ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆ.ಕೆ.ಮೈದಾನದಲ್ಲಿ ಸೆ.26, 27 ಹಾಗೂ 28 ರಂದು ನಡೆಯುವ ರೈತಾ ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಮಾಡಲಾಗಿದೆ.ಜಿಪಂನ ದೇವರಾಜ ಅರಸು ಸಭಾಂಗಣದಲ್ಲಿ ನಡೆದ ರೈತದಸರಾ ಉಪಸಮಿತಿ ಪೂರ್ವಭಾವಿ ಸಭೆಯಲ್ಲಿ ರೈತ ದಸರಾ ಉಪಸಮಿತಿ ಉಪ ವಿಶೇಷಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ)ಯೂ ಆಗಿರುವ ಭೀಮಪ್ಪ ಕಲಾಳಿ ಮಾತನಾಡಿ, ಸೆ. 26 ರಂದು ಬೆಳಗ್ಗೆ 9.30ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ರೈತ ದಸರೆಯ ಅದ್ಧೂರಿ ಮೆರವಣಿಗೆಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಅವರು ಭಾಗವಹಿಸುವರು. ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆವಹಿಸುವರು.ಬೆಳಗ್ಗೆ 11ಕ್ಕೆ ಜೆ.ಕೆ. ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನ ವನ್ನು ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕ ಕೆ. ಹರೀಶಗೌಡ ಅಧ್ಯಕ್ಷತೆವಹಿಸುವರು.
ಬೆಳಗ್ಗೆ 11.15ಕ್ಕೆ ಜೆಕೆ ಮೈದಾನದ ಅಮೃತ ಮಹೋತ್ಸವ ಸಭಾ ಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ಎಸ್. ವೈದ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಸೆ. 27 ರಂದು ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಸಹ ನಡೆಯಲಿದ್ದು, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಅಂದು ಬೆಳಗ್ಗೆ ಅಂದು ಬೆಳಗ್ಗೆ 6.30 ಗಂಟೆಗೆ ಹಾಲು ಕರೆಯುವ ಸ್ಪರ್ಧೆ ನಡೆಯಲಿದ್ದು ಹಾಗೂ ಸಂಜೆ 5.30 ಕ್ಕೆ ಬಹುಮಾನ ವಿತರಿಸಲಾಗುವುದು.
ಸೆ. 28 ರಂದು ಜೆಕೆ ಮೈದಾನದಲ್ಲಿ ಶ್ವಾನ ಮುದ್ದು ಪ್ರಾಣಿಗಳ ಪ್ರದರ್ಶನ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಚಿವರಾದ ಕೆ. ವೆಂಕಟೇಶ್, ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಕೆ. ಹರೀಶ್‌ಗೌಡ ಪಾಲ್ಗೊಳ್ಳುವರು.ಸಭೆಯಲ್ಲಿ ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ರವಿ, ರೈತ ದಸರಾ ಉಪಸಮಿತಿ ಸಹ ಕಾರ್ಯಾಧ್ಯಕ್ಷರೂ ಆದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎಚ್. ಮಂಜುನಾಥ್, ರೈತ ದಸರಾ ಉಪ ಸಮಿತಿ ಕಾರ್ಯದರ್ಶಿಯೂ ಆದ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ನಾಗರಾಜು ಮೊದಲಾದವರು ಇದ್ದರು.