ಜಿಟಿಜಿಟಿ ಮಳೆಯಲ್ಲಿ ಹುಲಿಹೆಜ್ಜೆ, ಗಜೇಂದ್ರಗಡದಲ್ಲಿ ಕಳೆಗಟ್ಟಿದ ಮೊಹರಂ

KannadaprabhaNewsNetwork | Published : Jul 16, 2024 12:34 AM

ಸಾರಾಂಶ

ಗಜೇಂದ್ರಗಡ ತಾಲೂಕಿನಲ್ಲಿ ಮೊಹರಂಗೆ ಸಿದ್ಧತೆ ನಡೆದಿದೆ. ಹೆಜ್ಜೆ ಮೇಳ, ರಿವಾಯಿತಿ ಪದಗಳು, ಹುಲಿವೇಷದಂತಹ ಜನಪದ ಕಲೆಗಳು ಈ ಹಬ್ಬದಲ್ಲಿ ಮೇಳೈಸುತ್ತವೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಮೊಹರಂ ಆಚರಣೆಯಲ್ಲಿ ಹೆಜ್ಜೆ ಮೇಳ, ರಿವಾಯಿತಿ ಪದಗಳು, ಹುಲಿವೇಷದಂತಹ ಜನಪದ ಕಲೆಗಳು ಮೇಳೈಸುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಕಲೆಗಳು ಕಣ್ಮರೆಯಾಗುತ್ತಿವೆ. ಆದರೂ ಮೊಹರಂ ಹಬ್ಬದಲ್ಲಿ ಹುಲಿಹೆಜ್ಜೆ, ಕಪ್ಪು ಮುಖದ ದೇವರು ಹಾಗೂ ಪೂಜೆ-ಪುನಸ್ಕಾರಗಳು ಭಕ್ತಿ ಭಾವದಲ್ಲಿ ನಡೆಯುತ್ತವೆ.

ಗ್ರಾಮೀಣ ಭಾಗದಲ್ಲಿ ಮೊಹರಂ ಬಂತೆಂದರೆ ಸಾಕು ತಿಂಗಳು ಮುಂಚಿನಿಂದಲೇ ಓಣಿಗೊಂದು ಹೆಜ್ಜೆ ಮೇಳಗಳು ರಾತ್ರಿಯಿಡಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಯಾರಿ ನಡೆಸುತ್ತಿದ್ದವು. ಮಹಮ್ಮದ ಪೈಗಂಬರ, ಹಸೇನಿ, ಹುಸೇನಿ ಅವರ ಜೀವನ ಚರಿತ್ರೆ ತಿಳಿಸುವ ರಿವಾಯಿತಿ ಪದಗಳ ತಯಾರಿ ನಡೆಯುತ್ತಿತ್ತು. ಇಂದಿನ ಯುವ ಜನತೆ ಇಂತಹ ನಮ್ಮತನವನ್ನು ಸಾರುವ ಕಲೆಗಳಿಂದ ದೂರ ಸರಿಯುತ್ತಿದ್ದಾರೆ. ಆದರೆ ಕೆಲವು ಹಳ್ಳಿಗಳಲ್ಲಿ ಇಂತಹ ಕಲೆ ಉಳಿಸಿ ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆಗಳನ್ನು ಏರ್ಪಡಿಸಿ, ಜನಪದ ಕಲೆಗಳನ್ನು ಉಳಿಸುವ ಕೆಲಸ ನಡೆಸುತ್ತಿದ್ದಾರೆ.

ಹೆಜ್ಜೆ ವಿಧಗಳು: ಮೊಹರಂ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಮುದುಕರು ಸಹ ಕೈಯಲ್ಲೊಂದು ಕೊಲು ಹಿಡಿದು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ವಿವಿಧ ಬಗೆಯ ಹೆಜ್ಜೆಗಳನ್ನು ಆಡುತ್ತಾರೆ. ಅವುಗಳಲ್ಲಿ ಸುತ್ತು ಹೆಜ್ಜೆ, ದಾರಿ ಹೆಜ್ಜೆ, ಪಟ್ಟಿ ಹೆಜ್ಜೆ, ಸಾದಾ ಹೆಜ್ಜೆ, ತೆಕ್ಕೆಜ್ಜೆ, ಹುಡೇದ ಹೆಜ್ಜಿ, ಗಡಾದ ಹೆಜ್ಜೆ, ಹುಸಿ ಹೆಜ್ಜೆ ಪ್ರಮುಖವಾದವು.

ಹರಕೆ ತೀರಿಸಲು ಫಕೀರ, ಅಳ್ಳೊಳ್ಳಿ ಬವ್ವಾ, ಹುಲಿ ವೇಷ: ಮೊಹರಂನಲ್ಲಿ ಯಾವುದೇ ಕಾಯಿಲೆ, ತೊಂದರೆಗಳು ಬಾದಿರಲಿ, ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಪಂಜಾ ದೇವರಿಗೆ (ಅಲೈ ದೇವರಿಗೆ) ಹರಕೆ ಹೊತ್ತ ಸರ್ವಧರ್ಮದವರು ಹಬ್ಬ ಮುಗಿಯುವ ವರೆಗೂ ಮಕ್ಕಳಿಂದ ಹಿಡಿದು ಮುದುಕರು ಸಹ ಹುಲಿ ವೇಷ ಹಾಕಿಕೊಂಡು ಕುಣಿಯುತ್ತಾರೆ. ಹುಲಿಯಷ್ಟು ಶಕ್ತಿ ನಮಗೆ ಪ್ರಾಪ್ತವಾಗಲಿ ಎಂಬುದು ಆಚರಣೆ ಉದ್ದೇಶವಿರಬಹುದು. ಹುಲಿ ವೇಷದ ಬಣ್ಣ ಬಳಿಸಿಕೊಳ್ಳಲು ಹಣ ಇಲ್ಲದವರು ಮೈಗೊಂದು ಹಳೆಯ ಕಂಬಳಿ ಸುತ್ತಿಕೊಂಡು ಮೈತುಂಬ ಮಸಿ ಬಳಿದುಕೊಂಡು ತಲೆಗೊಂದು ಉದ್ದನೆ ಟೋಪಿ ಹಾಕಿಕೊಂಡರೆ ಇನ್ನೂ ಕೆಲವರು ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿ ಕೊರಳಿಗೆ, ಕೈಗೆ ಲಾಡಿ ಕಟ್ಟಿಕೊಂಡು ಭಿಕ್ಷೆ ಬೇಡಿ ಹರಕೆ ತೀರಿಸುತ್ತಾರೆ.

