ಪರಂಪರೆಗಳ ನಡುವೆ ಕಂದಕ ನಿರ್ಮಾಣ ಮಾಡುವರಿಗೆ ಇತಿಹಾಸ ಗೊತ್ತಿಲ್ಲ

KannadaprabhaNewsNetwork | Published : Dec 25, 2024 12:45 AM

ಸಾರಾಂಶ

ಶ್ರೀಶೈಲ ಪೀಠದ ಜಗದ್ಗುರುಗಳಿಗೆ ಹಾಗೂ ಬಸವಣ್ಣನವರಿಗೆ ಎಂತಹ ಅವಿನಾಭಾವ ಸಂಬಂಧವಿತ್ತು ಎನ್ನುದನ್ನು ನಾವು ಅರ್ಥ ಮಾಡಿಕೊಳ್ಳಬಹುದು

ಗಜೇಂದ್ರಗಡ: ಎರಡು ಪರಂಪರೆಗಳ ಮಧ್ಯದಲ್ಲಿ ಕಂದಕ ನಿರ್ಮಾಣ ಮಾಡುವಂತಹ ಕೆಲ ಜನರು ಇದ್ದಾರೆ. ಅವರಿಗೆ ಇತಿಹಾಸನೂ ಗೊತ್ತಿಲ್ಲ ಹಾಗೂ ಭವಿಷ್ಯನು ಬೇಕಾಗಿಲ್ಲ ಎಂದು ಶ್ರೀಶೈಲಂ ಸೂರ್ಯಸಿಂಹಸಾನ ಪೀಠದ ೧೦೦೮ ಜಗದ್ಗುರು ಡಾ. ಚನ್ನಸಿದ್ದರಾಮ ಶಿವಾಚಾರ್ಯ ಭಗವ್ಪಾದರು ಹೇಳಿದರು.

ಸ್ಥಳೀಯ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆಯುತ್ತಿರುವ ಬಸವ ಪುರಾಣದ ಸೋಮವಾರ ನಡೆದ ೨೪ನೇ ದಿನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರಿಗೆ ಹಾಗೂ ಪಂಚಪೀಠಗಳಿಗೆ ಎಣ್ಣೆ, ಸಿಗಿಕಾಯಿ, ಒಬ್ಬರನ್ನೊಬ್ಬರು ಸೇರುವುದಿಲ್ಲ. ಬಸವ ತತ್ವ ಎಂದರೆ ಪಂಚ ಪೀಠಗಳಿಗೆ ಆಗಲ್ಲ, ಬಸವ ಪರಂಪರೆಯವರಿಗೆ ಪಂಚಪೀಠಗಳು ಆಗಲ್ಲ ಎಂದು ತಮ್ಮ ಮೂಗಿನ ನೇರಕ್ಕೆ ಮಾತನಾಡಿಕೊಳ್ಳುತ್ತಾರೆ. ಆದರೆ ಹಾಗೇನಿಲ್ಲ. ಬಸಣ್ಣನವರಿಗೂ ಪಂಚಪೀಠಗಳು ಬೇಕು, ಪಂಚಪೀಠಗಳಿಗೆ ಬಸವಣ್ಣನವರೂ ಬೇಕು ಎನ್ನುವದಕ್ಕೆ ಈ ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರು ದಯಮಾಡಿಸಿದ್ದು ಪ್ರತ್ಯಕ್ಷ ಸಾಕ್ಷಿ ಎನ್ನುವದನ್ನು ಮೊದಲು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದ ಅವರು, ಬಸವ ಪುರಾಣಕ್ಕೆ ಕೈಗನ್ನಡಿ ಎಂದರೆ ಗಜೇಂದ್ರಗಡದಲ್ಲಿ ನಡೆದ ಬಸವ ಪುರಾಣದಂತಿರಬೇಕು. ಅನವಶ್ಯಕವಾಗಿ ಯಾವುದೇ ಪರಂಪರೆ, ಆಚಾರ, ವಿಚಾರ ಬೇರೆ ಬೇರೆ ರೀತಿಯಾಗಿ ಹೇಳುವ ಮೂಲಕ ಕಡೆಗಣಿಸುವುದು ಇವೆಲ್ಲವು ಒಂದೊಂದು ಕಡೆ ನಡೆದರೆ ಯಾರನ್ನು ನಿಂದಿಸದೆ, ಯಾರನ್ನು ಕಡೆಗಣಿಸದೇ ಸಮನ್ವಯತ್ಮಕ ದೃಷ್ಠಿಕೋನದಿಂದ ನಡೆಯುತ್ತಿರುವ ಬಸವ ಪುರಾಣ ಗಜೇಂದ್ರಗಡದಲ್ಲಿ ನಡೆಯುತ್ತಿದೆ ಎಂದರು.

