ಇದು ಒಂದು ಮಗುವಿನ ಶಾಲೆಯ ಕಥೆ - ವ್ಯಥೆ ! ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುತ್ತಿರುವ ಸರ್ಕಾರಿ ಶಾಲೆ

KannadaprabhaNewsNetwork | Updated : Mar 20 2025, 10:05 AM IST

ಸಾರಾಂಶ

ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ಶಿರಾ ತಾಲೂಕಿನ ಮದ್ದೇವಳ್ಳಿ ಗ್ರಾಮದಲ್ಲಿ ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುತ್ತಿರುವ ಸರ್ಕಾರಿ ಶಾಲೆ ತಾಜಾ ಉದಾಹರಣೆಯಾಗಿದೆ.

 ಶಿರಾ : ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ಶಿರಾ ತಾಲೂಕಿನ ಮದ್ದೇವಳ್ಳಿ ಗ್ರಾಮದಲ್ಲಿ ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುತ್ತಿರುವ ಸರ್ಕಾರಿ ಶಾಲೆ ತಾಜಾ ಉದಾಹರಣೆಯಾಗಿದೆ. 

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜೊತೆಗೆ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕ ಉಚಿತವಾಗಿ ನೀಡಿದರೂ ಸಹ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ. ಶಿರಾ ತಾಲೂಕಿನ ಮದ್ದೇವಳ್ಳಿ ಗ್ರಾಮದಲ್ಲಿ ಕೇವಲ ಓರ್ವ ವಿದ್ಯಾರ್ಥಿನಿಗಾಗಿ ಶಾಲೆ ನಡೆಸಲಾಗುತ್ತಿದೆ ಎಂದರೆ ನಂಬುವುದು ಸಹ ಕಷ್ಟ. 

ಮದ್ದೇವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತವಾದ ಕಟ್ಟಡ, ಬಿಸಿಯೂಟ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಇದ್ದರೂ ಸಹ ಇಲ್ಲಿ ವಿದ್ಯಾರ್ಥಿಗಳೇ ಇಲ್ಲ. ಒಂದನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿನಿ ದಾಖಲಾಗಿದ್ದು, ೨ ರಿಂದ ೫ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಗಳು ಶಾಲೆಯಲ್ಲಿ ಇಲ್ಲ. ಒಟ್ಟಾರೆ ಈ ಶಾಲೆ ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುವಂತಾಗಿದೆ.ಒಬ್ಬ ವಿದ್ಯಾರ್ಥಿನಿಗೆ ಪಾಠ ಹೇಳಲು ಒಬ್ಬ ಶಿಕ್ಷಕಿ, ಬಿಸಿಯೂಟ ತಯಾರಕರು ಇಲ್ಲಿದ್ದಾರೆ.

 ಕಳೆದ ಮೂರು ವರ್ಷಗಳಲ್ಲಿ ಈ ಶಾಲೆಗೆ ಯಾವುದೇ ವಿದ್ಯಾರ್ಥಿಗಳು ದಾಖಲಾಗದಿರುವುದು ಇಲ್ಲಿನ ಜನರಿಗೆ ಹಾಗೂ ಇಲಾಖೆಗೆ ಸರ್ಕಾರಿ ಶಾಲೆಗಳ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಗ್ರಾಮದ ೮-೧೦ ಮಕ್ಕಳು ದೂರದ ಗ್ರಾಮಗಳಲ್ಲಿರುವ ಖಾಸಗಿ ಶಾಲೆಗಳಿಗೆ ಪ್ರತಿನಿತ್ಯ ಹೋಗಿ ಬರುತ್ತಿದ್ದಾರೆ. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಗೆ ಬಿಸಿಯೂಟ ತಯಾರಕಿ ತನ್ನ ಮಗಳನ್ನು ದಾಖಲು ಮಾಡಿದ ಕಾರಣ ಶಾಲೆ ಮುಚ್ಚುವುದು ತಪ್ಪಿದೆ. ಆದರೆ ಶಾಲೆಯಲ್ಲಿ ತನ್ನ ಗೆಳೆಯರ ಜೊತೆಯಲ್ಲಿ ಆಟವಾಡುತ್ತ ಪಾಠ ಕಲಿಯಬೇಕಿದ್ದ ಬಾಲಕಿ ಇಂದು ಇಲ್ಲಿ ಒಂಟಿಯಾಗಿ ಪಾಠ ಕಲಿಯಬೇಕಿದೆ. 

