ಶ್ರೀ ಗಾಯಿತ್ರಿ ದೇವಿ ಪ್ರತಿಷ್ಟಾಪನೆ- ಮಹಾ ಕುಂಭಾಭಿಷೇಕ, ಶ್ರೀ ಶಂಕರ ಭಾರತಿ ಸಭಾ ಭವನ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಈ ಜಗತ್ತು ಧರ್ಮದ ಆಧಾರದ ಮೇಲೆ ನಿಂತಿದೆ ಎಂದು ಶೃಂಗೇರಿ ಮಠದ ಶ್ರೀ ಮಜ್ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸ್ವಾಮೀಜಿ ತಿಳಿಸಿದರು.
ಭಾನುವಾರ ಅಗ್ರಹಾರದಲ್ಲಿ ತಾಲೂಕು ಬ್ರಾಹ್ಮಣ ಮಹಾ ಸಭಾ ನಿರ್ಮಿಸಿರುವ ನೂತನ ಶ್ರೀ ಗಾಯಿತ್ರಿ ದೇವಿ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿದ್ಯವಹಿಸಿ ಆಶೀರ್ವಚನ ನೀಡಿದರು. ನಮ್ಮ ಧರ್ಮವನ್ನು ಅನಾದಿ ಕಾಲದಿಂದಲೂ ಸನಾತನ ವೈದಿಕ ಧರ್ಮ ಎಂದು ಕರೆಯ ಲಾಗುತ್ತಿತ್ತು. ಈಗ ಹಿಂದೂ ಧರ್ಮ ಎಂದು ಕರೆಯಲಾಗುತ್ತಿದೆ. ಯಾವುದು ಜಗತ್ತಿಗೆ ಆಧಾರವಾಗಿದೆಯೋ ಅದನ್ನು ಧರ್ಮ ಎನ್ನುತ್ತೇವೆ. ನಾವು ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕಾದರೆ ಧರ್ಮ ಮುಖ್ಯ.ಇಂದು ನಾವು ಪುಣ್ಯದ ಕೆಲಸ ಮಾಡಿದರೆ ಮುಂದೆ ಸುಖವಾಗಿ ಬದುಕ ಬಹುದಾಗಿದೆ. ಧರ್ಮದ ಆಚರಣೆಯೇ ಧರ್ಮದ ಸಂರಕ್ಷಣೆಯಾಗಿದೆ ಎಂದರು.ವೈದಿಕ ಧರ್ಮ ಉತ್ತಮ ಧರ್ಮವಾಗಿದ್ದು ವೇದಗಳೇ ಧರ್ಮಕ್ಕೆ ಆಧಾರ. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಪ್ರತಿಯೊಬ್ಬರೂ ಅವರವರ ಧರ್ಮದ ಆಚರಣೆ ಸರಿಯಾಗಿ ಮಾಡಬೇಕು ಎಂದರು. ತಾಲೂಕು ಬ್ರಾಹ್ಮಣ ಮಹಾ ಸಭಾದವರು ಹಲವು ವರ್ಷಗಳ ಹಿಂದೆ ಸಂಕಲ್ಪ ಮಾಡಿದಂತೆ ಗಾಯಿತ್ರಿ ದೇವಸ್ಥಾನ ನಿರ್ಮಿಸಿದ್ದು ನಾನು ಇಂದು ಗಾಯಿತ್ರಿ ದೇವಿಯ ಕುಂಬಾಭಿಷೇಕ ನೆರವೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಗಾಯಿತ್ರಿ ದೇವಸ್ಥಾನದಲ್ಲಿ ಪ್ರತಿವರ್ಷ ಒಂದು ಬಾರಿಯಾದರೂ 1ಲಕ್ಷ ಗಾಯಿತ್ರಿ ಜಪ, ಗಾಯಿತ್ರಿ ಹೋಮ ಮಾಡಬೇಕು. ಜೊತೆಗೆ 1 ಲಕ್ಷ ಲಲಿತ ಸಹಸ್ರ ಅರ್ಚನೆ, ಪಾರಾಯಣ ಮಾಡಬೇಕು ಎಂದು ಸಲಹೆ ನೀಡಿದರು. ಬ್ರಾಹ್ಮಣನಾದವರು ವಯಸ್ಸಿಗೆ ಬಂದ ನಂತರ ಉಪನಯನ ಮಾಡಬೇಕು. ಪ್ರತಿ ನಿತ್ಯ ಸಂದ್ಯಾವಂದನೆ, ಗಾಯಿತ್ರಿ ಜಪ ಮನೆಯಲ್ಲಿ ದೇವಾರಾಧನೆ ಮಾಡಬೇಕು. ವೇದಗಳ ಅಧ್ಯಯನ, ಅನುಷ್ಠಾನ, ಆರಾಧನೆ ಮಾಡಿದರೆ ಬ್ರಾಹ್ಮಣರು ಉದ್ದಾರವಾಗುತ್ತಾರೆ. ಸ್ವಧರ್ಮ ಆಚರಣೆ ಅತಿ ಅವಶ್ಯಕ ಎಂದು ಸಲಹೆ ನೀಡಿದರು. ಇಂದು ಗಾಯಿತ್ರಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಿರುವ ನೂತನ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಶೀರ್ಘದಲ್ಲೇ ಭವನ ಉದ್ಘಾಟನೆ ಗೊಳ್ಳಲಿ. ಶೃಂಗೇರಿ ಮಠದಿಂದ ಪ್ರಸಾದ ರೂಪದಲ್ಲಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. ಮೈಸೂರಿನ ಅಮ್ಮ ಪೌಂಡೇಶನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಹಿಂದಿನಿಂದಲೂ ಹೋಮ, ಯಜ್ಞ, ಯಾಗಾದಿಗಳು ಬ್ರಾಹ್ಮಣರ ನೇತೃತ್ವದಲ್ಲಿ ನಡೆಯುತ್ತಾ ಬಂದಿದೆ. ಅನಾದಿ ಕಾಲದಿಂದಲೂ ಬ್ರಾಹ್ಮಣರು ಸಮಾಜಕ್ಕೆ ಒಳಿತನ್ನೇ ಬಯಸುತ್ತಾ ಧರ್ಮ ಉಳಿಸಲು ಸರಿಯಾದ ಮಾರ್ಗ ತೋರಿದ್ದಾರೆ. ನಾನು ಶೃಂಗೇರಿ ಮಠದ ಭಕ್ತನಾಗಿದ್ದು ಶೃಂಗೇರಿ ಶ್ರೀಗಳು ಶ್ರೀ ಶಂಕರಾಚಾರ್ಯರ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿರೂಪ ಎಂದರು. ಬ್ರಾಹ್ಮಣ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಅನಂತಪದ್ಮನಾಭ ಮಾತನಾಡಿ, ಕಳೆದ ರಾಮನವಮಿಯಂದು ಶೃಂಗೇರಿ ಶ್ರೀಗಳ ಆಶೀರ್ವಾದದೊಂದಿಗೆ ಗಾಯಿತ್ರಿ ದೇವಸ್ಥಾನ ಪ್ರಾರಂಭಿಸಿದ್ದು ಬ್ರಾಹ್ಮಣ ಸಮಾಜ ಹಾಗೂ ದಾನಿಗಳ ಸಹಕಾರ ದೊಂದಿಗೆ 8 ತಿಂಗಳಲ್ಲಿ ಮುಕ್ತಾಯವಾಗಿದೆ. ಅಂದಾಜು 3 ರಿಂದ 4 ಕೋಟಿ ವೆಚ್ಚದಲ್ಲಿ ಶ್ರೀ ಶಂಕರ ಭಾರತಿ ಸಭಾ ಭವನ ನಿರ್ಮಿಸಲು ತೀರ್ಮಾನಿಸಿದ್ದು ಶಾಸಕ ಟಿ.ಡಿ.ರಾಜೇಗೌಡ ಹಾಗೂ ಪ್ರವಾಸೋದ್ಯೋಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದು ಸರ್ಕಾರದಿಂದ 2.50 ಕೋಟಿ ನೀಡುವ ಭರವಸೆ ನೀಡಿದ್ದಾರೆ ಎಂದರು.ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಶ್ರೀಗಳ ಪಾದ ಪೂಜೆ ನೆರವೇರಿಸಲಾಯಿತು. ಶಂಕರ ಭಟ್ ಹಾಗೂ ಸಂಗಡಿ ಗರು ವೇಧ ಘೋಷ ಮಾಡಿದರು.ಗಾಯಿತ್ರಿ ಪ್ರಾರ್ಥಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.ನಂತರ ಎಲ್ಲಾ ಭಕ್ತರಿಗೂ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿದರು. ಇದಕ್ಕೂ ಮೊದಲು ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಆಗಮಿಸಿದಾಗ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ಶಂಕರ ಭಾರತಿ ಸಭಾ ಭವನದ ಶಿಲಾನ್ಯಾಸ ನೆರವೇರಿಸಿದರು. ಗಾಯಿತ್ರಿ ದೇವಿ ಪ್ರತಿಷ್ಟಾಪನೆ ಮತ್ತು ಮಹಾ ಕುಂಭಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಸದಸ್ಯೆ ರೇಖಾ ಮಂಜುನಾಥ್, ಬ್ರಾಹ್ಮಣ ಮಹಾ ಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ರವಿಶಂಕರ್ತಾ ಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್, ಗೌರವಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಕಾರ್ಯದರ್ಶಿ ಸುರೇಶ್, ಖಜಾಂಚಿ ಅಭಿಷೇಕ್, ಉಪಾಧ್ಯಕ್ಷರಾದ ಅನ್ನಪೂರ್ಣ, ಸುಬ್ಬರಾವ್, ಶ್ರೀನಿವಾಸ್ ಮತ್ತಿತರರು ಇದ್ದರು. 3knrp1_354.jpg : ನರಸಿಂಹರಾಜಪುರದಲ್ಲಿ ನೂತನವಾಗಿ ನಿರ್ಮಿಸಿರುವ ಗಾಯಿತ್ರಿ ದೇವಿ ಪ್ರತಿಷ್ಟಾಪನೆ ಹಾಗೂ ಕುಂಬಾಬಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಶೃಂಗೇರಿ ಶ್ರೀ ಮಠದ ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸ್ವಾಮೀಜಿಗಳು ಆಶೀರ್ವಾಚನ ನೀಡಿದರು.3KNRP2_805.JPG
ನರಸಿಂಹರಾಜಪುರ ತಾಲೂಕು ಬ್ರಾಹ್ಮಣ ಮಹಾ ಸಬಾದವರು ನಿರ್ಮಿಸಲಿರುವ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ಶೃಂಗೇರಿ ಶ್ರಿ ವಿಧು ಶೇಖರ ಭಾರತಿ ಸ್ವಾಮೀಜಿಗಳು ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಬ್ರಾಹ್ಮಣ ಮಹಾ ಸಬಾದ ಪದಾಧಿಕಾರಿಗಳು ಇದ್ದರು.