ಸೋಮರಡ್ಡಿ ಅಳವಂಡಿ
ಕೊಪ್ಪಳ:ತುಂಗಭದ್ರಾ ಜಲಾಶಯದ 77 ವರ್ಷಗಳ ಇತಿಹಾಸದಲ್ಲಿಯೇ ಮಳೆಯ ಅಭಾವದಿಂದ 2016 ಸೇರಿದಂತೆ ಒಂದೆರಡು ಬಾರಿ ಭರ್ತಿಯಾಗಿಲ್ಲ. ಅದರ ಹೊರತಾಗಿ ಜಲಾಶಯ ಪ್ರತಿ ಮಳೆಗಾಲದಲ್ಲಿ ಭರ್ತಿಯಾಗಿದೆ. ಆದರೆ, ಈ ವರ್ಷ ಜುಲೈ ಮೊದಲ ವಾರದಲ್ಲಿಯೇ ಭರ್ತಿಯಾಗುವಷ್ಟು ಒಳಹರಿವಿದ್ದರೂ ಭರ್ತಿ ಮಾಡುವಂತಿಲ್ಲ.
ಹೌದು. ಕಳೆದ ವರ್ಷ ಆಗಸ್ಟ್‌ನಲ್ಲಿ 19ನೇ ಗ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಸ್ಟಾಪ್‌ಲಾಗ್ ಅಳವಡಿಸಲಾಗಿದ್ದು ಪೂರ್ಣಪ್ರಮಾಣದಲ್ಲಿ ಶಾಶ್ವತಗೇಟ್ ಅಳವಡಿಸಿಲ್ಲ. ಹೀಗಾಗಿ ಕೇಂದ್ರ ಜಲ ಆಯೋಗದ ತಜ್ಞರು ಪ್ರಸಕ್ತ ವರ್ಷ ಜಲಾಶಯಕ್ಕೆ ಕೇವಲ 80 ಟಿಎಂಸಿ ಮಾತ್ರ ನೀರು ಹಿಡಿದಿಡುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಜಲಾಶಯಕ್ಕೆ 71 ಟಿಎಂಸಿಯಷ್ಟು ನೀರು ಹರಿದುಬಂದಿದ್ದು, ಒಳಹರಿವು ಸಹ 43 ಸಾವಿರ ಕ್ಯುಸೆಕ್ ಇರುವುದರಿಂದ ಯಾವುದೇ ಸಂದರ್ಭದಲ್ಲಿ 80 ಟಿಎಂಸಿ ಮುಟ್ಟಲಿದೆ. ಜಲಾಶಯ ಸಾಮರ್ಥ್ಯ 105.788 ಟಿಎಂಸಿ ಇದ್ದರೂ ಜಲಾಶಯದ ಭದ್ರತೆ ದೃಷ್ಟಿಯಿಂದ ಈ ಬಾರಿ 80 ಟಿಎಂಸಿ ನೀರು ನಿಲ್ಲಿಸಲು ತೀರ್ಮಾನಿಸಲಾಗಿದೆ.ಅಧಿಕಾರಿಗಳ ನಿರ್ಲಕ್ಷ್ಯ:
ಮುರಿದಿದ್ದ ಜಲಾಶಯದ ಕ್ರಸ್ಟ್‌ಗೇಟ್‌ನ್ನು ಬೇಸಿಗೆಯಲ್ಲಿ ದುರಸ್ತಿ ಮಾಡಿದ್ದರೆ ಈ ಪರಸ್ಥಿತಿ ಬರುತ್ತಿರಲಿಲ್ಲ. ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣವೂ ಇಳಿಕೆಯಾಗಿತ್ತು. ಅಂದೇ ಯುದ್ಧೋಪಾದಿಯಲ್ಲಿ ಕಾರ್ಯಗತವಾಗಿ ಮುರಿದ 19ನೇ ಕ್ರಸ್ಟ್‌ಗೇಟ್‌ಗೆ ನೂತನ ಗೇಟ್ ಅಳವಡಿಸಬಹುದಾಗಿದ್ದು, ತುಂಗಭದ್ರಾ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇವಲ ಸರ್ವೇ, ಪರಿಶೀಲನೆಯಲ್ಲಿಯೇ ಕಾಲದೂಡಿ ಇದೀಗ ಗೇಟ್ ಸಿದ್ಧಪಡಿಸಿದ್ದಾರೆ. ಅದನ್ನು ಅಳವಡಿಸಬೇಕು ಎನ್ನುವಷ್ಟರಲ್ಲಿ ಜಲಾಶಯ ಒಳಹರಿವು ಹೆಚ್ಚಾಗಿ ಭಾರಿ ಪ್ರಮಾಣದ ನೀರು ಸಂಗ್ರವಾಗಿದ್ದರಿಂದ ಗೇಟ್ ಅಳವಡಿಸುವ ಕಾರ್ಯವನ್ನು ನವೆಂಬರ್‌ಗೆ ಮುಂದೂಡಲಾಗಿದೆ.ಮುಂಗಾರು ಬೆಳೆಗೆ ಸಮಸ್ಯೆಯಿಲ್ಲ:
