ಕನ್ನಡಪ್ರಭ ವಾರ್ತೆ ಕಾರಟಗಿಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಕೆಲವೇ ಕೆಲವರ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಸಹಕಾರಿ ಕ್ಷೇತ್ರವನ್ನು ರಕ್ಷಿಸಲು ಈಗ ಕಾಲಪಕ್ವಗೊಂಡಿದೆ ಎಂದು ಗಂಗಾವತಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಎಚ್ಚರಿಸಿದರು.ಇಲ್ಲಿನ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವ ಬಲಪಡಿಸುವ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ರೈತರ ಹೆಸರಿನಲ್ಲಿ ಕೆಲವೊಂದು ಸಹಕಾರಿ ಸಂಘಗಳಿಂದ ಮೋಸ ಆಗುತ್ತಿವೆ. ಸಿಗಬೇಕಾದ ಸಹಾಯಧನದಿಂದ ರೈತರು ವಂಚಿತರಾಗುತ್ತಿದ್ದಾರೆ. ಈ ವಂಚನೆ ವ್ಯಾಪ್ತಿ ಮೀತಿ ಮೀರಿದ್ದು, ರೈತರು ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಕಾರಿ ಕ್ಷೇತ್ರ ೫ ಟ್ರಿಲಿಯನ್ ಡಾಲರ್ ಆರ್ಥಿಕತೆ ವಿಸ್ತರಿಸಲು ಕನಸು ಕಂಡಿದ್ದಾರೆ ಎಂದರು.ಆದರೆ, ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಸಹಕಾರಿ ಸಂಘಗಳಿಂದ ಆಗುವ ಆರ್ಥಿಕ ಸಹಾಯ, ಬಡ್ಡಿ ರಿಯಾಯಿತಿ, ಸಹಕಾರಿ ನಿಯಮಗಳನ್ನು ತಿಳಿಸಿ ಅವರನ್ನು ಸಂಘ ಸಂಸ್ಥೆಗಳಲ್ಲಿ ಸದಸ್ಯರನ್ನಾಗಿಸಿಕೊಂಡು ಸರ್ಕಾರಿ ನೀಡುವ ಬಡ್ಡಿ ರಹಿತ ಸಾಲವನ್ನು ಅವರಿಗೆ ನೀಡಿ ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಿದಾಗ ಮಾತ್ರ ಪ್ರಧಾನಿ ಆಶಯ ಈಡೇರುತ್ತದೆ ಎಂದರು.ಸಹಕಾರಿ ಇಲಾಖೆ ಅಧಿಕಾರಿಗಳು ವರ್ಷಕ್ಕೊಮ್ಮೆ ಸಹಕಾರಿ ಸಪ್ತಾಹ ಮಾಡಿ ಉಳಿದ ದಿನ ಕೈಕಟ್ಟಿ ಕೂಡುತ್ತಾರೆ. ರೈತರ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸಲ್ಲದು ಎಂದು ವೇದಿಕೆಯಲ್ಲಿದ್ದ ಸಹಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿ ಬೆಳೆಯುತ್ತಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಸಹಕಾರ ತತ್ವ ವಿಸ್ತರಣೆಗೊಳ್ಳುತ್ತಿದೆ. ರೈತರು ಇನ್ನು ಹೆಚ್ಚು ಸಹಕಾರಿ ಕ್ಷೇತ್ರದಲ್ಲಿ ಭಾಗಿಯಾಗಬೇಕು ಎಂದರು.ಹೊಸಪೇಟೆ ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಉಪನ್ಯಾಸ ನೀಡಿದರು. ಹಿರಿಯ ಸಹಕಾರಿ, ಉದ್ಯಮಿ ಕೆ.ಸಣ್ಣಸೂಗಪ್ಪ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಹಕಾರಿ ಜಿ.ಶ್ರೀಧರ್ ಕೆಸರಟ್ಟಿ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರಣಗೌಡ ಕೊಂತನೂರು ಪೊಲೀಸ್‌ಪಾಟೀಲ್, ಶರಣಪ್ಪ ಹ್ಯಾಟಿ, ಮಾಜಿ ನಿರ್ದೇಶಕರಾದ ಪಂಪಾಪತಿ ಸಾಹುಕಾರ ಸಿಂಗನಾಳ, ಕೆಎಂಎಫ್ ನಿರ್ದೇಶಕ ಎಂ.ಸತ್ಯನಾರಾಯಣ, ಸಿ.ಎಚ್. ಸತ್ಯನಾರಾಯಣ, ನಾಗಲಿಂಗಪ್ಪ ಪತ್ತಾರ, ಅಮರೇಶಪ್ಪ ಕೋಮಲಾಪುರ, ಸಹಕಾರಿ ಸಂಘಗಳ ಉಪನಿಬಂಧಕ ದಸ್ತಗೀರ್ ಅಲಿ, ವಿನಾಯಕ, ಸಜ್ಜನರ ಪ್ರಕಾಶ, ಶರಣಬಸವ, ಸುಜಾತಾ ನವಲಿ, ಚೆನ್ನಬಸವ ಅರಳಿ, ಅಮರಯ್ಯಸ್ವಾಮಿ ಸಾಲಿಮಠ, ಲಿಂಗಯ್ಯಸ್ವಾಮಿ ಇದ್ದರು.ಉತ್ತಮ ಸೌಹಾರ್ದ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಶರಣಬಸಪ್ಪ ಬಿಳೇಎಲೆ, ಶರಣೇಗೌಡ ಬೂದುಗುಂಪಾ, ರಾಜಶೇಖರ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕೂ ಮುನ್ನ ಇಲ್ಲಿನ ಪುರಸಭೆಯಿಂದ ಕಾರ್ಯಕ್ರಮ ಸ್ಥಳದವರಿಗೆ ಸಹಕಾರಿ ಸಪ್ತಾಹ ಜಾಥಾ ನಡೆಯಿತು. ವಿವಿಧ ಸೌಹಾರ್ದ ಸಹಕಾರಿಗಳು ಮತ್ತು ವಿವಿಧ ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು.