ದಾವಣಗೆರೆಗೆ ಈ ಸಲವಾದ್ರೂ ಸಿಕ್ಕೀತೆ ತುಂಬಿದ ಬಾಗಿನ!

KannadaprabhaNewsNetwork | Published : Feb 15, 2024 1:16 AM

ಸಾರಾಂಶ

ವಿಮಾನ ನಿಲ್ದಾಣ, ಕೃಷಿ ಆದಾರಿತ ಕೈಗಾರಿಕೆ, ಏತ ಯೋಜನೆ, ಉದ್ಯೋಗ ಸೃಷ್ಟಿ ಆಗಬೇಕು. ಸಿದ್ದರಾಮೋತ್ಸವದ ಮೂಲಕ ಶಕ್ತಿ ತುಂಬಿದ ಜಿಲ್ಲೆಗೆ ಸಿಎಂ ಕೈಬಿಚ್ಚಿ ಅನುದಾನ ನೀಡಬೇಕಷ್ಟೇ ಎಂದು ಜನತೆ ಆಶೀಸುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಶಕಗಳ ಕನಸು ವಿಮಾನ ನಿಲ್ದಾಣ, ಮೆಕ್ಕೆಜೋಳ ಸೇರಿ ಕೃಷಿ ಸಂಸ್ಕರಣಾ ಘಟಕ, ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ, ಏತ ನೀರಾವರಿ ಯೋಜನೆಗಳು, ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ, ಸರ್ಕಾರಿ ವೈದ್ಯಕೀಯ, ತೋಟಗಾರಿಕೆ-ಕೃಷಿ ಕಾಲೇಜು, ಪ್ರಮುಖ ಐತಿಹಾಸಿಕ, ಪ್ರವಾಸಿ ತಾಣಗಳ ಅಭಿವೃದ್ಧಿ, ದುಡಿಯುವ ಕೈಗೆ ಸ್ಥಳೀಯವಾಗಿ ಉದ್ಯೋಗ, ಪ್ರತಿಭಾ ಪಲಾಯನ ತಡೆಗೆ ಐಟಿ ಪಾರ್ಕ್‌ಗೆ ಶಕ್ತಿ ತುಂಬುವ ಯತ್ನ, ಜಾಗ ಪಡೆಯಲಿಕ್ಕಷ್ಟೇ ಸೀಮಿತವಾಗಿ ಉಳಿದಿರುವ ಜವಳಿ ಪಾರ್ಕ್‌ಗೆ ಕಾಯಕಲ್ಪ, ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು.

ಹೀಗೆ ಹತ್ತು ಹಲವಾರು ನಿರೀಕ್ಷೆಯೊಂದಿಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2024-25ನೇ ಸಾಲಿನ ರಾಜ್ಯ ಮುಂಗಡಪತ್ರದ ಕಡೆಗೆ ದಾವಣಗೆರೆ ಜಿಲ್ಲೆ ಜನತೆ ಚಾತಕ ಪಕ್ಷಿಯಂತೆ ಇದಿರು ನೋಡುತ್ತಿದ್ದಾರೆ. ಶಿಕ್ಷಣ, ವಾಣಿಜ್ಯ, ಕೃಷಿ ಹೀಗೆ ನಾನಾ ರೀತಿ ರಾಜ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಜಿಲ್ಲೆಯ ಬಗ್ಗೆ ಆಳುವ ಸರ್ಕಾರಗಳು ಇನ್ನಾದರೂ ಗಮನ ಹರಿಸಬೇಕಿದೆ. ಕಳೆದ ನಾಲ್ಕೈದು ಬಜೆಟ್‌ ಮಂಡಿಸಿದ ಯಾವುದೇ ಸರ್ಕಾರಗಳು ದಾವಣಗೆರೆಗೆ ಖಾಲಿ ಬಾಗಿನ ಕೊಟ್ಟಿದ್ದನ್ನು ಬಿಟ್ಟರೆ, ಏನೂ ಮಾಡಲಿಲ್ಲ. ಇನ್ನಾದರೂ ಸಿದ್ದರಾಮಯ್ಯ ತುಂಬಿದ ಬಾಗಿನ ನೀಡುತ್ತಾರಾ ಎಂಬುದೇ ಸತ್ಯ ಕುತೂಹಲಕ್ಕೆ ಕಾರಣ‍ವಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜುಲೈ 2023ರಂದು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಕೆಲವೊಂದಿಷ್ಟು ಯೋಜನೆ ಜಿಲ್ಲೆಗೆ ಘೋಷಿಸಿದರೂ, ಯಾವುದರಲ್ಲೂ ಸ್ಪಷ್ಟತೆ ಇರಲಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದನ್ನು ಬಿಟ್ಟರೆ, ಇಂತಹದ್ದೊಂದು ಯೋಜನೆ ನೀಡಿದ್ದ ಬಗ್ಗೆ ಯಾವುದೇ ಕುರುಹು ಸಿಗುವಂತಹ ಕೆಲಸ ಆಗಿಲ್ಲವೆಂಬುದೂ ಅಷ್ಟೇ ಸ್ಪಷ್ಟ. ಒಂದು ಕಾಲದ ಕೈಗಾರಿಕಾ ನಗರಿ, ಈಗಿನ ವಿದ್ಯಾ, ವಾಣಿಜ್ಯ ನಗರಿ ಖ್ಯಾತಿಯ ದಾವಣಗೆರೆಯಲ್ಲೊಂದು ವಿಮಾನ ನಿಲ್ದಾಣ ಆಗಬೇಕೆಂಬ ತಲೆಮಾರುಗಳ ಕನಸು ಹಾಗೆಯೇ ಇದೆ. ವಿಮಾನ ನಿಲ್ದಾಣ ಇವಾಗ ಆಗುತ್ತೆ, ನಾಳೆ ಆಗತ್ತೆ ಅಂತಲೇ ಕಾಲಹರಣವಾಗಿದೆ. ನೆರೆಯ ಶಿವಮೊಗ್ಗ ವಿಮಾನ ನಿಲ್ದಾಣ ಬಂದರೂ, ದಾವಣಗೆರೆಗೆ ಮಾತ್ರ ಅದು ಗಗನ ಕುಸುಮವೇ ಆಗಿದೆ.

