ಚಿತ್ರದುರ್ಗದಲ್ಲಿ ಮತ್ತೆ ರಸ್ತೆ ಅಗಲೀಕರಣದ ಗುಮ್ಮ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಚಿತ್ರದುರ್ಗ ನಗರದ ಪ್ರಮುಖ ಬೀದಿಯಲ್ಲಿನ ವರ್ತಕರ ಮನದೊಳಕ್ಕೆ ಮತ್ತೆ ರಸ್ತೆ ಅಗಲೀಕರಣದ ಗುಮ್ಮ ಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ವೀರೇಂದ್ರ ಪಪ್ಪಿ, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅವರುಗಳು ಕುಳಿತು ಸಭೆ ನಡೆಸಿ ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ವರ್ತಕರು ಮತ್ತೊಂದು ಸುತ್ತಿನ ಆತಂಕದ ಮಡುವಿಗೆ ನೂಕಲ್ಪಟ್ಟಿದ್ದಾರೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಪ್ರಮುಖ ಬೀದಿಯಲ್ಲಿನ ವರ್ತಕರ ಮನದೊಳಕ್ಕೆ ಮತ್ತೆ ರಸ್ತೆ ಅಗಲೀಕರಣದ ಗುಮ್ಮ ಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ವೀರೇಂದ್ರ ಪಪ್ಪಿ, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅವರುಗಳು ಕುಳಿತು ಸಭೆ ನಡೆಸಿ ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ವರ್ತಕರು ಮತ್ತೊಂದು ಸುತ್ತಿನ ಆತಂಕದ ಮಡುವಿಗೆ ನೂಕಲ್ಪಟ್ಟಿದ್ದಾರೆ.

ಚಳ್ಳಕೆರೆ ವೃತ್ತದಿಂದ ಹೊಳಲ್ಕೆರೆ ರಸ್ತೆಯಲ್ಲಿ ಬರುವ ಕನಕ ವೃತ್ತದವರೆಗೆ ಬರೋಬ್ಬರಿ 42 ಮೀಟರ್ ರಸ್ತೆ (ರಸ್ತೆ ಮಧ್ಯ ಭಾಗದಿಂದ 21 ಮೀಟರ್ ಅಗಲೀಕರಣ) ಅಂದರೆ 140 ಅಡಿ ಉದ್ದದ ವಿಶಾಲವಾದ ರಸ್ತೆ ನಿರ್ಮಾಣದ ಉದ್ದೇಶ ಈ ಅಗಲೀಕರಣ ಒಳಗೊಂಡಿದೆ. ಐತಿಹಾಸಿಕ ಚಿತ್ರದುರ್ಗದ ರಸ್ತೆಗಳು ವಿಶಾಲವಾಗಬೇಕು, ಅಗಲೀಕರಣಗೊಳ್ಳಲೇ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಗೊಳ್ಳುವ ಇಂತಹ ಹುಚ್ಚು ತೀರ್ಮಾನಗಳಿಗೆ ಸರ್ಕಾರದ ಬೊಕ್ಕಸಕ್ಕೆ ಅಷ್ಟೇ ಅಲ್ಲದೇ ವರ್ತಕರಿಗೂ ನಷ್ಟವಾಗುತ್ತಿದೆ. ನೂರಾರು ಕೋಟಿ ರುಪಾಯಿ ಸುರಿದು ಈಗಾಗಲೇ ರಸ್ತೆ, ಡಿವೈಡರ್ ನಿರ್ಮಾಣ ಮಾಡಲಾಗಿದೆ. ಮೊದಲೇ ಇಂತಹದ್ದೊಂದು ತೀರ್ಮಾನ ಕೈಗೊಂಡು ಅಗಲೀಕರಣ ಮಾಡಿ ರಸ್ತೆಗಳ ನಿರ್ಮಿಸಿದ್ದರೆ ಆಕ್ಷೇಪಣೆಗಳು ಇರುತ್ತಿರಲಿಲ್ಲ.

ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಈಗ ಮೂರನೇ ಬಾರಿಗೆ ಅಗಲೀಕರಣಗೊಳ್ಳುತ್ತಿದೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡದ ಮೇಲೆ ಕೆಂಪು ಮಾರ್ಕ್ ಮಾಡುವುದು, ನಂತರ ಕಟ್ಟಡ ಕೆಡವುದು, ಇದಾದ ಬಳಿಕ ಕೆಡವಿದ ಕಟ್ಟಡಗಳ ಮಾಲೀಕರು ಪುನರ್ ನಿರ್ಮಾಣ ಮಾಡಿಕೊಳ್ಳುವುದು ನಡೆದೇ ಇತ್ತು. ಎರಡು ವರ್ಷದ ಹಿಂದೆ ಸಿಸಿ ರಸ್ತೆ ಹಾಗೂ ಡಿವೈಡರ್ ನಿರ್ಮಾಣ ಮಾಡುವಾಗ ವರ್ತಕರು ಕಟ್ಟಡ ತೆರವುಗೊಳಿಸಿದ್ದರು. ಈಗ ಮತ್ತೊಂದು ಸುತ್ತಿಗೆ ಅವರು ಸಜ್ಜಾಗಬೇಕಿದೆ. ಎರಡು ವರ್ಷದ ಹಿಂದೆ 42 ಮೀಟರ್ ಉದ್ದದ ವಿಶಾಲವಾದ ರಸ್ತೆ ಅಗಲ ನಿರ್ಮಾಣ ಮಾಡಲು ಮುಂದಾಗಿದ್ದರೆ ಕಟ್ಟೋಣ, ಕೆಡವೋಣ ಪ್ರಶ್ನೆ ಎದುರಾಗುತ್ತಿರಲಿಲ್ಲ. ಐವತ್ತು ವರ್ಷಗಳ ಹಿಂದೆ ಚಿತ್ರದುರ್ಗ ನಗರವ ಸೀಳಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿತ್ತು. ಚಳ್ಳಕೆರೆ ಟೋಲ್ ಗೇಟ್‌ನಿಂದ ಗಾಂಧಿ ವೃತ್ತದ ಮೂಲಕ ಸಾಗಿ ಅಂತಿಮವಾಗಿ ಮುರುಘಾಮಠದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿತ್ತು. ಲಾರಿಗಳ ಓಡಾಟ ನಗರದ ಮಧ್ಯೆಯೇ ಇತ್ತು. ವಿಶಾಲವಾದ ರಸ್ತೆ ಕೂಡಾ ಇತ್ತು. ಮೊದಲ ಬಾರಿಗೆ ಬೈಪಾಸ್ ಮಾಡಿದಾಗ ಜೆಸಿಆರ್ ಬಡಾವಣೆ ಅಂತ್ಯದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಊರ ಮಧ್ಯೆ ಇರುವ ಹೆದ್ದಾರಿ ನಗರಸಭೆಗೆ ಹಸ್ತಾಂತರವಾದ ನಂತರ ರಸ್ತೆ ಒತ್ತುವರಿ ಶುರುವಾಗಿ ಕಿರಿದಾಯಿತು. ಮೊದಲ ಬಾರಿಗೆ ರಸ್ತೆ ಒತ್ತುವರಿ ಕಾರ್ಯ ಕೈಗೆತ್ತಿಕೊಂಡಾಗಲೇ 42 ಮೀಟರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರೆ ಸಂಚಾರದ ಸಮಸ್ಯೆ ಎದುರಾಗುತ್ತಿರಲಿಲ್ಲ. ಲೋಕೋಪಯೋಗಿ ಇಲಾಖೆಯಲ್ಲಿದ್ದ ಹಳೇ ದಾಖಲೆಗಳ ಹುಡುಕಿ ಜನರ ಮುಂದೆ ಮಂಡಿಸಿದ್ದರೆ ಒತ್ತುವರಿ ಜಗಜ್ಜಾಹೀರು