾಪನೆ, ₹186 ಕೋಟಿ ಎಸ್ಸಿ,ಎಸ್ಟಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಕಲ್ಯಾಣ ಪಥ ಯೋಜನೆಯಡಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ₹330 ಕೋಟಿ ಮಂಡಳಿ ನೀಡಿದ್ದು, ಶೀಘ್ರವೇ ಸಿಎಂ ಚಾಲನೆ ನೀಡಲಿದ್ದಾರೆ. ಕಂದಾಯ ಇಲಾಖೆ ಕೆಕೆಆರ್‌ಡಿಬಿ ಸಹಭಾಗಿತ್ವದಲ್ಲಿ ಪ್ರದೇಶದ 16 ತಾಲೂಕಿನಲ್ಲಿ ತಲಾ ₹8.60 ಕೋಟಿ ಮಿನಿ ವಿಧಾನ ನಿರ್ಮಾಣಕ್ಕೂ ಟೆಂಡರ್ ಕರೆಯಲಾಗಿದೆ ಎಂದರು. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಇದ್ದರು.ಶಿಕ್ಷಣ ತಜ್ಞರ ಸಮಿತಿ ರಚನೆ: ಕ.ಕ ಭಾಗದಲ್ಲಿ ಸಮಗ್ರ ಶಿಕ್ಷಣ ಅಭಿವೃದ್ಧಿಗೆ ಡಾ.ಛಾಯಾ ದೇಗಾಂವಕರ್ ನೇತೃತ್ವದಲ್ಲಿ 8 ಜನರ ಶಿಕ್ಷಣ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ. ಬೀದರಿನ ಡಾ.ಅಬ್ದುಲ್ ಖದೀರ್ ಮತ್ತು ಮಲ್ಲಿಕಾರ್ಜುನ ಎಂ.ಎಸ್., ಬಳ್ಳಾರಿಯ ಫ್ರಾಂಸಿಸ್ ಬಾಷ್ಯಮ್, ಕಲಬುರಗಿಯ ರುದ್ರೇಶ್ ಎಸ್., ಎನ್‌.ಬಿ.ಪಾಟೀಲ, ಯಶವಂತ ಹರಸೂರ ಹಾಗೂ ಡಾ.ನಾಗಾಬಾಯಿ ಬುಳ್ಳಾ ಸಮಿತಿಯಲ್ಲಿದ್ದು, 2 ವರ್ಷದಲ್ಲಿ ವರದಿ ನೀಡಲು ನೂತನ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ತ್ವರಿತ ಬದಲಾವಣೆಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಕೋರ್ಸ್‌ಗಳನ್ನು ಪರಿಚಯಿಸುವಂತೆ ತಿಳಿಸಲಾಗಿದೆ ಎಂದು ಅಜಯ್‌ಸಿಂಗ್‌ ಹೇಳಿದರು.ಅಕ್ಷರ ಆವಿಷ್ಕಾರ ಮುಂದುವರಿಕೆ: ಮಂಡಳಿಯಿಂದ 2023-24 ಮತ್ತು 2024-25ನೇ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ 6,538 ಶಾಲೆಗಳಿಗೆ ದುರಸ್ತಿ ಭಾಗ್ಯ ಒಲಿದಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಕ.ಕ. ಭಾಗದಲ್ಲಿ 1,008 ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿ ಆರಂಭಿಸಲಾಗಿದೆ. ಹೀಗಾಗಿ ಮುಂದಿನ 2025-26 ವರ್ಷದಲ್ಲಿಯೂ ಸಹ ಅಕ್ಷರ ಆವಿಷ್ಕಾರ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.

Share this article