ರಾಜ್ಯದ ಮೆಕ್ಕೆಜೋಳದ ಕಣಜ ಅಂತಲೇ ಜಿಲ್ಲೆ ಗುರುತಿಸಲ್ಪಡುತ್ತದೆ. ಮೆಕ್ಕೆಜೋಳ ಸಂಸ್ಕರಣಾ ಘಟಕ, ಮೆಕ್ಕೆ ಸೇರಿ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಇಲ್ಲಿವರೆಗೂ ಸರ್ಕಾರವಂತೂ ಮನಸ್ಸು ಮಾಡಿಲ್ಲ. ಒಂದು ಕಡೆ ಭದ್ರಾ ನಾಲೆಯು ಜಿಲ್ಲೆಯ ಬಹುತೇಕ ಕಡೆ ನರ ನಾಡಿಯಂತೆ ಹರಡಿದೆ. ಮತ್ತೊಂದು ಕಡೆ ನಾಡಿನ ಜೀವನದಿಗಳಲ್ಲೊಂದಾದ ತುಂಗಭದ್ರಾ ಹರಿಯುತ್ತದೆ. ಅನೇಕ ಕಡೆ ಸಮೃದ್ಧ ನೀರಾವರಿ, ಮತ್ತೆ ಕೆಲ ಕಡೆ ಬೆದ್ದಲು ಹೊಂದಿರುವ ಜಿಲ್ಲೆ ಇದು. ಕಳೆದೊಂದು ಶತಮಾನದ ಬಹುಪಾಲು ಬರವನ್ನೇ ಹಾಸು ಹೊದ್ದಿರುವ ತಾಲೂಕು ಇಲ್ಲಿದ್ದರೆ, ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದು ಇಲ್ಲಿದೆ. ಈಗ ವಿವಿಧತೆಯಲ್ಲಿ ಏಕತೆಯ ದಾವಣಗೆರೆ ಜಿಲ್ಲೆಯೇ ಸಂಪೂರ್ಣ ಕಡೆಗಣಿಸಲ್ಪಡುತ್ತಿದೆ.

ತುಂಗಭದ್ರಾ ನದಿಯಿಂದ ಚನ್ನಗಿರಿ, ಹೊನ್ನಾಳಿ ತಾಲೂಕಿನ ನೂರಾರು ಕೆರೆ ತುಂಬಿಸುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಕುಂಟುತ್ತಾ ಸಾಗಿದೆ. ಮತ್ತೊಂದು ಕಡೆ ಭೈರನಪಾದ ಏತ ನೀರಾವರಿ ಯೋಜನೆ ಹರಿಹರ ತಾಲೂಕಿನ ರೈತರ ಬಹು ವರ್ಷಗಳ ಬೇಡಿಕೆಯಾಗಿದೆ. ದಾವಣಗೆರೆ ತಾಲೂಕಿನ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯಲ್ಲೂ ಎಲ್ಲಾ ಕೆರೆಗೂ ಸಮರ್ಪಕ ನೀರು ತಲುಪುತ್ತಿಲ್ಲವೆಂಬ ದೂರು ಇದೆ. ಇಂದಿಗೂ ಗ್ರಾಮೀಣ ಪ್ರದೇಶ, ನಗರ, ಪಟ್ಟಣದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ.

ಸತತ ಬರ ಹಿನ್ನೆಲೆ ಅಂತರ್ಜಲದ ಮಟ್ಟವೂ ಕುಸಿಯುತ್ತಿದ್ದು, ಬೇಸಿಗೆ ನೀರಿನ ದಾಹ ಈಗಾಗಲೇ ಅನೇಕ ಕಡೆ ಕಾಣಿಸಿಕೊಳ್ಳಲಾರಂಭಿಸಿದೆ. ಈ ಪರಿಸ್ಥಿತಿಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಒತ್ತು ನೀಡಬೇಕಿದೆ.

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ತೋಟಗಾರಿಕೆ, ಕೃಷಿ ವಿಶ್ವ ವಿದ್ಯಾನಿಲಯ ಅಥವಾ ಕಾಲೇಜುಗಳನ್ನು ಸ್ಥಾಪಿಸಬೇಕೆಂಬ ರೈತರ ಬೇಡಿಕೆ ಹಾಗೆಯೇ ಬಾಕಿ ಇದೆ. ಅದೇ ರೀತಿ ಮಧ್ಯ ಕರ್ನಾಟಕದಲ್ಲಿ ದೊಡ್ಡ ಆಸ್ಪತ್ರೆ ಅಂತಲೇ ಕರೆಯಲ್ಪಡುವ ದಾವಣಗೆರೆ ಜಿಲ್ಲಾಸ್ಪತ್ರೆ ಇದೆ. ಇಂತಹ ಅವಕಾಶ ಇದ್ದರೂ, ಇಲ್ಲೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಬೇಕು ಎಂಬ ಬೇಡಿಕೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾರ್ದನಿಸಿತ್ತು. ಆದರೆ, ಕೃಷಿ, ತೋಟಗಾರಿಕೆ, ವೈದ್ಯಕೀಯ ಕಾಲೇಜು ಮತ್ತೊಮ್ಮೆ ಕನ್ನಡಿಯೊಳಗಿನ ಗಂಟು ಎಂಬಂತಾಗದಿರಲಿ ಎಂಬ ಮಾತು ಕೇಳಿ ಬರುತ್ತಿದೆ. ಭದ್ರಾ ನಾಲೆಗಳು ಅಲ್ಲಲ್ಲಿ ಹಾಳಾಗಿದ್ದು, ಸೇತುವೆಗಳು ಶಿಥಿಲಗೊಂಡಿವೆ. ನಾಲೆ ಆಧುನೀಕರಣ ಅಥವಾ ದುರಸ್ಥಿ, ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಬೇಕಿದೆ. ಪ್ರವಾಸೋದ್ಯಮ ನಕ್ಷೆಯಲ್ಲಿ ಇಲ್ಲದ ದಾವಣಗೆರೆ ಕಕ್ಷೆ!

ದಕ್ಷಿಣ ಕಾಶಿ ಅಂತಲೇ ಕರೆಯಲ್ಪಡುವ ಹರಿಹರದ ತುಂಗಭದ್ರಾ ತಟದ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿ-ಹರರ ಸಂಗಮ ಸ್ಥಳವೆಂಬ ನಂಬಿಕೆ ಇದೆ. ಸಮೀಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದೆ. ಅಯೋಧ್ಯೆ ಶ್ರೀರಾಮನ ಮೂಲ ವಿಗ್ರಹ ಇದೆಯೆನ್ನಲಾದ ಮಂದಿರ ಹರಿಹರ ಸಮೀಪವಿದೆ. ಇದೇ ತಾಲೂಕಿನ ಕೊಂಡಜ್ಜಿ ಅರಣ್ಯ ಪ್ರದೇಶ ಹೊಂದಿದ್ದು, ನವಿಲು, ನರಿ ಸೇರಿ ಸಾಕಷ್ಟು ಪ್ರಾಣಿ, ಪಕ್ಷಗಳ ಆಶ್ರಯ ತಾಣವಾಗಿವೆ. ಹೊನ್ನಾಳಿ ಹಿರೇಕಲ್ಮಠ, ದಕ್ಷಿಣ ಭಾರದ 2ನೇ ಅತೀ ದೊಡ್ಡ ಕೆರೆ ಸೂಳೆಕೆರೆ, ಸಂತೇಬೆನ್ನೂರಿನ ಆಕರ್ಷಕ ಪುಷ್ಕರಣಿ, ಜೋಳದಾಳ್, ಚನ್ನಗಿರಿ ಕೋಟೆ, ಉಬ್ರಾಣಿ ಅರಣ್ಯ ಪ್ರದೇಶ ಹೀಗೆ ಪ್ರವಾಸಿ ತಾಣಗಳಿವೆ.

