ಕಸ್ತೂರಿ ರಂಗನ್ ವರದಿ ಜಾರಿಗೆ 3ನೇ ಬಾರಿ ಅಧಿಸೂಚನೆ

KannadaprabhaNewsNetwork | Published : Sep 11, 2024 1:00 AM

ಸಾರಾಂಶ

ವರದಿಯ ಮೇಲಿನ ನ್ಯೂನ್ಯತೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ವಿಜಯಕುಮಾರ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರಕಾರ 3ನೇ ಬಾರಿ ಅಧಿಸೂಚನೆ ಹೊರಡಿಸಿದ್ದು, ಸಂಬಂಧಪಟ್ಟ ಎಲ್ಲ ಗ್ರಾಮ ಪಂಚಾಯಿತಿಗಳು ಸಾಮನ್ಯ ಸಭೆ ನಡೆಸಿ ಕೇಂದ್ರ ಪರಿಸರ ಇಲಾಖೆಗೆ ಸೂಕ್ತ ವರದಿಯ ಮೇಲಿನ ನ್ಯೂನ್ಯತೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್‌ಕುಮಾರ್ ಮನವಿ ಮಾಡಿದರು.

ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಇನ್ನು ಕೆಲವೇ ದಿನದಲ್ಲಿ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಧಿ ಮುಕ್ತಾಯವಾಗಲಿದ್ದು, ಶೀಘ್ರದಲ್ಲಿ ಸಂಬಂಧಿಸಿದ ಗ್ರಾಪಂ ಗಳು ಸಾಮಾನ್ಯ ಸಭೆಯಲ್ಲಿ ಈ ವರದಿಗೆ ನಿರ್ಣಯ ಮಾಡಿ ಆಕ್ಷೇಪಣೆ ಸಲ್ಲುಸಬೇಕು ಎಂದು ತಿಳಿಸಿದರು.

ವರದಿಯ ಬಫರ್ ಜೋನ್ ವ್ಯಾಪ್ತಿಗೆ ಬರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಸಹ ಆಕ್ಷೇಪಣೆ ಸಲ್ಲಿಸುವ ಮೂಲಕ ಮಲೆನಾಡಿನ ರೈತರ, ಗ್ರಾಮಸ್ಥರ, ಬೆಳೆಗಾರರನ್ನು ವರದಿಯ ಅಪಾಯದಿಂದ ಪಾರಾಗಲು ಸಹಕರಿಸಬೇಕು ಎಂದು ವಿನಂತಿಸಿದರು.

ವಿದೇಶಿ ಪ್ರಾಯೋಜಿತ ಹಣಕಾಸಿನ ಜಾಲಕ್ಕೆ ಬಿದ್ದಿರುವ ಕೆಲವು ಎನ್‌ಜಿಒ ಗಳು ಸ್ವಯಂ ಪ್ರೇರಿತ ಯೋಜನೆಗಳನ್ನು ತಯಾರಿಸಿ ಮಲೆನಾಡಿಗರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಸುತ್ತಿವೆ. ಸುಮಾರು 12 ವರ್ಷದಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಆಗಿನಿಂದಲೂ ಸಾರ್ವಜನಿಕರಿಂದ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಾ ಬಂದಿದ್ದರೂ ನ್ಯೂನ್ಯತೆಗಳನ್ನು ಸರಿಪಡಿಸಿ ಮಲೆನಾಡಿಗರಿಗೆ ಧೈರ್ಯ ತುಂಬುವ ಕೆಲಸವನ್ನು ಯಾವ ಸರಕಾರಗಳು ಮಾಡಲಿಲ್ಲ. ಆದರೆ, ಯೋಜನೆಯನ್ನು ಪದೇಪದೆ ಜಾರಿ ಮಾಡುತ್ತಿದೆ ಎಂದು ದೂರಿದರು.

ವಿಶ್ವದಲ್ಲಿರುವ ಹಲವು ಕೆಂಪು ವಲಯದ ಕೈಗಾರಿಕೆಗಳು ಅದರಲ್ಲೂ ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪರಿಸರವನ್ನು ಸಂಪೂರ್ಣ ಹಾಳು ಮಾಡಲಾಗಿದೆ. ಈಗ ಮುಂದುವರಿಯುತ್ತಿರುವ ಭಾರತದಂತಹ ದೇಶಗಳಲ್ಲಿ ಪರಿಸರ ರಕ್ಷಣೆ ಮಾಡುವಂತೆ ಒತ್ತಡ ಹೇರಿ ಹಣಕಾಸಿನ ನೆರವು ನೀಡುತ್ತಾ ಪಶ್ಚಿಮಘಟ್ಟ, ಮಲೆನಾಡಿಗರ ಬದುಕು ನಾಶ ಮಾಡಲು ಹೊರಟಿದ್ದಾರೆ. ಕಸ್ತೂರಿ ರಂಗನ್ ವರದಿಯು ಉಪಗ್ರಹ ಆಧಾರಿತ ಸರ್ವೇಯಾಗಿದ್ದು ಇದರಿಂದ ರೈತರ ಹೊಲಗದ್ದೆ ತೋಟ ಎಲ್ಲವನ್ನೂ ಅರಣ್ಯ ಎಂದು ಘೋಷಿಸಲಾಗಿದೆ ಎಂದು ಆರೋಪಿಸಿದರು.