ಪ್ರಸಕ್ತ ವರ್ಷ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ಮಾತ್ರವೇ ಸಂಗ್ರಹಿಸಿದರೂ ಮುಂಗಾರು ಹಂಗಾಮಿನ ಬೆಳೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮುಂಗಾರು ಅವಧಿಯುದ್ದಕ್ಕೂ 120 ಟಿಎಂಸಿ ನೀರು ಬೇಕಾಗುತ್ತದೆ. ಆದರೆ, ಮುಂಗಾರು ಹಂಗಾಮಿನುದ್ದಕ್ಕೂ ಮಳೆಗಾಲ ಇರುವುದರಿಂದ ನೀರಿನ ಒಳಹರಿವು ನಿರಂತರವಾಗಿ ಇರುವುದರಿಂದ 157 ಟಿಎಂಸಿ ನೀರು ಲಭ್ಯವಾಗುತ್ತದೆ. ಹೀಗಾಗಿ, ಮುಂಗಾರು ಹಂಗಾಮಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈಗಾಗಲೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಸ್ಪಷ್ಟವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಾಹಿತಿ ನೀಡಿದೆ. ಆದರೆ, ಬೇಸಿಗೆ ಬೆಳೆ ಕುರಿತು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮಳೆ ಮತ್ತು ಒಳಹರಿವು ಆಧರಿಸಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಈ ಕುರಿತು ತೀರ್ಮಾನ ಮಾಡಲಿದೆ.ಜಲಾಶಯದ ಕ್ರಸ್ಟ್‌ಗೇಟ್ ಅಳವಡಿಸಬೇಕಿರುವುದರಿಂದ ಈ ವರ್ಷ ಜಲಾಶಯದಲ್ಲಿ 80 ಟಿಎಂಸಿ ಮಾತ್ರ ನೀರು ಸಂಗ್ರಹಿಸಲಾಗುವುದು. ಜಲಾಶಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟು ಪ್ರಯಾಣದ ನೀರು ನಿಲ್ಲಿಸಲಾಗುತ್ತಿದೆ.
ಸಿದ್ದಪ್ಪ ಜಾನಕಾರ ಎಇ ತುಂಗಭದ್ರಾ ಕಾಡಾತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವನ್ನು 80 ಟಿಎಂಸಿಗೆ ನಿಗದಿ ಮಾಡಿದ್ದರೂ ಸಹ ಮುಂಗಾರು ಹಂಗಾಮಿನ ಬೆಳೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹಿಂಗಾರು ಬೆಳೆಗೆ ನೀರು ಹರಿಸುವ ಕುರಿತು ಮಳೆಯಾಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ರಾಜಶೇಖರ ಹಿಟ್ನಾಳ, ಸಂಸದ