ದಾವಣಗೆರೆ ಗಾಜಿನ ಮನೆ, ಕುಂದುವಾಡ ಕೆರೆ, ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನ, ದುಗ್ಗಮ್ಮನ ದೇವಸ್ಥಾನ, ಜಗಳೂರಿನ ಕೊಂಡಕುರಿ ಸಂರಕ್ಷಿತ ಅಭಯಾರಣ್ಯ ರಂಗಯ್ಯನ ದುರ್ಗ, ಕೊಡದಗುಡ್ಡ ಶ್ರೀ ವೀರಭದ್ರೇಶ್ವರ ದೇವಸ್ಥಾನ, ನೀರ್ಥಡಿಯ ಪ್ರಾಚೀನ ಶ್ರೀ ರಂಗನಾಥ ಸ್ವಾಮಿ, ನರಗನಹಳ್ಳಿ ಶ್ರೀ ಆಂಜನೇಯ ದೇವಸ್ಥಾನ, ಬೇತೂರಿನ ಜೈನ ಬಸದಿ ಕುರುಹುಗಳು, ಸುಗ್ರೀವನ ದೇವಸ್ಥಾನ, ಪ್ರಾಚೀನ ಶಿಲಾ ಸ್ಮಾರಕಗಳು ಹೀಗೆ ತನ್ನ ಒಡಲಾಳದಲ್ಲಿ ಪ್ರವಾಸಿ ತಾಣವಾಗುವಂತಹ ಎಲ್ಲಾ ಅರ್ಹತೆ, ಅವಕಾಶವನ್ನು ಹೊಂದಿರುವ ಜಿಲ್ಲೆ ದಾವಣಗೆರೆಯಾಗಿದೆ. ಆದರೆ, ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅನುದಾನ ನೀಡದ್ದೇ ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ಕಕ್ಷೆಯೇ ಇಲ್ಲದಿರಲು ಕಾರಣವಾಗಿದೆ. ಸಿದ್ದರಾಮೋತ್ಸವದ ಮೂಲಕ ರಾಜ್ಯ, ರಾಷ್ಟ್ರಾದ್ಯಂತ ತಮ್ಮ ಜನ್ಮದಿನದ ಮೂಲಕ ಹೊಸ ಉತ್ಸಾಹದಲ್ಲಿ ಗಮನ ಸೆಳೆದು, ಹೊಸ ಶಕ್ತಿಯೊಂದಿಗೆ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ತಮ್ಮ ನೆಚ್ಚಿನ ದಾವಣಗೆರೆ ಜಿಲ್ಲೆಗೆ ಕೈಬಿಚ್ಚಿ ಅನುದಾನ ನೀಡಿ, ಸ್ಪಂದಿಸಬೇಕೆಂಬ ಮಾತು ಕೇಳಿ ಬರುತ್ತಿವೆ. ಬಜೆಟ್‌ ನಿರೀಕ್ಷೆಯ ಹೊರೆಗಳಿವು:

ದಾವಣಗೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ

ಮೆಕ್ಕೆಜೋಳ ಸೇರಿ ಕೃಷಿ ಸಂಸ್ಕರಣಾ ಘಟಕ ಸ್ಥಾಪನೆ

ಐಟಿ ಪಾರ್ಕ್ ಕನಸಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಆಗಲಿ

ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ಕಾರ್ಯಗತವಾಗಲಿ

ಕೃಷಿ ಸೇರಿ ಕೈಗಾರಿಕೆಗಳ ಸ್ಥಾಪನೆ ಈಗಾದರೂ ಆಗಬಹುದೆ?

ಹೆಸರಿಗಷ್ಟೇ ಆಗಿರುವ ಜವಳಿ ಪಾರ್ಕ್‌ಗೆ ಕಾಯಕಲ್ಪ ನೀಡಲು ಒತ್ತು

ಪ್ರತಿ ಗ್ರಾಮಕ್ಕೂ ಶುದ್ಧ ನೀರು ಪೂರೈಸಿ, ಜನರಿಗೆ ಸ್ಪಂದಿಸಬೇಕಿದೆ

ತೋಟಗಾರಿಕೆ, ಕೃಷಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ

ದುಡಿಯುವ ಯುವ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸಿಕ್ಕೀತೆ?

ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆ ಜಿಲ್ಲೆ ಕಕ್ಷೆ ಇನ್ನಾದ್ರೂ ಇರುತ್ತಾ?

Share this article