ಕನ್ನಡಪ್ರಭವಾರ್ತೆ ನಾಯಕನಹಟ್ಟಿ
ಮಾರ್ಚ್ 26ರಂದು ನಡೆಯಲಿರುವ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾರಥೋತ್ಸವಕ್ಕೆ ಮೂರು ವಾರಗಳ ಕಾಲ ಇದ್ದರೂ ಪೂರ್ವಸಿದ್ಧತೆಯೇ ಆರಂಭಗೊಂಡಿಲ್ಲ. ಫೆ.26ರಂದು ಜಿಲ್ಲಾಡಳಿತ ಪ್ರತಿವರ್ಷದಂತೆ ಜಾತ್ರಾ ಪೂರ್ವಸಿದ್ಧತೆ ಸಭೆಯನ್ನು ಕಾಟಾಚಾರಕ್ಕೆ ನಡೆಸಿದಂತಿದೆ. ಸಭೆ ನಡೆದು ಎರಡು ವಾರಗಳಾದರೂ ಜಿಲ್ಲಾಡಳಿತ ಅಧಿಕಾರಿಗಳು ಹಟ್ಟಿಯತ್ತ ಕಣ್ಣುಹಾಯಿಸಿಲ್ಲ. ಹಾಗಾಗಿ, ಈ ಬಾರಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಮಹಾರಥೋತ್ಸವ ಪೂರ್ವ ಸಿದ್ಧತೆಗೆ ಮಂಕುಕವಿದಿದೆ.ಗ್ಯಾರಂಟಿ ಯೋಜನೆಯಡಿ ಸಾರಿಗೆ ಉಚಿತವಾಗಿರುವ ಕಾರಣ ಮಹಿಳಾ ಭಕ್ತರ ದಂಡು ದುಪ್ಪಟ್ಟು ಆಗುವ ಲಕ್ಷಣಗಳಿವೆ. ಅಷ್ಟೇ ಅಲ್ಲದೇ ದುಬಾರಿ ಜಕಾತಿ ವಸೂಲಿಯಿಂದಾಗಿ ಬೇಸತ್ತಿದ್ದ ವ್ಯಾಪಾರಿಗಳಿಗೆ ಈ ಬಾರಿ ಜಕಾತಿ ವಸೂಲಿ ಇಲ್ಲದೇ ಇರುವುದರಿಂದ ಉತ್ಸುಕರಾಗಿದ್ದಾರೆ. ಹಾಗಾಗಿ, ಈ ಬಾರಿ ಭಕ್ತರು ಹೆಚ್ಚಾಗುವ ಸಾಧ್ಯತೆ ಇದ್ದು, ಕನಿಷ್ಠ 10 ಲಕ್ಷ ಭಕ್ತರು ರಥೋತ್ಸವಕ್ಕೆ ಸೇರುವ ನಿರೀಕ್ಷೆ ಇದೆ. ಇಷ್ಟು ಸಂಖ್ಯೆ ಭಕ್ತರಿಗೆ ಮೂಲಸೌಲಭ್ಯ ಕೊರತೆ ನೀಗಿಸಲು ಜಿಲ್ಲಾಡಳಿತ ಮುಂದಾಗಬೇಕಿತ್ತು. ಜಿಲ್ಲಾಧಿಕಾರಿಯೂ ಇಷ್ಟೊತ್ತಿಗೆ ಕನಿಷ್ಟ ಪಟ್ಟಣಕ್ಕೆ ಮೂರು ಬಾರಿಯಾದರೂ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಬೇಕಿತ್ತು ಎನ್ನುತ್ತಾರೆ ಭದ್ರಾ ಮೇಲ್ದಂಡೆ ನಾಯಕನಹಟ್ಟಿ ಹೋಬಳಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬೋರಸ್ವಾಮಿ.
