ಹಾನಗಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಲ್ಲವೂ ಇದೆ, ಆದರೆ ಉಪನ್ಯಾಸಕರೇ ಇಲ್ಲ!

KannadaprabhaNewsNetwork |  
Published : Sep 28, 2024, 01:34 AM ISTUpdated : Sep 28, 2024, 09:11 AM IST
ಫೋಟೋ : ೨೬ಎಚ್‌ಎನ್‌ಎಲ್೬, ೬ಎ | Kannada Prabha

ಸಾರಾಂಶ

ಅತಿಥಿ ಉಪನ್ಯಾಸಕರಿಲ್ಲದೆ ಕಾಲೇಜು ನಡೆಸಲು ಸಾಧ್ಯವಿಲ್ಲ ಎಂಬ ಸತ್ಯಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಕ್ಷಿಯಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಅವಶ್ಯವಿರುವ ಎಲ್ಲ ಪರಿಕರವೂ ಇಲ್ಲಿದೆ. ಆದರೆ ಪಾಠ ಮಾಡುವವರೇ ಇಲ್ಲ ಎಂಬ ಕೊರಗು ಹಾಗೆಯೇ ಇದೆ.

ಮಾರುತಿ ಶಿಡ್ಲಾಪೂರ

  ಹಾನಗಲ್ಲ : ಅತಿಥಿ ಉಪನ್ಯಾಸಕರಿಲ್ಲದೆ ಕಾಲೇಜು ನಡೆಸಲು ಸಾಧ್ಯವಿಲ್ಲ ಎಂಬ ಸತ್ಯಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಕ್ಷಿಯಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಅವಶ್ಯವಿರುವ ಎಲ್ಲ ಪರಿಕರವೂ ಇಲ್ಲಿದೆ. ಆದರೆ ಪಾಠ ಮಾಡುವವರೇ ಇಲ್ಲ ಎಂಬ ಕೊರಗು ಹಾಗೆಯೇ ಇದೆ.

ಹಾನಗಲ್ಲ ಹೊರವಲಯದ ಮಲ್ಲಿಗಾರದ ಬಳಿ ಅತ್ಯಂತ ಸುಂದರ ಪರಿಸರದಲ್ಲಿ ಎಲ್ಲ ಸಕಲ ವ್ಯವಸ್ಥೆ ಹೊಂದಿದ ಈ ಕಾಲೇಜು ಆರಂಭವಾಗಿ ತಿಂಗಳೇ ಕಳೆದಿದ್ದರೂ ಇರುವ ಪ್ರಾಚಾರ್ಯರು, ನಾಲ್ವರು ಉಪನ್ಯಾಸಕರೇ ಕೈಲಾದಷ್ಟು ಪಾಠ ಮಾಡುತ್ತಿದ್ದಾರೆ.

ಇಲ್ಲಿ ವಸತಿ ನಿಲಯ ಸೌಲಭ್ಯ, ಅತ್ಯುತ್ತಮ ಆಟದ ಮೈದಾನ, ಎಕ್ಸಲಂಟ್ ಎನ್ನುವಂತಹ ಪ್ರಯೋಗಾಲಯ, ಗ್ರಂಥಾಲಯ, ಜಿಮ್, ಆಡಿಟೋರಿಯಂ, ೧೬ ವರ್ಗ ಕೋಣೆಗಳಿಗೆ ಪ್ರೊಜೆಕ್ಟರ್ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳಿವೆ. ಆದರೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ ಈ ಕಾಲೇಜಿಗೆ ತಿಂಗಳುಗಳು ಕಳೆದರೂ ಉಪನ್ಯಾಸಕರನ್ನು ನೀಡಿಲ್ಲ.