ಶಾಲೆಯಲ್ಲಿ ಶಿಕ್ಷಕಿ ಮತ್ತು ವಿದ್ಯಾರ್ಥಿ ಬಿಟ್ಟರೆ ಯಾರು ಇಲ್ಲ. ಇದು ವಿದ್ಯಾರ್ಥಿಯ ಶೈಕ್ಷಣಿಕ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ವಿದ್ಯಾರ್ಥಿಯ ಭವಿಷ್ಯ ರೂಪಿಸಲು ಒಬ್ಬ ಶಿಕ್ಷಕಿಯನ್ನು ನೇಮಿಸಿದ್ದರೂ ಸಹ ಬಾಲಕಿಯ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಚಿತ ಅಂತಾರೆ ಶಿಕ್ಷಣ ತಜ್ಞರು. ವಿದ್ಯಾರ್ಥಿಯನ್ನು ಪಕ್ಕದ ಶಾಲೆಗೆ ಸೇರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಗಿದೆ. ನಾವು ಬಡತನದಲ್ಲಿ ಜೀವನ ಸಾಗಿಸುತ್ತಿದ್ದು ನನ್ನ ಮಗಳನ್ನು ಬೇರೆಡೆ ಸೇರಿಸಲು ಸಾಧ್ಯವಿಲ್ಲ ಎಂದು ಪೋಷಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಶಾಲೆ ನಡೆಸಲಾಗುತ್ತಿದೆ. 

ತಾಲೂಕಿನ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗುತ್ತಿದೆ, ಆದರೆ ಇಲ್ಲಿ ಮಕ್ಕಳಿಲ್ಲದೆ ಶಿಕ್ಷಕಿಗೆ ಕೆಲಸವೇ ಇಲ್ಲದಂತಾಗಿದೆ. ಒಂದು ರೀತಿಯಲ್ಲಿ ಶಿಕ್ಷಕಿಯ ಸೇವೆಯನ್ನು ಬಳಸಿಕೊಳ್ಳಲು ಶಿಕ್ಷಣ ಇಲಾಖೆ ವಿಫಲವಾಗಿದೆ. 2025 - 26   ನೇ ಸಾಲಿನಲ್ಲಿ ಸಹ ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಶಾಲೆಯಲ್ಲಿರುವ ವಿದ್ಯಾರ್ಥಿಯ ಬದುಕಿಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಮಕ್ಕಳ ಶೈಕ್ಷಣಿಕ ಬದುಕಿಗೆ ಅನುಕೂಲ ಮಾಡಿಕೊಡಬಹುದಾಗಿದೆ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.

ಸರ್ಕಾರ ಕಡ್ಡಾಯ ಶಿಕ್ಷಣದ ಹಕ್ಕು ಜಾರಿ ಮಾಡಿರುವುದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಒಬ್ಬ ವಿದ್ಯಾರ್ಥಿ ಇದ್ದರೂ ಸಹ ಶಾಲೆ ನಡೆಸಬೇಕಾಗಿದೆ. ಪೋಷಕರನ್ನು ಮನವೊಲಿಸಿ ಪಕ್ಕದ ಶಾಲೆಗೆ ದಾಖಲು ಮಾಡುವಂತೆ ಪ್ರಯತ್ನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

 ಸಿ.ಎನ್.ಕೃಷ್ಣಪ್ಪ, ಕ್ಷೇತ್ರಶಿಕ್ಷಣಾಧಿಕಾರಿ, ಶಿರಾ.

 ಶಾಲೆಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದೇನೆ. ಮನೆಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಂತೆ ಪೋಷಕರಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇರುವ ಒಬ್ಬ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಪದ್ಮಕ್ಕ, ಶಿಕ್ಷಕಿ, ಸ.ಕಿ.ಪ್ರಾಥಮಿಕ ಶಾಲೆ, ಮದ್ದೇವಳ್ಳಿ.

Share this article