ಮತಗಟ್ಟೆ ಸಿಬ್ಬಂದಿಗೆ ಈ ಬಾರಿ ವಿಶೇಷ ಕಿಟ್

KannadaprabhaNewsNetwork | Published : Apr 5, 2024 1:06 AM

ಸಾರಾಂಶ

ಕಿಟ್‌ನಲ್ಲಿ ಟೂತ್ ಪೇಸ್ಟ್, ಹಲ್ಲುಜ್ಜುವ ಬ್ರಷ್, ಸ್ನಾನ ಮಾಡಲು ಸೋಪು, ಬಾಚಣಿಕೆ ಮುಂತಾದ ಅತ್ಯಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಮತದಾನದ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ.

ಕಾರವಾರ: ಲೋಕಸಭಾ ಚುನಾವಣೆಯಂದು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿ ತಮ್ಮ ಮನೆ ತೊರೆದು ಶಾಲೆಗಳಲ್ಲಿರುವ ಮತಗಟ್ಟೆಗಳಲ್ಲಿ ತಂಗುವ ಸಮಯದಲ್ಲಿ ದೈನಂದಿನ ಬಳಕೆಗೆ ಬಳಸುವ ಅಗತ್ಯ ವಸ್ತುಗಳ ಯಾವುದೇ ಕೊರೆತೆಯಾಗದಂತೆ ಇದೇ ಮೊದಲ ಬಾರಿಗೆ ವಿಶೇಷ ಕಿಟ್‌ನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ.

ಮತದಾನದ ದಿನಕ್ಕೂ ಒಂದು ದಿನ ಮೊದಲು ಚುನಾವಣೆಗೆ ಸಂಬಂಧಿಸಿದ ಎಲ್ಲ ಪರಿಕರಗಳೊಂದಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ, ಮರುದಿನ ಬೆಳಗ್ಗೆ ತಮ್ಮ ದೈನಂದಿನ ಸಿದ್ಧತೆಗಳಿಗೆ ತೊಂದರೆಯಾಗದಂತೆ ಕಿಟ್‌ ನೀಡಲಾಗುತ್ತದೆ. ಕಿಟ್‌ನಲ್ಲಿ ಟೂತ್ ಪೇಸ್ಟ್, ಹಲ್ಲುಜ್ಜುವ ಬ್ರಷ್, ಸ್ನಾನ ಮಾಡಲು ಸೋಪು, ಬಾಚಣಿಕೆ ಮುಂತಾದ ಅತ್ಯಗತ್ಯ ವಸ್ತುಗಳ ಕಿಟ್‌ಗಳನ್ನು ಒದಗಿಸುವ ಮೂಲಕ ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಮತದಾನದ ಕರ್ತವ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ.

ಕಿಟ್ ಮಾತ್ರವಲ್ಲದೇ ಸಿಬ್ಬಂದಿ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವ ಜಿಲ್ಲಾಡಳಿತ ಮತಗಟ್ಟೆಗಳಿಗೆ ತೆರಳುವ ಎಲ್ಲಾ ಸಿಬ್ಬಂದಿಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಒದಗಿಸುತ್ತಿದ್ದು, ಸಿಬ್ಬಂದಿಗಾಗಿಯೇ 30 ಲೀ. ಶುದ್ಧ ನೀರಿನ ಕ್ಯಾನ್ ಗಳನ್ನು ಪ್ರತಿಯೊಂದು ಮತಗಟ್ಟೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದೆ.

ಮತಗಟ್ಟೆಯಲ್ಲಿ ತಂಗುವ ಸಿಬ್ಬಂದಿಗೆ ಯಾವುದೇ ಕೊರತೆಯಾಗದಂತೆ ಶಾಲೆಯಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಮತ್ತು ಸಮರ್ಪಕ ನೀರಿನ ಸೌಲಭ್ಯ ಇರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಶುಚಿ- ರುಚಿ ಅಡುಗೆ: ಸಿಬ್ಬಂದಿಗೆ ಕಾಲ ಕಾಲಕ್ಕೆ ಶುದ್ಧ ಮತ್ತು ರುಚಿಕರ ಆಹಾರ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಶಾಲೆಗಳಲ್ಲಿನ ಬಿಸಿಯೂಟ ತಯಾರಕರ ಮೂಲಕ ಆಹಾರ ಸಿದ್ಧಪಡಿಸಿ, ಸರಬರಾಜು ಮಾಡಲು ವ್ಯವಸ್ಥೆಗಳನ್ನು ಕೈಗೊಂಡಿದೆ. ಸಿಬ್ಬಂದಿಗೆ ವೈವಿಧ್ಯಮಯವಾದ ರುಚಿಕರ ಊಟ ಮತ್ತು ಉಪಹಾರ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವಿಶೇಷ ಮುತುವರ್ಜಿ ವಹಿಸಿದ್ದು, ಎಲ್ಲ ಸಿಬ್ಬಂದಿ ಮೆಚ್ಚುವಂತೆ ತಾವೇ ಪ್ರತ್ಯೇಕ ಮೆನು ನೀಡುವುದಾಗಿ ತಿಳಿಸಿದ್ದಾರೆ. ಆಹಾರ ತಯಾರಿಕೆಯ ಬೇಕಾದ ಗುಣಮಟ್ಟದ ಪದಾರ್ಥಗಳನ್ನು ಹೊರಗಿನಿಂದಲೇ ಖರೀದಿಸಿ ನೀಡಲಾಗುತ್ತಿದ್ದು, ಇದಕ್ಕಾಗಿ ಬಿಸಿಯೂಟ ಯೋಜನೆಯ ಪದಾರ್ಥಗಳನ್ನು ಬಳಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಸಿಬ್ಬಂದಿಗೆ ಮೊದಲ ದಿನ ಮಧ್ಯಾಹ್ನ ಮತ್ತು ರಾತ್ರಿಯ ಭೋಜನ, ಮರುದಿನ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.ಮಹಿಳಾ ಸಿಬ್ಬಂದಿಗೆ ಭದ್ರತೆ

ಮಹಿಳಾ ಮತಗಟ್ಟೆ ಅಧಿಕಾರಿಗಳು ಹೆಚ್ಚಿರುವ ಕಡೆಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಲು ಯೋಜನೆ ರೂಪಿಸಿದೆ. ಮಹಿಳಾ ಸಿಬ್ಬಂದಿ ಅತ್ಯಂತ ಅನಿವಾರ್ಯ ಕಾರಣಗಳಿಂದ ಮತಗಟ್ಟೆಗಳಲ್ಲಿ ತಂಗಲು ಸಾಧ್ಯವಾಗದೆ ಇದ್ದಲ್ಲಿ, ಮರುದಿನ ಬೆಳಗ್ಗೆ ಅಣಕು ಮತದಾನ ನಡೆಯುವುದಕ್ಕಿಂತ ಮುಂಚೆ ಮತಗಟ್ಟೆಯಲ್ಲಿನ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಷರತ್ತಿಗೆ ಒಳಪಟ್ಟು ವಿಶೇಷ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.ಸಂತಸದಿಂದ ಭಾಗವಹಿಸಬೇಕೆಂಬ ಉದ್ದೇಶ: ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಸಂತಸದಿಂದ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಅಗತ್ಯ ವಸ್ತುಗಳ ವಿಶೇಷ ಕಿಟ್ ಹಾಗೂ ಶುದ್ಧ ಮತ್ತು ರುಚಿಕರ ಆಹಾರ ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

Share this article