ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಹುಲುಗಲಕುಂಟೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಿಕೊಡಿ ಎಂದು ಶುಕ್ರವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ಸಂಜೆ ಬಿಡುಗಡೆ ಮಾಡಿದ ಘಟನೆ ನಡೆದಿದೆ.ಜೇವರ್ಗಿಯಿಂದ ಶ್ರೀ ರಂಗಪಟ್ಟಣದವರೆಗೆ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿಯು ಹುಲುಗಲಕುಂಟೆ ಮೂಲಕ ಹಾದು ಹೋಗಿದ್ದು ನೂರಾರು ರೈತರು ಜಮೀನುಗಳಿಗೆ ಹೋಗಲು, ವಿದ್ಯಾರ್ಥಿಗಳು ಶಾಲೆಗೆ ಹೋಗಲು, ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಬಳಿ ಅಂಡರ್ ಪಾಸ್ ನಿರ್ಮಿಸಿಕೊಡಿ ಎಂದು ಗ್ರಾಮದ ಜನತೆ ಹಲವಾರು ಬಾರಿ ಮನವಿ ಮಾಡಿದ್ದಾರೆ.
ಹುಲುಗಲಕುಂಟೆ, ಸೋಮೇರಹಳ್ಳಿ, ಯಾದವ ನಗರ, ಗಾಂಧಿ ನಗರ, ಗೌಡನಹಳ್ಳಿ, ರಂಗಾಪುರ, ಹಿಂಡಸಕಟ್ಟೆ, ಎಕೆ ಕಾಲೋನಿ ಪಿಲಾಜನಹಳ್ಳಿ ಭಾಗದ ಶಾಲಾ ಮಕ್ಕಳಿಗೆ, ರೈತರಿಗೆ ಈ ಅಂಡರ್ ಪಾಸ್ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಯುಕ್ತರಿಗೆ, ಮಾಜಿ ಸಂಸದ ನಾರಾಯಣಸ್ವಾಮಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸಹ ಪ್ರಯೋಜನವಾಗದಿದ್ದಾಗ ಶುಕ್ರವಾರ ಬೆಳಗ್ಗೆ ರಸ್ತೆ ಕಾಮಗಾರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.ಕೆಲಸಕ್ಕೆ ತೊಂದರೆ ಮಾಡಲಾಗಿದೆ ಎಂದು ಸುಮಾರು 14 ಜನರನ್ನು 12:30ರ ಹೊತ್ತಿಗೆ ಬಂಧಿಸಿ ಸಂಜೆ 6 ಗಂಟೆಯವರೆಗೂ ಠಾಣೆಯಲ್ಲಿಯೇ ಇಟ್ಟುಕೊಂಡಿದ್ದರು. ಎಚ್.ರಂಗಸ್ವಾಮಿ, ಎಚ್.ರಂಗನಾಥ, ಉಮೇಶ್ ಸ್ವಾಮಿ, ಶಶಿಕಲಾ,ಟಿ ರಂಗನಾಥ, ಜಿ ಶಿವಣ್ಣ, ವಿ ರಂಗಸ್ವಾಮಿ, ಆ ರಂಗಸ್ವಾಮಿ, ಕೃಷ್ಣಮೂರ್ತಿ, ನಾಗರಾಜಪ್ಪ, ಕರಿಯಪ್ಪ, ಸೋಮನಾಥ, ಮಂಜುನಾಥ, ರಾಜು ಎನ್ನುವವರು ಬಂಧಿತರು. ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ ಎಂದು ಶಾಂತಿ ಕಾಪಾಡುವ ದೃಷ್ಟಿಯಿಂದ ಗ್ರಾಮದ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆತಂದಿದ್ದೇವೆ. ಯಾವುದೇ ದೂರು ದಾಖಲಿಸಿಲ್ಲ ಎಂದರು.ಪಿಎನ್‌ಸಿ ಕಂಪನಿಯವರು ಪೊಲೀಸ್‌ರನ್ನು ಬಳಸಿಕೊಂಡು ಗ್ರಾಮಸ್ಥರನ್ನು ಬಂಧಿಸಿದ್ದಾರೆ. ನಾವು ಠಾಣೆಗೆ ಹೋಗಿ ಮನವರಿಕೆ ಮಾಡಿಕೊಟ್ಟರು ಸಹ ಬೇಜವಾಬ್ದಾರಿ ಉತ್ತರ ಕೊಟ್ಟರು. ಈಗಾಗಲೇ ಸಂಸದರಿಗೂ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಆ ಭಾಗದಲ್ಲಿ ಅಂಡರ್ ಪಾಸ್ ನಿರ್ಮಾಣದಿಂದ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ಈಗಾಗಲೇ ನಾವು ನಿರ್ಧಾರ ಮಾಡಿದ್ದು ಅಲ್ಲಿ ಅಂಡರ್ ಪಾಸ್ ನಿರ್ಮಿಸದಿದ್ದರೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇಂತಹ ಸಮಯದಲ್ಲಿ ಅಧಿಕಾರಿಗಳು ರೈತರ ಪರ ನಿಲ್ಲುವ ಕೆಲಸ ಮಾಡುವುದು ಒಳಿತು ಎಂದರು.ಎಂ.ಜಯಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ
ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದ್ದು ಸಾಕಷ್ಟು ಹಣ ಪೋಲಾಗಿದೆ. ಪೋಲಾಗಿರುವ ಹಣದಲ್ಲೇ ಅಂಡರ್ ಪಾಸ್ ನಿರ್ಮಿಸಿಕೊಡಬಹುದಿತ್ತು. ಅಂಡರ್ ಪಾಸ್ ಇಲ್ಲದಿದ್ದರೆ ರೈತರು ಒಂದು ಕರು ಹಿಡಿದುಕೊಂಡು ಹೋಗಲು ಸಹ 2 ಕಿಮೀ ಸುತ್ತಿಕೊಂಡು ಬರಬೇಕಾಗುತ್ತದೆ. ಅರ್ಧ ಲೀಟರ್ ಹಾಲಿಗೂ 2 ಕಿಮೀ ಸುತ್ತಬೇಕು. ಹತ್ತಾರು ಹಳ್ಳಿಗಳ ಅನುಕೂಲಕ್ಕೆಂದು ಅಂಡರ್ ಪಾಸ್ ಕೇಳಿ ಪ್ರತಿಭಟನೆ ಮಾಡಿದರೆ ಬಂಧಿಸಿ ಕೆಲಸ ಆಗುವವರೆಗೂ ಠಾಣೆಯಲ್ಲಿಯೇ ಕೂರಿಸುತ್ತಾರೆ ಎಂದರೆ ಏನರ್ಥ.ಜಿ.ಎಂ.ಉಮೇಶ್, ಸೋಮೇರಹಳ್ಳಿ ಗ್ರಾಮಸ್ಥ