ವಿದ್ಯಾರ್ಥಿಗಳ ಸಾಹಸ: ಇಲ್ಲಿಗೆ ಆಗಮಿಸುವ ಮಕ್ಕಳಿಗೆ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಹುಬ್ಬಳ್ಳಿ, ಬಂಕಾಪುರ, ಶಿಗ್ಗಾಂವಿಗೆ ಹೋಗುವ ಬಸ್ಸುಗಳನ್ನೆ ಅವಲಂಬಿಸಿದ್ದು, ಅವುಗಳು ಕೂಡ ತುಂಬಿ ಓಡಾಡುತ್ತಿರುವುದರಿಂದ ವಿದ್ಯಾರ್ಥಿಗಳು ಬಸ್ ಮೂಲಕ ಕಾಲೇಜಿಗೆ ಹೋಗಲು ಸರ್ಕಸ್‌ ಮಾಡಬೇಕಾಗುತ್ತದೆ. ಬಸ್ ನಿಲ್ದಾಣದಿಂದ ಎರಡೂವರೆ ಕಿಮೀ ದೂರ ಇರುವ ಈ ಕಾಲೇಜಿಗೆ ವಿದ್ಯಾರ್ಥಿಗಳು ತಲುಪುವುದೇ ಒಂದು ಹರಸಾಹಸ. 

ಇದರೊಂದಿಗೆ ಉಪನ್ಯಾಸಕರು ಇಲ್ಲದಿರುವುದು. ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳದಿರುವುದು ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಆಸಕ್ತಿ ಕುಗ್ಗಿಸುತ್ತಿದೆ.ಕಳೆದ ವರ್ಷ ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ೪೦ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಇದ್ದರು. ಪ್ರಸ್ತುತ ವರ್ಷ ಪ್ರಥಮ ವರ್ಷದ ವಾಣಿಜ್ಯ ವಿಭಾಗಕ್ಕೆ 37 , ಕಲಾ ವಿಭಾಗಕ್ಕೆ 36, ವಿಜ್ಞಾನ ವಿಭಾಗಕ್ಕೆ 50 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ ಕ್ರಮವಾಗಿ ವಾಣಿಜ್ಯ, ಕಲಾ, ವಿಜ್ಞಾನ ವಿಭಾಗಕ್ಕೆ 76, 112 , 38ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 

ಈಗ ಇಲ್ಲಿ ಓದುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 475 ಕ್ಕೂ ಅಧಿಕ ಇದೆ.ಕೇವಲ 4 ಉಪನ್ಯಾಸಕರು ಮಾತ್ರ ಇಲ್ಲಿರುವುರಿಂದ ಕಲಾ, ವಾಣಿಜ್ಯ ವಿಜ್ಞಾನ ವಿಭಾಗ ಹಾಗೂ ಸ್ನಾತಕೋತ್ತರ ವಿಭಾಗವನ್ನು ಮುನ್ನಡೆಸಲು ಕಷ್ಟವಾಗಿದೆ. ಇರುವ ಉಪನ್ಯಾಸಕರು ಹಾಗೂ ನಾನೂ ಕೂಡ ಸಾಧ್ಯವಾದಷ್ಟು ಪಾಠ ಮಾಡುತ್ತಿದ್ದೇವೆ ಎಂದು ಪ್ರಾಚಾರ್ಯ ಡಾ. ಸಿ.ಎಸ್‌. ಕುಮ್ಮೂರ ಹೇಳಿದರು.

ಉತ್ತಮ ವಿದ್ಯಾಭ್ಯಾಸದ ನಿರೀಕ್ಷೆ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದೇವೆ. ಬಸ್ ವ್ಯವಸ್ಥೆ ಇಲ್ಲ. ಉಪನ್ಯಾಸಕರೂ ಇಲ್ಲ. ಆಗಲೇ ತಿಂಗಳುಗಳು ಕಳೆದಿವೆ. ಸೆಮಿಸ್ಟಾರ್ ಪರೀಕ್ಷೆಗಳು ಸಮೀಪಿಸುತ್ತಿವೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?