ಹಾವೇರಿ ಜಿಲ್ಲೆಯಲ್ಲಿ ಹೋರಿ ತಿವಿದು ಮೂವರು ಸಾವು

KannadaprabhaNewsNetwork |  
Published : Oct 24, 2025, 01:00 AM IST
ಹೋರಿ ಬೆದರಿಸುವ ಸ್ಪರ್ಧೆ | Kannada Prabha

ಸಾರಾಂಶ

ದೀಪಾವಳಿ ಬಲಿಪಾಡ್ಯದಂದು ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಮೆರವಣಿಗೆ ವೇಳೆ ಜಿಲ್ಲೆಯ ವಿವಿಧೆಡೆ ನಡೆದ ಪ್ರತ್ಯೇಕ ಮೂರು ಘಟನೆಗಳಲ್ಲಿ ಹೋರಿಗಳು ತಿವಿದು ಮೂವರು ಮೃತಪಟ್ಟಿದ್ದಾರೆ.

ಹಾವೇರಿ: ದೀಪಾವಳಿ ಬಲಿಪಾಡ್ಯದಂದು ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಮೆರವಣಿಗೆ ವೇಳೆ ಜಿಲ್ಲೆಯ ವಿವಿಧೆಡೆ ನಡೆದ ಪ್ರತ್ಯೇಕ ಮೂರು ಘಟನೆಗಳಲ್ಲಿ ಹೋರಿಗಳು ತಿವಿದು ಮೂವರು ಮೃತಪಟ್ಟಿದ್ದಾರೆ.

ಹಾವೇರಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಬುಧವಾರ ನಗರದಲ್ಲಿ ಹೋರಿ ಹಬ್ಬ ಆಯೋಜಿಸಲಾಗಿತ್ತು. ಈ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಯೊಂದು ತಪ್ಪಿಸಿಕೊಂಡು ಬಂದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ದಾನೇಶ್ವರಿನಗರ ನಿವಾಸಿ ಚಂದ್ರಶೇಖರ ಕೋಡಿಹಳ್ಳಿ (70) ಎಂಬುವರಿಗೆ ತಿವಿದ ಪರಿಣಾಮ ಅವರು ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಘಟನೆಯಲ್ಲಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ಎತ್ತುಗಳ ಸಾರ್ವಜನಿಕವಾಗಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ಒಂದು ಎತ್ತು ಬೆದರಿ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಘನೀಸಾಬ ಮಹ್ಮದಹುಸೇನ ಬಂಕಾಪುರ (75) ಎಂಬವರಿಗೆ ತಿವಿದು ಗಾಯಪಡಿಸಿದೆ. ಚಿಕಿತ್ಸೆಗೆಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಸು ನೀಗಿದರು. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆ ಜಿಲ್ಲೆಯ ಹಾನಗಲ್ ತಾಲೂಕು ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಆಯೋಜಿಸಿದ್ದ ಹಟ್ಟಿ ಹಬ್ಬದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಗ್ರಾಮದ ಭರತ ರಾಮಪ್ಪ ಹಿಂಗಮೇರಿ (24) ಮೃತಪಟ್ಟಿದ್ದಾರೆ. ಹೋರಿ ಹಬ್ಬ ನೋಡಲು ಹೋಗಿದ್ದ ಭರತ ರೆಸ್ಟೋರೆಂಟ್ ಒಂದರ ಬಳಿ ನಿಂತಿದ್ದಾಗ ಓಡಿ ಬಂದ ಹೋರಿ ತಿವಿದಿದೆ. ಈ ವೇಳೆ ಕೆಳಗೆ ಬಿದ್ದ ಭರತ ಅವರ ತಲೆಗೆ ತೀವ್ರ ಪೆಟ್ಟಾಗಿ, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಮೃತಪಟ್ಟಿದ್ದಾರೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾದ್ಯಂತ ದೀಪಾವಳಿ ಹಟ್ಟಿ ಹಬ್ಬದಿಂದ ಮುಂದಿನ ಎರಡು ತಿಂಗಳುಗಳ ಕಾಲ ವಿವಿಧೆಡೆ ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ದೊರೆಯಲಿದ್ದು, ಮೊದಲ ದಿನವೇ ಜಿಲ್ಲೆಯ ಮೂರು ಕಡೆಗೆ ಹೋರಿ ಹಬ್ಬ, ಎತ್ತಿನ ಮೆರವಣಿಗೆ ಸಂದರ್ಭದಲ್ಲಿ ಹೋರಿಗಳು ತಿವಿದು ಈ ದುರ್ಘಟನೆ ಸಂಭವಿಸಿದೆ. ಸಂಕ್ರಾಂತಿ ವರೆಗೂ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತವೆ. ಒಂದೊಂದು ಹೋರಿ ಬೆದರಿಸುವ ಸ್ಪರ್ಧೆಯಲ್ಲೂ ಹತ್ತಾರು ಸಾವಿರ ಜನರು ಪಾಲ್ಗೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ಹೋರಿ ಹಬ್ಬದ ಹವಾ ಹೆಚ್ಚುತ್ತಿದೆ. ಒಂದೊಂದು ಹೋರಿಗೂ ಅಸಂಖ್ಯಾತ ಅಭಿಮಾನಿಗಳಿದ್ದು, ಸ್ಪರ್ಧೆ ವೇಳೆ ಕಿಕ್ಕಿರಿದು ಜನ ಸೇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಈ ಹಿಂದೆ ಕೂಡ ಅನೇಕ ದುರ್ಘಟನೆ ನಡೆದಿರುವ ಉದಾಹರಣೆಗಳಿವೆ.

PREV

Recommended Stories

ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ
ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