ಕನ್ನಡಪ್ರಭ ವಾರ್ತೆ ಮೈಸೂರುಜಗತ್ತನ್ನು ಕಾಡುತ್ತಿರುವ ಮಹಾಯುದ್ಧಗಳು, ಸಾವು ನೋವುಗಳು, ಜಾತಿ ಜಾತಿಗಳ ನಡುವಿನ ಸಂಘರ್ಷಗಳು, ಇಂತಹ ಸಂದರ್ಭದಲ್ಲಿ ಶಾಂತಿ ಮಂತ್ರ ಪಠಿಸಿದ ಗಾಂಧಿಯ ಅಗತ್ಯತೆಯನ್ನು ಒತ್ತಿ ಹೇಳುವ ಕಾವ್ಯಗಳು ದಸರಾ ಪ್ರಧಾನ ಕವಿಗೋಷ್ಠಿ ಎನಿಸಿಕೊಂಡ ಸಮೃದ್ಧ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟವು.ನಗರದ ಜಗನ್ಮೋಹನ ಅರಮನೆಯಲ್ಲಿ ದಸರಾ ಕವಿಗೋಷ್ಠಿಯ ಭಾಗವಾಗಿ ನಡೆಯುವ ಪ್ರಧಾನ ಕವಿಗೋಷ್ಠಿಯಲ್ಲಿ ಸಮೃದ್ಧ ಹೆಸರಿನಲ್ಲಿ ಆಯೋಜಿಸಲಾಗಿತ್ತು.ಈ ವೇಳೆ ಕವನ ವಾಚಿಸಿದ ನವಿರುದ್ದೀನ್ ದೇಮಗಾರ, ಕವಿತೆಯು ಜಗತ್ತೇ ಯುದ್ಧೋನ್ಮಾದದಲ್ಲಿರುವಾಗ ಗಾಂಧಿಯ ಪ್ರಸ್ತುತತೆ ಅವಶ್ಯಕತೆ ಇದೆ ಎಂದರೆ, ಮಲ್ಲಿಕಾರ್ಜುನ ಆಮ್ಣೆ ಅವರು ಯುದ್ಧವನ್ನು ಸಾಧಿಸಬಾರದು ಎಂಬ ತಮ್ಮ ಕವನದಲ್ಲಿ ಯುದ್ಧದಿಂದಾಗುವ ಪ್ರಾಣ ಹಾನಿಯ ಸಂಕಟವನ್ನು ಹೇಳುತ್ತ, ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿತವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಡಾ.ಕೆ.ಪಿ. ಮಹದೇವಯ್ಯ ಅವರು ಜಾತಿ ವಿನಾಶಕ್ಕೆ ಆಹ್ವಾನ ಎಂಬ ತಮ್ಮ ಕವಿತೆಯಲ್ಲಿ ಜಾತಿ ಎಂಬುದು ದೊಡ್ಡ ಪಿಡುಗು. ಸಮಾಜದಲ್ಲಿ ಜಾತಿ ನೋಡಿ ಅಸ್ಪೃಶ್ಯತೆ ಆಚರಿಸುವುದು ನಿಲ್ಲಬೇಕು. ಜಾತಿ ವಿನಾಶವಾದರೆ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.ಡಾ. ಮಂಜುಳಾ ಹುಲ್ಲಹಳ್ಳಿ ಮೂಡಿಗೆರೆ ಪ್ರಾಕೃತಿಕ ಸೌಂದರ್ಯಕ್ಕೆ ತೇಜಸ್ವಿ ಅಕ್ಷರ ರೂಪ ಕೊಟ್ಟಿದ್ದನ್ನು ನದಿಮ ಸನದಿ ಕವಿತೆಯ ಮೂಲಕ ಕಟ್ಟಿಕೊಟ್ಟರು. ಮಹಿಳೆಯರು ಎಲ್ಲಾ ರಂಗದಲ್ಲಿಯೂ ಮುಂದುವರಿಯುತ್ತಿರುವ ಕುರಿತು ಕವನ ವಾಚಿಸಿದ ಕೋಲಾರದ ಡಾ. ಗುಣವಂತ ಮಂಜು ಅವರು ಭಾರತ ಮಹಿಳಾ ಸೇನಾಪಡೆ ಎಂಬ ಕವನ ವಾಚಿಸಿದರು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಅದಕ್ಕೆ ಸೇನೆ ಕೂಡ ಹೊರತಾಗಿಲ್ಲ ಎಂಬುದನ್ನು ಸಾರಿ ಹೇಳಿದರು.ಬಾಗಲಕೋಟೆಯ ಉಮಾದೇವಿ ಅವರು ನಿರುತ್ತರ ಕವನವು ಅವ್ವನ ತ್ಯಾಗ ಮತ್ತು ವಾತ್ಸಲ್ಯವನ್ನು ಅನಾವರಣಗೊಳಿಸಿತು. ಮಂಡ್ಯದ ರಾಜೇಂದ್ರ ಪ್ರಸಾದ್ ಶಿವೆಯ ಸಟ್ಟುಗ ಕವಿತೆಯು ವಿಶೇಷವಾಗಿತ್ತು. ದ್ವಾರನಕುಂಟೆ ಪಾತಣ್ಣ ಅವರು ‘ಸಂತನಾದವ’ ಎಂಬ ಕವಿತೆ ವಾಚಿಸಿದರು. ಟಿವಿಗಳಲ್ಲಿ ಹಾಕಿದ ಸುದ್ದಿಯನ್ನೇ ಹಾಕಲಾಗುತ್ತಿದೆ. ಟಿಆರ್ಪಿಗಾಗಿ ಸುದ್ದಿ ಮಾಡಲಾಗುತ್ತಿದೆ. ಸಮಾಜಮುಖಿ ಸುದ್ದಿ ಕಣ್ಮರೆ ಆಗುತ್ತಿವೆ ಎಂಬುದನ್ನು ಸೂಚ್ಯವಾಗಿ ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 29 ಕವಿಗಳು ತಮ್ಮ ಕವಿತೆ ವಾಚಿಸಿದರು.