ಶಾಶ್ವತ ಕುಡಿಯುವ ನೀರು ಕೊಡಿ:ಈ ಭಾಗಕ್ಕೆ ಬರ ಆವರಿಸಿ ಎರಡೂವರೆ ದಶಕ ಕಳೆದಿದೆ. ಭಕ್ತರ ದಾಹ ನೀಗಿಸುತ್ತಿದ್ದ ಹಿರೆಕೆರೆ, ಚಿಕ್ಕಕೆರೆ ಬತ್ತಿವೆ. ಪರಿಣಾಮ ಸಾವಿರಾರು ಎಕರೆ ಹಸಿರು ತೋಟಗಳು ನಾಶಗೊಂಡಿವೆ. ಬಾವಿಗಳು ಒಣಗಿವೆ. ಈ ಹಿಂದೆ ಶತಮಾನ ಕಾಲಾವಧಿ ಇಲ್ಲಿ ಜಲಮೂಲ ಸಮೃದ್ಧವಾಗಿತ್ತು. ನೀರು, ನೆರಳು ದಟ್ಟವಾಗಿತ್ತು. ಜಾತ್ರೆ ಒಂದು ತಿಂಗಳು ಇರುವಂತೆಯೇ ತೋಟದ ಮಾಲೀಕರೇ ಭಕ್ತರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡುತ್ತಿದ್ದರು. ತಂಪಾದ ನೆರಳಿನಲ್ಲಿ ಲಕ್ಷಾಂತರ ಭಕ್ತರು ನೆಲೆಸಿ ಜಾತ್ರೆಗೆ ಮೆರುಗು ತರುತ್ತಿದ್ದರು. ನೀರು, ನೆರಳಿನ ವ್ಯವಸ್ಥೆ ಮುಖ್ಯವಾಗಿ ಸಿಗುತ್ತಿದ್ದರಿಂದ ಭಕ್ತರು ಜಾತ್ರೆಗೆ ಜೋಡೆತ್ತು ಬಂಡಿಗಳಲ್ಲೇ ಬರುತ್ತಿದ್ದರು. ಈಗ ಜಿಲ್ಲಾಡಳಿತ ಜನರಿಗೆ ಕುಡಿವ ನೀರಿನ ವ್ಯವಸ್ಥೆ ಸಮಪರ್ಕವಾಗಿ ಮಾಡುತ್ತಿಲ್ಲ. ಇನ್ನು ದನಗಳಿಗೆ ಕುಡಿವ ನೀರು ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಾರೆ ಭದ್ರಾ ಮೇಲ್ದಂಡೆ ನಾಯಕನಹಟ್ಟಿ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ.
ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ಶಾಶ್ವತವಾಗಿ ಕುಡಿವ ನೀರು ಪೂರೈಕೆ ಟ್ಯಾಂಕರ್‌ಗಳನ್ನು ನಿರ್ಮಿಸಿದರೆ ಭಕ್ತರ, ಪಟ್ಟಣ ನಿವಾಸಿಗಳ ದಾಹವನ್ನು ನೀಗಿಸಿ ನೀರಿನ ಅಭಾವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು. ಪ್ರತಿವರ್ಷ ತಾತ್ಕಾಲಿಕ ನೀರು ಪೂರೈಕೆ ಟ್ಯಾಂಕರ್ ಗಳನ್ನು ಬಹುವೆಚ್ಚದಲ್ಲಿ ಕಲ್ಪಿಸಿದರೂ ಭಕ್ತರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲರಾಗುತ್ತಿದ್ದೇವೆ. ಪ್ರತಿವರ್ಷ ಜಾತ್ರಾ ರಥೋತ್ಸವದ ಸಂದರ್ಭದಲ್ಲಿ ನೀರು ಪೂರೈಕೆಗಾಗಿಯೇ ವೆಚ್ಚ ಮಾಡುವುದು ಕೈಬಿಟ್ಟು ಶಾಶ್ವತ ಯೋಜನೆ ಕಡೆ ಜಿಲ್ಲಾಡಳಿತ, ಶಾಸಕ, ಸಚಿವರು ಗಮನ ನೀಡಬೇಕಿದೆ ಎಂದು ಜಿ.ಬಿ.ಮುದಿಯಪ್ಪ ಅವರು ಹೇಳಿದ್ದಾರೆ.ಮುಗಿಯದ ಸೇತುವೆ ಕಾಮಗಾರಿ; ಸಿಗದ ಮಳಿಗೆಗಳು
ಲೊಕೋಪಯೋಗಿ ಇಲಾಖೆ ನಾಗರಕಟ್ಟೆ ಸಮೀಪದ ಹಳ್ಳದ ರಸ್ತೆಗೆ ನಿರ್ಮಿಸಿರುವ ಸೇತುವೆ ಆರು ತಿಂಗಳಿಂದ ಸಂಚಾರಕ್ಕೆ ಮುಕ್ತವಾಗಿಲ್ಲ. ₹1.50 ಕೋಟಿ ವೆಚ್ಚದ ಸಣ್ಣ ಸೇತುವೆ ಕಾಮಗಾರಿ ವರ್ಷದುದ್ದಕ್ಕೂ ನಡಿದಿದೆ. ಜಾತ್ರಾ ಸಂದರ್ಭದಲ್ಲಾದರೂ ಸಂಚಾರಕ್ಕೆ ಮುಕ್ತವಾಗಲಿದೆಯೇ ಎಂದರೆ ಇದುವರೆಗೂ ಕಾಮಗಾಗಿ ಮುಗಿದಂತೆ ಕಾಣುತ್ತಿಲ್ಲ. ಲೋಕೋಪಯೋಗಿ ಇಲಾಖೆಯೇ ಕೈಗೊಂಡಿರುವ ಮಳಿಗೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳು ಕಳೆದರೂ, ದೇಗುಲ ಆಡಳಿತಕ್ಕೆ ವಹಿಸಿಕೊಟ್ಟಿಲ್ಲ. ಹಾಗಾಗಿ, ವ್ಯಾಪಾರಿಗಳಿಗೆ ಈ ಬಾರಿಯ ಜಾತ್ರಾ ಉತ್ಸವಕ್ಕೆ ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಇಂಥಾ ಪ್ರಮುಖ ಸಮಸ್ಯೆಗಳನ್ನಾದರೂ ಕೂಲಂಕಷವಾಗಿ ಪರಿಶೀಲಿಸಿ ಬಗೆಹರಿಸಿದ್ದರೆ ಭಕ್ತರಿಗೆ ಅನುಕೂಲ ಆಗಲಿದೆ ಎಂದು ದಲಿತ ಮುಖಂಡ ಚೌಡಪ್ಪ ಹೇಳಿದರು.ಶಿಖರಕ್ಕೆ ಸುಣ್ಣಬಣ್ಣ ಏಕಿಲ್ಲ?
ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಶ್ರೀಗಳ ಗದ್ದುಗೆ ಒಳಮಠದ ಶಿಖರ ಪ್ರಮುಖ ಆಕರ್ಷಣೆ ಕೇಂದ್ರವಾಗಿರುತ್ತದೆ. ಆದರೆ, ಈ ಶಿಖರ ಮಾತ್ರ ಒಂದು ದಶಕದಿಂದ ಸುಣ್ಣಬಣ್ಣ ಕಾಣದೆ ಆಕರ್ಷಣೆ ಕಳೆದುಕೊಂಡಿದೆ. ದೇಗುಲ ಸ್ಥಳೀಯ ಆಡಳಿತ ಕಾರ್ಯವೈಖರಿಯನ್ನು ಈ ಶಿಖರದ ಅವ್ಯವಸ್ಥೆ ಪ್ರಶ್ನಿಸುತ್ತದೆ. ಕೋಟಿಗಟ್ಟಲೇ ಹಣ ಹೊಂದಿದ್ದರೂ, ಶಿಖರಕ್ಕೆ ಸುಣ್ಣಬಣ್ಣ ಏಕೆ ಮಾಡಿಸಿಲ್ಲ? ದೇಗುಲ ಸಮಿತಿ ಅಸ್ತಿತ್ವದಲ್ಲಿ ಇಲ್ಲದಿರುವುದೇ ಇಂಥಾ ಅವ್ಯವಸ್ಥೆಗೆ ಕಾರಣವಾಗಿದೆ ಎನ್ನುತ್ತಾರೆ ಪಟ್ಟಣದ ಮುಖಂಡರಾದ ದೊರೆ ತಿಪ್ಪೇಸ್ವಾಮಿ.ಗ್ರಾಮೀಣ ರಸ್ತೆಗಳ ಜಂಗಲ್ ತೆರವು ನಿರ್ಲಕ್ಷಿಸಲಾಗಿದೆ. ಇದರಿಂದ ಜಾತ್ರೆಗೆ ಎತ್ತಿನ ಬಂಡಿಗಳಲ್ಲಿ ಬರುವ ಭಕ್ತರಿಗೆ ತೊಂದರೆ ಆಗುತ್ತದೆ. ಪೂರ್ವಸಿದ್ಧತೆ ಸಭೆಯಲ್ಲಿ ಭರವಸೆ ನೀಡಿದ ಅಧಿಕಾರಿಗಳು ಹತ್ತು ದಿನಗಳಾದರೂ ಸುಳಿದಿಲ್ಲ.
ಬೋರಸ್ವಾಮಿ ಕಾರ್ಯಾಧ್ಯಕ್ಷ, ಭದ್ರಾ ಮೇಲ್ದಂಡೆ ನಾಯಕನಹಟ್ಟಿ ಹೋಬಳಿ ಹೋರಾಟ ಸಮಿತಿಬಿಗಿ ಬಂದೋಬಸ್ತ್ ನೆಪದಲ್ಲಿ ಭಕ್ತರನ್ನು ಪೊಲೀಸ್ ಇಲಾಖೆ ಹೈರಾಣ ಆಗಿಸುತ್ತಾ ಬರುತ್ತಿದೆ. ಸಣ್ಣಪುಟ್ಟ ವಾಹನಗಳನ್ನು ಪಟ್ಟಣದಿಂದ ನಾಲ್ಕು ಕಿ.ಮೀ. ದೂರ ತಡೆಹಿಡಿಯಬಾರದು. ಮಕ್ಕಳು, ವೃದ್ಧರು ಇರುವ ವಾಹನಗಳನ್ನು ಪಟ್ಟಣದೊಳಗೆ ಬಿಟ್ಟು ಸಹಕರಿಸಬೇಕು.
ಜಿ.ಬಿ.ಮುದಿಯಪ್ಪ, ಅಧ್ಯಕ್ಷ,ಭದ್ರಾ ಮೇಲ್ದಂಡೆ ನಾಯಕನಹಟ್ಟಿ ಹೋಬಳಿ ಹೋರಾಟ ಸಮಿತಿ