ಹೀಗಾಗಿ ದೈಹಿಕ ಸರ್ವೇ ನಡೆಸಿ ಅರಣ್ಯ ಮತ್ತು ಸಾರ್ವಜನಿಕ ಜಮೀನು ಊರು-ಕೇರಿ ಗಡಿ ಗುರುತಿಸಬೇಕು. ಈ ವರದಿ ಅಂತಿಮಗೊಳ್ಳುವ ಪ್ರದೇಶದಿಂದ 10 ಕಿಮೀ ಬಫರ್‌ಜೋನ್ ಘೋಷಣೆಯಾಗಿದ್ದು, ಇದರಿಂದ ನಗರ ಪಟ್ಟಣ ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಬಫರ್ ಜೋನ್ ಕಿಮೀ ಮಿತಿಗೊಳಿಸಬೇಕು. ಸಂಜಯ್‌ಕುಮಾರ್ ನೇತೃತ್ವದ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆ ಅರಿಯಬೇಕು. ವರದಿಯನ್ನು ಸ್ಥಳೀಯ ಭಾಷೆಯಲ್ಲಿ ಮುದ್ರಿಸಿ ವಿತರಿಸಬೇಕು. ಈ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಜನರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂದರ್ಭದ 3 ತಿಂಗಳ ಅವಧಿಯಲ್ಲಿ ಕಾರ್ಖಾನೆಗಳು ಮುಚ್ಚಿದ್ದರಿಂದ ಪರಿಸರ ಸ್ವಚ್ಛಗೊಂಡು ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಕಡಿಮೆಯಾಗಿತ್ತು. ಈ ಸತ್ಯವನ್ನು ಅಧ್ಯಯನ ಮಾಡದೆ ಬೋಳು ಗುಡ್ಡಗಳಲ್ಲಿ ಗಿಡ ನೆಟ್ಟು, ಮರ ಬೆಳೆಸಿ ಅರಣ್ಯ ಪೂರಕ ಕೃಷಿ ಮಾಡಿ, ಶೇ.50 ರಷ್ಟು ಕೃತಕ ಅರಣ್ಯ ಸೃಷ್ಠಿಸಿ, ತನ್ನದೇ ಅದ ಕೊಡುಗೆ ನೀಡುತ್ತಿರುವ ಮಲೆನಾಡಿಗರ ಪರಿಶ್ರಮದ ಕೊಡುಗೆಯ ಬಗ್ಗೆ ಪರಿಸರ ಇಲಾಖೆ, ಜನ ಪ್ರತಿನಿಧಿಗಳು, ಸರ್ಕಾರ ಹಾಗೂ ಪರಿಸರ ಕಾಳಜಿ ವಹಿಸುವವರಿಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಸಮಾಜದ ಈ ಎಲ್ಲಾ ಸಮಸ್ಯೆಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಜಾಗತಿಕ ತಾಪಮಾನಕ್ಕೆ ಕಾರಣ ಯಾರು ಎಂಬುದನ್ನು ಸರ್ಕಾರ ಜನತೆಗೆ ತಿಳಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಲೆನಾಡು ಭಾಗದ ವ್ಯಾಪ್ತಿಗೆ ಬರುವ 40 ಶಾಸಕರು ಹಾಗೂ ಸಂಸದರನ್ನೊಳಗೊಂಡ ಸಭೆ ನಡೆಸಿ ಕಸ್ತೂರಿರಂಗನ್ ವರದಿ ಬಗ್ಗೆ ಮನವರಿಕೆ ಮಾಡಲು ನಿರ್ಧರಿಸಿರುವ ಜೊತೆಗೆ ಹೋರಾಟದ ಮೂಲಕ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಕೆ.ಕೆ ರಘು, ರವಿಕುಮಾರ್, ಮುನ್ನ, ಮೈನ್, ಪ್ರವೀಣ್, ಪ್ರಭು ಉಪಸ್ಥಿತರಿದ್ದರು.

Share this article