ಇತಿಹಾಸವನ್ನು ನಾವು ಕಣ್ಣು ತೆರೆದು ನೋಡಿದರೆ ಎರಡು ಎನ್ನುವುದು ಮಧ್ಯದಲ್ಲಿ ಬಂದದ್ದು. ಮಧ್ಯದಲ್ಲಿ ಹೋಗುವಂತದ್ದು. ಕೊನೆಗೂ ಉಳಿಯಲ್ಲ. ಮೊದಲು ಇರಲಿಲ್ಲ.ಅದರಲ್ಲೂ ವಿಶೇಷವಾಗಿ ಶ್ರೀಶೈಲ ಪೀಠಕ್ಕೆ ಬಸವಣ್ಣನವರು ಮಾಡಿರುವಂತ ಕ್ರಾಂತಿಗೆ,ಆ ಮೇಲೆ ಬಸವಣ್ಣನವರ ಮಾಡುತ್ತಿರುವಂತಹ ಕಲ್ಯಾಣದ ಕ್ರಾಂತಿ ಸಂದರ್ಭದಲ್ಲಿ ಒಂದಕ್ಕೊಂದು ಪೂರಕವಾಗಿರುತಂಹ ಹಲವಾರು ಸಂಗತಿ ನಾವು ಗಮನಿಸಬಹುದು ಎಂದ ಅವರು, ಬಸವಣ್ಣನವರಿಗೆ ಶಿಕ್ಷೆಯಾಗುವಂತಹ ಸಂದರ್ಭದಲ್ಲಿ ಬಸವಣ್ಣನವರು ಸಮಾಜ ಒಂದುಗೂಡಿಸಬೇಕು, ಸಮಾನತೆ ತರಬೇಕು ಎನ್ನುವ ಪ್ರಯತ್ನ ಮಾಡಿದಾಗ ಜಾತಿ ವ್ಯವಸ್ಥೆಗಳ ಕೆಂಗಣ್ಣು ಅವರ ಮೇಲೆ ಬೀಳುತ್ತೆ. ಕಲ್ಯಾಣದಲ್ಲಿ ಬಸವಣ್ಣನವರು ಎಲ್ಲರನ್ನು ಒಂದು ಕಡೆ ಕೂಡಿಸಲು ಹೊಸ ಸಮಾಜ ಕಟ್ಟಬೇಕು ಎಂಬ ಪ್ರಯತ್ನ ಮಾಡುವಾಗ ಆ ಸಮಯದಲ್ಲಿ ಅಂದಿನ ಶ್ರೀಶೈಲ ಮಠದ ಜಗದ್ಗುರು ಮಲ್ಲಿಕಾರ್ಜುನ ಪಂಡಿತಾರಾಧ್ಯ ಭಗವತ್ಪದಾಂಗಳ ಅವರಿಗೆ ಬಸವಣ್ಣನರು ಕೊಟ್ಟಿದ್ದ ಸ್ವತಃ ಆಮಂತ್ರಣ ಒಪ್ಪಿಕೊಂಡು ಕಲ್ಯಾಣಕ್ಕೆ ದಯಮಾಡಿಸಲು ಶುರು ಮಾಡಿ ಕಲ್ಯಾಣಕ್ಕೆ ಆಗಮಿಸುವಾಗ ಕಲ್ಯಾಣದಲ್ಲಿ ಕ್ರಾಂತಿ ಶುರುವಾಗುತ್ತದೆ. ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರು ಮಾಡುವ ಸಂದರ್ಭ ಸೃಷ್ಠಿ ಆಗುತ್ತದೆ. ಜಗದ್ಗುರುಗಳು ಕಲ್ಯಾಣಕ್ಕೆ ಆಗಮಿಸುವ ವಿಷಯ ತಿಳಿದು ಬಸವಣ್ಣನವರು ತಮ್ಮ ಅತ್ಯಾಪ್ತರನ್ನು ಕಳುಹಿಸಿ ಅವರನ್ನು ತಮ್ಮ ಕ್ಷೇತ್ರಕ್ಕೆ ಹಿಂತಿರುಗಲು ವಿನಂತಿ ಮಾಡಿದಾಗ ಅವರು ಜಗದ್ಗುರುಗಳು ಅಳಲು ಗೀತೆ ಬರೆದಿದ್ದಾರೆ. ಶ್ರೀಶೈಲ ಪೀಠದ ಜಗದ್ಗುರುಗಳಿಗೆ ಹಾಗೂ ಬಸವಣ್ಣನವರಿಗೆ ಎಂತಹ ಅವಿನಾಭಾವ ಸಂಬಂಧವಿತ್ತು ಎನ್ನುದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.

ಧಾರವಾಡದ ಮುರಘಾಮಠದ ಶ್ರೀಗಳು, ಹಾಲಕೇರೆ ಮಠದ ಶ್ರೀಗಳು ಸೇರಿದಂತೆ ರೋಣ ಶಾಸಕ, ವಿಪ ಸದಸ್ಯ ಸೇರಿ ಬಸವ ಪುರಾಣ ಸಮಿತಿ ಸದಸ್ಯರು ಸೇರಿ ಅನೇಕ ಗಣ್ಯರು ಇದ್ದರು.

Share this article