ಐದು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಸಂದಲ ರಾತ್ರಿ, ಕತಲ್ ರಾತ್ರಿಗಳಲ್ಲಿ ಅಲೈ ದೇವರ ಸವಾರಿ ಹಾಗೂ ಪವಾಡಗಳು ನಡೆಯುತ್ತವೆ. ಕೊನೆಯ ದಿನ ಎಲ್ಲ ದೇವರು ಇಲ್ಲಿನ ರಾಜವಾಡೆಗೆ ಭೇಟಿ ಕೊಟ್ಟು ಸಂಜೆ ಹೊಳೆಗೆ ಹೋಗುತ್ತವೆ.

ಹಬ್ಬದ ಆಚರಣೆ: ಚಂದ್ರಮಾನ ವರ್ಷದ ಪ್ರಥಮ ತಿಂಗಳ ಹೆಸರು ಮೊಹರಂ ಎಂದು ಹೇಳುತ್ತಾರೆ. ಮೊಹರಂ ಹಬ್ಬದ ಆಚರಣೆ ತೈಮೂರಲಿಂಗದಿಂದ ಬಂದಿತೆಂದು ಪ್ರತೀತಿ ಇದೆ. ಅಧರ್ಮ, ಅನೀತಿ, ಅತ್ಯಾಚಾರ, ಅನಾಗರಿಕತೆಯ ಜೀವಂತ ನಾಯಕನಾಗಿದ್ದ ಧರ್ಮದ್ರೋಹಿಯಾಗಿದ್ದ ಯಜೀದನೊಂಗಿನ ಹೋರಾಟವು ಅರೇಬಿಯಾದ ರಣಭೂಮಿಯಲ್ಲಿ ಹುತಾತ್ಮರಾದ ಹಜರತ್ ಇಮಾಮ ಹುಸೇನರು ಮತ್ತು ಅವರ ಅಭಿಮಾನಿಗಳು ಹಾಗೂ ಪರಿವಾರದವರು ಬಲಿದಾನಿಗಳ ಪ್ರತೀಕ ಈ ಮೊಹರಂ ಹಬ್ಬವಾಗಿದೆ. ಅಂದು ಕರ್ಬಲಾದಲ್ಲಿ ಪ್ರವಾದಿ ಅವರ ಮೊಮ್ಮಗ ಹ.ಇಮಾಮ ಹುಸೇನ ಹಾಗೂ ಬಂಧುಗಳು, ಮಿತ್ರರು ಹುತಾತ್ಮರಾದರು, ಯಜೀದನ ಸೈನಿಕರು ಇಮಾಮ ಹುಸೇನರ ಹಾಗೂ ಬಂಧು ಮಿತ್ರರ ಪವಿತ್ರ ರುಂಡಗಳನ್ನು ಕಟ್ಟಿಗೆಗೆ ಸಿಕ್ಕಿಸಿ ಓಣಿ-ಓಣಿ ಸುತ್ತಾಡಿದ್ದರು ಎನ್ನುವುದು ಐತಿಹ್ಯ.

ಹಿಂದಕ ತಿಂಗಳಾನಗಂಟ್ಲೆ ಗುಮರಿ, ಗೆಜ್ಜೆ ಕಟ್ಟಿಕೊಂಡು ಓಣಿಗೊಂದು ಹೆಜ್ಜಿ ಮೇಳ ಮಾಡಿಕೊಂಡು ತಯಾರಿ ನಡೆಸಿ ಕಡೆಕ ಕತ್ತಲರಾತ್ರಿ ದಿನ ಜೋಡ ಹಲಿಗಿ ಗುಂಟ ಅರ್ಭಟಾಗಿ ಮಸುತಿ ಮುಂದ ಹೆಜ್ಜಿ ಆಡ್ಕೊಂತ ಬಂದ್ರ ಮಂದಿ ನಿಂತ ನೋಡ್ತಿದ್ರು. ಈಗಿನ್ಯಾರು ಆಡ್ತಾರರೀ, ಅವರ ಹಲಗಿ ನಾದಕ್ಕ, ಹೆಜ್ಜಿಗೆ ತಾಳನ ಇರುದಿಲ್ಲ. ಆಗಿನ ಹೆಜ್ಜಿ ಈಗಿನ್ಯಾರಗೆ ಆಡಾಕ ಬರುದಿಲ್ಲ ರೀ ಎಂದು ರಾಜೂರು ಗ್ರಾಮಸ್ಥ ದಾವಲಸಾಬ ಮುಜಾವರ ಹೇಳುತ್ತಾರೆ.

Share this article