ಆಗುತ್ತಿತ್ತು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹದ್ದೊಂದು ಪ್ರಯತ್ನ ಮಾಡದೆ ಆಯಾ ಸಂದರ್ಭದಲ್ಲಿ ಆಡಿದ ಆಟದಿಂದಾಗಿ ಚಿತ್ರದುರ್ಗದ ರಸ್ತೆಗಳು ಅಗಲವಾಗಲೇ ಇಲ್ಲ. ಎರಡು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮಾಡುವಾಗ ವಿದ್ಯುತ್ ಕಂಬಗಳು ಸ್ಥಳಾಂತರ ಮಾಡಲಾಗಿತ್ತು. ಈಗ ಮತ್ತೆ ಅವುಗಳ ಮತ್ತಷ್ಟು ಹಿಂದಕ್ಕೆ ಒಯ್ಯಬೇಕು. ಹೊಳಲ್ಕೆರೆ ರಸ್ತೆಯಲ್ಲಿ ಚರಂಡಿಗಳನ್ನು ಮುಚ್ಚಿ ಅದರ ಮೇಲೆ ಕಾಂಕ್ರಿಟ್ ಎಳೆದು ರಸ್ತೆಗಳ ಮಾಡಲಾಗಿದೆ. ನಗರಸಭೆ, ಪೊಲೀಸ್ ಠಾಣೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ರಂಗ ಮಂದಿರ, ವಾಲ್ಮೀಕಿ ಭವನ ಸೇರಿದಂತೆ ಹಲವು ಕಟ್ಟಡಗಳು ಕಳೆದ ಬಾರಿಯ ಒತ್ತುವರಿಯಲ್ಲಿ ರಸ್ತೆ ಬಿಟ್ಟು ತುಸು ಹಿಂದಕ್ಕೆ ಹೋಗಿದ್ದವು. ಈಗ 42 ಮೀಟರ್ ರಸ್ತೆ ಪ್ರಶ್ನೆ ಎದುರಾದಾಗ ಈ ಕಟ್ಟಡಗಳು ಮತ್ತಷ್ಟು ಮುಕ್ಕಾಗಲಿವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆಗುವ ಹಾನಿಗೆ ಯಾರು ಹೊಣೆ ಎಂಬ ಪ್ರಶ್ನೆಗಳು ಮೇಲೇಳುತ್ತವೆ. ಗಾಂಧಿ ಸರ್ಕಲ್ ಸೇರಿದಂತೆ ಹಲವು ಕಡೆ ಕಟ್ಟಡಗಳ ಪ್ರಕರಣ ನ್ಯಾಯಾಲಯದಲ್ಲಿವೆ. ಅವುಗಳ ಇತ್ಯರ್ಥ್ಯ ಪಡಿಸಿಕೊಳ್ಳಬೇಕು. ಘನ ನ್ಯಾಯಾಲಯದ ಆದೇಶಗಳು, ಸರ್ಕಾರಿ ಆದೇಶಗಳನ್ನು ಪರಿಶೀಲಿಸಿಕೊಂಡು, ತುರ್ತಾಗಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಸಚಿವರು, ಶಾಸಕರು ಸಮ್ಮುಖದಲ್ಲಿ ಆದ ನಿರ್ಣಯದಂತೆ 42 ಮೀಟರ್ ರಸ್ತೆ ನಿರ್ಮಾಣದ ಕಾರ್ಯಕ್ಕೆ ಪೂರಕವಾಗಿ ಕಟ್ಟಡಗಳಿಗೆ ಜಿಪಿಎಸ್ ಆಧಾರಿತ ಮಾರ್ಕ್ ಹಾಕಲಾಗುತ್ತಿದೆ. ಮಂಗಳವಾರದಿಂದಲೇ ಈ ಕೆಲಸ ಶುರುವಾಗಿದೆ. ನಗರಸಭೆ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಬೀದಿಗಿಳಿದು ಕಟ್ಟಡಗಳಿಗೆ ಮಾರ್ಕ್ ಮಾಡುತ್ತಿದ್ದಾರೆ.-- ರೇಣುಕಾ, ಪೌರಾಯುಕ್ತರು, ನಗರಸಭೆ, ಚಿತ್ರದುರ್ಗ

Share this article